ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು. ದಿನಾಂಕ : 01-08-2024ರ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ : 02.08.2024ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.
Udupi District
ಬೈಂದೂರು ಮತ್ತು ಕುಂದಾಪುರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
ಕುಂದಾಪುರ : ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬೈಂದೂರು ಮತ್ತು ಕುಂದಾಪುರ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಇಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಬೈಂದೂರು ಮತ್ತು ಕುಂದಾಪುರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ನಿನ್ನೆ ತಡರಾತ್ರಿ ಕುಂದಾಪುರದಲ್ಲಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶಕ್ಕೆ ಜಿಲ್ಲಾಧಿಕಾರಿ ಇಂದು ಭೇಟಿ ನೀಡಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಿನ್ನ ರಾತ್ರಿಯ ಮಳೆಯಿಂದ ಮನೆಗಳಿಗೆ ನೀರು ನುಗ್ಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ನಿನ್ನೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಇವತ್ತು ನಾನು ಇಲ್ಲಿಗೆ ಬಂದಿದ್ದು, ಮಳೆನೀರು ಸಮರ್ಪಕವಾಗಿ ಹರಿದು ಹೋಗುವ ಸ್ಥಳದಲ್ಲಿ ಕಸಕಡ್ಡಿಗಳು ತುಂಬಿದ್ದು ಅವುಗಳನ್ನು ಸಮರ್ಪಕ ರೀತಿಯಲ್ಲಿ ಸ್ವಚ್ಛಗೊಳಿಸುವಂತೆ ಹೇಳಿದ್ದೇನೆ. ನಿರಂತರ ಮಳೆಯಿಂದ ತುಂಬಾ ಕಡೆ ಸಮಸ್ಯೆಗಳಾಗಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಮಳೆ ಮತ್ತೆ ಅಬ್ಬರಿಸತೊಡಗಿದೆ. ಈಗಾಗಲೇ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಹರಿಯುವ ನದಿಗಳು ಮತ್ತೆ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿ-ಕಾರ್ಕಳದಲ್ಲಿ ನಿರಂತರ ಮಳೆಯಾಗುತ್ತಿದೆ. ಕುಬ್ಜಾ ನದಿ ಮತ್ತೆ ತುಂಬಿ ಹರಿಯುತ್ತಿದೆ. ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲಕ್ಕೆ ನೀರು ನುಗ್ಗಿದ್ದು. ಈ ವರ್ಷದಲ್ಲಿ ಎರಡನೇ ಬಾರಿಗೆ ನದಿ ನೀರು ದೇಗುಲದ ಗರ್ಭಗುಡಿಗೆ ಪ್ರವೇಶಿಸಿದೆ. ನಿನ್ನೆ ರಾತ್ರಿ 12.30 ರಿಂದ 2 ಗಂಟೆಯವರೆಗೆ ದೇಗುಲಕ್ಕೆ ನದಿ ನೀರು ಪ್ರವೇಶಿಸಿ ದುರ್ಗಾಪರಮೇಶ್ವರಿ ದೇವಿಯ ಪಾದ ಸ್ಪರ್ಶಿಸಿದೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನದಿಯ ಮಟ್ಟ ಇಳಿಕೆಯಾಗಿ ನೀರು ಸಂಪೂರ್ಣ ಇಳಿದು ಹೋಗಿದೆ.
ಆ.3ರಂದು ‘ಕೃತಕ ನೆರೆ ಹಾವಳಿ-ಬೆಂಕಿ ದುರಂತ-ಭೂಕುಸಿತ : ಒಂದು ಚರ್ಚೆ’ ಕಾರ್ಯಕ್ರಮ: ರಾಜೇಶ್ ಶೆಟ್ಟಿ ಅಲೆವೂರು
ಉಡುಪಿ : ಪ್ರಸ್ತುತ ಎಲ್ಲಾ ಕಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ದುರಂತಗಳಿಗೆ ಕಾರಣ ಹಾಗೂ ಎಚ್ಚರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಆ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.

ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೇವಲ ಪತ್ರಕರ್ತರಿಗೆ ಕಾರ್ಯಕ್ರಮ ನಡೆಸುವುದಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದ್ಧತೆ ಹಾಗೂ ಕಳಕಳಿಯೊಂದಿಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿರುವ ಪ್ರಾಕೃತಿಕ ವಿಕೋಪಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಉಡುಪಿ ನಗರದಲ್ಲಿ ಪ್ರತಿವರ್ಷ ಬಾಧಿಸುತ್ತಿರುವ ಕೃತಕ ನೆರೆ, ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿರುವ ಬೆಂಕಿ ದುರಂತಗಳು ಹಾಗೂ ಜಿಲ್ಲೆ ಸೇರಿದಂತೆ ವಿವಿಧ ಕಡೆ ಸಂಭವಿಸುತ್ತಿರುವ ಭೂಕುಸಿತದ ಕುರಿತು ಚರ್ಚೆ ನಡೆಸ ಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಹಾಗೂ ಹಿರಿಯ ಭೂಗರ್ಭ ಶಾಸ್ತ್ರಜ್ಞ ಮಣಿಪಾಲದ ಡಾ.ಉದಯ ಶಂಕರ್ ಈ ಮೂರು ವಿಷಯಗಳ ಕುರಿತು ಚರ್ಚಿಸಲಿರುವರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮಾತ್ರವಲ್ಲದೆ ಆಸಕ್ತ ಸಾರ್ವಜನಿಕರು ಕೂಡ ಭಾಗವಹಿಸಬಹುದಾಗಿದೆ ಎಂದವರು ಮಾಹಿತಿ ನೀಡಿದರು
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿ ರಹೀಂ ಉಜಿರೆ ಉಪಸ್ಥಿತರಿದ್ದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಅತ್ತಾವರ, ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾಗಿ ಡಾ. ಚಕ್ರಪಾಣಿ ಎಂ ನೇಮಕ
ಮಂಗಳೂರು : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಅತ್ತಾವರ, ಮಂಗಳೂರಿನ ನೂತನ ವೈದ್ಯಕೀಯ ಅಧೀಕ್ಷಕರನ್ನಾಗಿ ಡಾ. ಚಕ್ರಪಾಣಿ ಎಂ. ಅವರನ್ನು ಮಾಹೆ ಮಣಿಪಾಲವು ನೇಮಕ ಮಾಡಿದೆ. ದಕ್ಷಿಣ ಕನ್ನಡದ ಅತ್ಯಂತ ಗೌರವಾನ್ವಿತ ಹಿರಿಯ ವೈದ್ಯರಾಗಿರುವ ಇವರು, ಆಸ್ಪತ್ರೆಯ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಉತ್ಕೃಷ್ಟತೆಯನ್ನು ಹೆಚ್ಚಿಸುವ ಭರವಸೆ ನೀಡುವ ಪರಿಣತಿ ಮತ್ತು ನಾಯಕತ್ವದ ಅನುಭವ ಹೊಂದಿದ್ದಾರೆ. ಅವರ ಅಸಾಧಾರಣ ಕ್ಲಿನಿಕಲ್ ಕೌಶಲ್ಯಗಳಿಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಚಿಕಿತ್ಸಾ ಮೂಲಾಧಾರವಾಗಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಅವರ ಕೊಡುಗೆಗಳು ಅವರಿಗೆ ವ್ಯಾಪಕವಾದ ಮನ್ನಣೆ ಮತ್ತು ಗೌರವವನ್ನು ತಂದುಕೊಟ್ಟಿವೆ.
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ಉನ್ನಿಕೃಷ್ಣನ್ ಅವರು ಡಾ.ಚಕ್ರಪಾಣಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, “ಇವರು ಹಲವಾರು ನಾಯಕತ್ವದ ಸ್ಥಾನಗಳಿಂದ ಗುರುತಿಸಲ್ಪತ್ತಿದ್ದಾರೆ, ಈ ಹಿಂದೆ ವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರ ನಾಯಕತ್ವವು ವಿಭಾಗದ ಮತ್ತು ಅದರಾಚೆಗಿನ ವೈದ್ಯಕೀಯ ಅಭ್ಯಾಸದ ಗುಣಮಟ್ಟವನ್ನು ರೂಪಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಎಂಸಿ ಅತ್ತಾವರ ಆಸ್ಪತ್ರೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಾರ್ಗದರ್ಶನವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ ಮತ್ತು ಅವರ ಪ್ರಯತ್ನಗಳಲ್ಲಿ ಪ್ರತಿ ಯಶಸ್ಸನ್ನು ಬಯಸುತ್ತೇವೆ” ಎಂದಿದ್ದಾರೆ.
ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಡಾ.ಚಕ್ರಪಾಣಿಯವರು, ವೈದ್ಯಕೀಯ ಕ್ಷೆತ್ರದಲ್ಲಿ ಸಮುದಾಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಸಹಯೋಗ ಮತ್ತು ನಿರಂತರ ಸುಧಾರಣೆಯ ಮನೋಭಾವವನ್ನು ಬೆಳೆಸಿದ್ದಾರೆ. ಕ್ರಿಟಿಕಲ್ ಕೇರ್ ಮೆಡಿಸಿನ್ನ ಪ್ರವರ್ತಕರಾಗಿ, ಅವರು ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ನ ಮಂಗಳೂರು ಅಧ್ಯಾಯದ ಅಧ್ಯಕ್ಷರಾಗಿ, ಕ್ರಿಟಿಕಲ್ ಕೇರ್ ಸೇವೆಗಳಲ್ಲಿ ಪ್ರಗತಿ ಮತ್ತು ಹೊಸ ಮಾನದಂಡಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕ್ಲಿನಿಕಲ್ ಮತ್ತು ನಾಯಕತ್ವದ ಜೊತೆಗೆ, ಅವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅವರ ಶೈಕ್ಷಣಿಕ ಕೊಡುಗೆಗಳು, ಮುಂದಿನ ತಲೆಮಾರುಗಳ ವೈದ್ಯಕೀಯ ವೃತ್ತಿಪರರಿಗೆ ಮಾರ್ಗದರ್ಶಕರಾಗಿ, ಮೂರು ಪಿಎಚ್ಡಿ ವಿದ್ವಾಂಸರಿಗೆ ಮಾರ್ಗದರ್ಶಕರಾಗಿ ಮತ್ತು 82 ಪ್ರಕಟಣೆಗಳನ್ನು ಪ್ರಕಟಿಸುವುದರ ಮೂಲಕ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಶ್ರೀಮಂತಗೊಳಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕರಾಗಿ ಅವರ ನೇಮಕವು ಅತ್ತಾವರದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೊಸ ಅಧ್ಯಾಯವನ್ನು ಬರೆಯಲಿದೆ. ವೈದ್ಯಕೀಯ ಉತ್ಕೃಷ್ಟತೆಗೆ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಸಮರ್ಪಣೆ ನಿಸ್ಸಂದೇಹವಾಗಿ ಆರೋಗ್ಯ ಸೇವೆಗಳಲ್ಲಿ ಆಸ್ಪತ್ರೆಯ ಖ್ಯಾತಿಯನ್ನು ಹೆಚ್ಚಿಸಲಿದೆ.
ಮಾನವ ಕಳ್ಳಸಾಗಾಣಿಕೆ ಪ್ರಕರಣಗಳಾಗದಂತೆ ಜಾಗೃತೆ ವಹಿಸಿ : ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ : ಮಾನವ ಕಳ್ಳ ಸಾಗಾಣಿಕೆಯು ಅತ್ಯಂತ ಗಂಭೀರ ವಿಚಾರವಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಮೂಲಕ ಇದನ್ನು ತಡೆಗಟ್ಟುವಲ್ಲಿ ಪೊಲೀಸ್, ಕಾರ್ಮಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಅತ್ಯಂತ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಇಂಥ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ‘ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ’ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಮಾತನಾಡುತ್ತಿದ್ದರು.
ಮಾನವ ಅಂಗಾಂಗಗಳಿಗಾಗಿ ವಿವಿಧ ರೀತಿಯ ಆಮಿಷ ತೋರಿಸಿ ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ. ಬಡವರಿಗೆ ಹಾಗೂ ಹಣದ ಅಗತ್ಯ ಇರುವವರಿಗೆ ಆಮಿಷವೊಡ್ಡಿ ಇಂತಹ ಕೃತ್ಯಗಳಿಗೆ ತೊಡಗಿಸಲಾಗುತ್ತಿದೆ. ಇಂಥ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ, ಜಾಗತಿಕವಾಗಿ ಸಮಾಜವನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಬಲವಂತವಾಗಿ ದೈಹಿಕ ಶೋಷಣೆ, ಬಾಲಕಾರ್ಮಿಕತೆ, ಭಿಕ್ಷಾಟನೆ, ಗೃಹಬಳಕೆ, ಬಾಲ್ಯವಿವಾಹ, ಅಂಗಾಂಗ ಕಸಿಯುವಿಕೆ, ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ಇಂಥ ಕೃತ್ಯ ಮಾಡಲಾಗುತ್ತದೆ. ಇದೊಂದು ಸಂಘಟಿತ ಅಪರಾಧವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಇದರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಅಂಥವರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರಕಾರ ಹಾಗೂ ಇಲಾಖೆಯದ್ದಾಗಿದೆ ಎಂದರು.
ಉಡುಪಿ : ಬಿಜೆಪಿ ಉಡುಪಿ ನಗರ ಮಂಡಲದ ವಿಶೇಷ ಕಾರ್ಯಕಾರಿಣಿಯು ಜು.31ರಂದು ಬಿಜೆಪಿ ಉಡುಪಿ ನಗರ ಮಂಡಲಾಧ್ಯಕ್ಷ ದಿನೇಶ್ ಅಮೀನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ವಿಶೇಷ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಎಸ್. ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ ಹಾಗೂ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯ ಅಪೇಕ್ಷಿತರು ಉಪಸ್ಥಿತರಿದ್ದರು.
ಬೈಂದೂರು : ಇಲ್ಲಿಗೆ ಸಮೀಪದ ಸೋಮೇಶ್ವರ ಗುಡ್ಡ ಕುಸಿತ ಸ್ಥಳಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಬುಧವಾರ ಭೇಟಿ ನೀಡಿದರು. ಸೋಮೇಶ್ವರ ಅಭಿವೃದ್ಧಿ ಕಾಮಗಾರಿ ಮತ್ತು ಗುಡ್ಡ ಕುಸಿತ ಸ್ಥಳವನ್ನು ವೀಕ್ಷಿಸಿದರು. ಆ ಬಳಿಕ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ನಾಗತೀರ್ಥ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡರು.
ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಅವರಲ್ಲಿ ಸೋಮೇಶ್ವರ ಗುಡ್ಡ ಕುಸಿತ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡುವೂರು, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಉಡುಪಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆ ಶೆಟ್ಟಿ ಗುಡಿಬೆಟ್ಟು, ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ ಮೊಳಹಳ್ಳಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬೈಂದೂರು ಭೂ ನ್ಯಾಯ ಮಂಡಳಿಯ ಸದಸ್ಯ ಮಾಣಿಕ್ಯ ಹೋಬಳಿದಾರ್, ಪಡುವರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಹೋಬಳಿದಾರ್, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ ಪಡುವರಿ, ತಾಲೂಕು ಕೆ.ಡಿ.ಪಿ ಸದಸ್ಯ ಜಗದೀಶ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ಟಿ ಶಂಕರ ಪೂಜಾರಿ, ರಘುರಾಮ್ ಶೆಟ್ಟಿ, ರಾಜೇಶ್ ಕೆ ಪಡುವರಿ, ಪ್ರಸನ್ನ ಶೆಟ್ಟಿ ಶಿರೂರು, ಮಹಾಲಿಂಗ ನಾಯ್ಕ್, ಮೊದಲಾದವರು ಇದ್ದರು.
ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಇಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊರಗ ಸಮುದಾಯದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮನವಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.