ಉಡುಪಿ : ನವರಾತ್ರಿ ಹಬ್ಬದ ಪ್ರಯುಕ್ತ ನಡೆಯಲಿರುವ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಅಕ್ಟೋಬರ್ 12ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು, ಯಡ್ತರೆ, ಬೈಂದೂರು ಮತ್ತು ಬಿಜೂರು ಗ್ರಾಮ ಹಾಗೂ ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ, ಹಂಗಳೂರು ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಹಾಗೂ ಅಕ್ಟೋಬರ್ 14 ರಂದು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶೀಯ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ದಿನಾಂಕಗಳಂದು ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರ ವರೆಗೆ ನಿಷೇಧಿಸಿ, ಒಣದಿನ ಎಂದು ಘೋಷಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
Byndoor
ಖಾರ್ವಿಕೇರಿ ದೇವಸ್ಥಾನದ ಚಿನ್ನಾಭರಣ ಕಳ್ಳತನ – ದೇವಸ್ಥಾನದ ಅರ್ಚಕ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಗಂಗೊಳ್ಳಿ : ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದ ಅರ್ಚಕ ನರಸಿಂಹ ಭಟ್ (43) ಬಂಧಿತ ಆರೋಪಿ.
ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳನ್ನು ದೇವಸ್ಥಾನದಲ್ಲಿ ಇರಿಸಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯು ದೇವಸ್ಥಾನದ ಚಿನ್ನಾಭರಣಗಳನ್ನು ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡಮಾನವಿರಿಸಿರುವುದಾಗಿ ತಿಳಿಸಿದ್ದಾನೆ.
ಆರೋಪಿಯಿಂದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಗ್ರಾಂ ತೂಕದ ಚಿನ್ನದ ನಕ್ಲೇಸ್ ಸರ ಹೀಗೆ ಒಟ್ಟು 20,48,000 ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಭಟ್ ರಾಜ್ಯಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ : ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಪೂಜಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ಭಟ್ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಷ್ಟಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ
ಬೈಂದೂರು : ಜಿಲ್ಲೆಯ ಪ್ರತಿಷ್ಠಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕನಾಯ್ಕ್, ಶ್ರೀಮತಿ ಧನಾಕ್ಷಿ, ಶ್ರೀಮತಿ ಸುಧಾ ಕೆ, ಕೆ. ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ. ವಿ, ಯು. ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಉಪಸ್ಥಿತರಿದ್ದರು.
ಉಪ್ಪುಂದದಲ್ಲಿ ಕುಡಿಯುವ ನೀರು ಕಲುಷಿತಗೊಂಡು ಸಾವಿರಕ್ಕೂ ಮಿಕ್ಕಿ ಜನರು ಅಸ್ವಸ್ಥ
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಲುಷಿತಗೊಂಡ ಪರಿಣಾಮ ನೂರಾರು ಜನರು ಅಸ್ವಸ್ಥಗೊಂಡ ಘಟನೆ ಸಂಭವಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಪರುಣಾಮ ಕರ್ಕಿ ಕಳ್ಳಿ ಮತ್ತು ಮಡಿಕಲ್ ಎನ್ನುವ ಪ್ರದೇಶದಲ್ಲಿ ಗ್ರಾಮಸ್ಥರು ಸಂಪೂರ್ಣ ಅಸ್ವಸ್ಥರಾಗಿದ್ದಾರೆ.
ಕಾಸಿನಾಡಿ ಎಂಬಲ್ಲಿರುವ ನೀರಿನ ಟ್ಯಾಂಕ್ನಿಂದ ಈ ಕಲುಷಿತ ನೀರನ್ನು ಗ್ರಾಮಸ್ಥರು ಕುಡಿದಿದ್ದರು. ಇದರ ಪರಿಣಾಮವಾಗಿ ಕರ್ಕಿಕಳಿಯಲ್ಲಿ ಸುಮಾರು 500 ಜನ, ಮಡಿಕಲ್ ನಲ್ಲಿ 600 ಜನ ಅಸ್ವಸ್ಥಗೊಂಡಿದ್ದಾರೆ. ಇಲ್ಲಿನ ವಾರ್ಡ್ನ ಪ್ರತಿ ಮನೆಯಲ್ಲೂ 3ಕ್ಕೂ ಅಧಿಕ ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. 80ರ ವಯೋವೃದ್ಧರಿಗೆ ರಕ್ತಭೇದಿ ಹಿನ್ನಲೆಯಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಕುಂದಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಾಸಿನಾಡಿಯ ಓವರ್ ಹೆಡ್ ನೀರಿನ ಟ್ಯಾಂಕ್ ನೀರು ಸರಬರಾಜನ್ನು ಬಂದ್ ಮಾಡಲಾಗಿದ್ದು ಸೂಕ್ತ ತನಿಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಗಳೂರು : ಅಕ್ಟೋಬರ್ 21ರಂದು ನಡೆಯಲಿರುವ ವಿಧಾನಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ ಜಿಲ್ಲೆಯ ಬೈಂದೂರಿನ ರಾಜು ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನಿಂದ ಐದು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕಮಾಂಡ್ ರಾಜು ಪೂಜಾರಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ರಾಜು ಪೂಜಾರಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದರು.
ಬೈಂದೂರು : ಬೈಂದೂರಿನ ಐತಿಹಾಸಿಕ ಪ್ರಸಿದ್ದ ಮಹಾತೋಬಾರ ಸೇನೇಶ್ವರ ದೇವಸ್ಥಾನ ಇದರ ಶಾರದೋತ್ಸವದ ಪ್ರಯುಕ್ತ ಅದ್ದೂರಿಯ ಬೈಂದೂರು ದಸರಾ-2024 ಕಾರ್ಯಕ್ರಮ ಅಕ್ಟೋಬರ್ 03 ರಿಂದ 12ರ ವರೆಗೆ ಬೈಂದೂರು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ.
ನವರಾತ್ರಿ ಮೊದಲ ದಿನ ಶಿರೂರು ಪೇಟೆ ವೆಂಕಟರಮಣ ಸಭಾ ಭವನದಲ್ಲಿ ಪ್ರಸಿದ್ದ ಕಲಾ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಬೈಂದೂರು ದಸರಾ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಶಿರೂರು ಪೇಟೆ ವೆಂಕಟರಮಣ ಸಭಾ ಭವನದಲ್ಲಿ ಶಿರೂರು ಪ್ರಮುಖರ ಸಮ್ಮಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಈ ಬಾರಿ ಅದ್ದೂರಿಯ ಬೈಂದೂರು ದಸರಾ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ವಿವಿದ ಕಡೆ ರಾಜ್ಯದ ಪ್ರಸಿದ್ದ ಕಲಾ ತಂಡಗಳ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪ್ರತಿ ಊರಿನ ಪ್ರಮುಖರು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರಾಜೇಶ್ ಬೈoದೂರು, ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ, ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್ಮಕ್ಕಿ, ರವೀಂದ್ರ ಶೆಟ್ಟಿ ಪಟೇಲ್, ಉದಯ ಪೂಜಾರಿ ಮೈದಿನಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ, ರವೀಂದ್ರ ಶೆಟ್ಟಿ ಹೊನ್ಕೇರಿ, ಜಗದೀಶ ಆಲಂದೂರು, ನಾಗರಾಜ ಪೂಜಾರಿ, ಯೋಗೀಶ್ ಪೂಜಾರಿ ಜೋಗುರು ಹಾಜರಿದ್ದರು.
ಬೈಂದೂರಿನಲ್ಲಿ ಬೃಹತ್ ದಸರಾ ಕ್ರೀಡಾಕೂಟ
ದಸರಾ ಪ್ರಯುಕ್ತ ಬೈಂದೂರಿನಲ್ಲಿ ಬೃಹತ್ ದಸರಾ ಕ್ರೀಡಾಕೂಟ ಅ.06 ರಂದು ಪೂರ್ವಾಹ್ನ 09 ಗಂಟೆಗೆ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಅ.09 ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ. ಮದ್ಯಾಹ್ನ ಪೂಜೆ ವಿಶೇಷ ಅಲಂಕಾರ ಪೂಜೆ,ವಿವಿಧ ಸ್ಪರ್ಧೆಗಳು ಹಾಗೂ ರಾತ್ರಿ ಪೂಜೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈಭವ ನಡೆಯಲಿದೆ.
ಅ.10 ರಂದು ಬೆಳಿಗ್ಗೆ ದುರ್ಗಾಹೋಮ ಹಾಗೂ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಸಂಜೆ ಜನತಾ ಫ್ರೌಢಶಾಲೆ ಹೆಮ್ಮಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಡಾನ್ಸ್ ಧಮಕಾ ನಡೆಯಲಿದೆ.
ಅ.11 ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಹೋಮ, ಮದ್ಯಾಹ್ನ ಅನ್ನಸಂತರ್ಪಣೆ, ಸಂಜೆ ಜಿಲ್ಲೆಯ ಪ್ರಸಿದ್ದ ತಂಡದವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಅ.12 ರಂದು ಸಂಜೆ ಶಾರದಾ ದೇವಿಯ ವಿಗ್ರಹದ ಅದ್ದೂರಿ ಪುರ ಮೆರವಣಿಗ ನಡೆಯಲಿದೆ. ನಗರೋತ್ಸವದಲ್ಲಿ ದೇವರ ಭವ್ಯ ಟ್ಯಾಬ್ಲೋ, ಕೀಲುಕುದುರೆ, ನವಿಲು ನೃತ್ಯ, ಮರಕಾಲು, ಕಥಕ್ಕಳಿ, ಚೆಂಡ ವಾದನ, ಹುಲಿವೇಷ ವಿವಿಧ ಆಕರ್ಷಣೆಗಳಿರಲಿದೆ ಎಂದು ಬೈಂದೂರು ದಸರಾ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆ-ಕಾಲೇಜುಗಳ ವಾಹನ ಚಾಲಕರ ಸಭೆ ಸೆಪ್ಟೆಂಬರ್ 30ರ ಸೋಮವಾರ ನಡೆಯಿತು.
ಸಭೆಯಲ್ಲಿ ಪ್ರತಿ ವಾಹನಗಳಿಗೆ ಬಾಗಿಲು ಅಳವಡಿಸುವಂತೆ ಹಾಗೂ ಪುಟ್ ಬೋರ್ಡ್ನಲ್ಲಿ ಮಕ್ಕಳಿಗೆ ಅವಕಾಶ ನೀಡದಂತೆ ಮತ್ತು ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸದಂತೆ ಅಲ್ಲದೆ ವಾಹನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಲಾಯಿತು. ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚನೆಯನ್ನು ನೀಡಲಾಯಿತು.
ಸಭೆಯಲ್ಲಿ ಮುಖ್ಯ ಶಿಕ್ಷಕರು ಹಾಜರಿದ್ದರು.
ಕುಂದಾಪುರ : ನವಂಬರ್ 1, 2, 3 ರಂದು ಮೂರು ದಿನಗಳ ಕಾಲ ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಉತ್ಸವ 2024ರ ಪ್ರೋಮೋವನ್ನು ಮಾಜಿ ಶಾಸಕ, ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಗ್ರಾಮೀಣ ಭಾಗಗಳನ್ನು ಒಳಗೊಂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಇಡೀ ಜಗತ್ತಿಗೆ ಒಂದು ಉತ್ತಮ ಸಂದೇಶ ನೀಡಲಿದೆ ಎಂದರು. ಕುಂದಾಪುರದ ಭಾಷೆ ನೆಲ, ಜಲ, ಸಂಸ್ಕೃತಿಯು ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಿದೆ. ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಹಾಗೂ ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡಿರುವ ಬೈಂದೂರಿನಲ್ಲಿ ಬೈಂದೂರು ಉತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬೈಂದೂರು : ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಅವರ ಕಾರಿನ ಬೋನೆಟ್ ಒಳಗೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತು. ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬೋನೆಟಿನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಫೀಟ್ ಉದ್ದದ ಗಾತ್ರದ ಹೆಬ್ಬಾವು ಇರುವುದು ಕಾಣಿಸಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರು. ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ಆಗಮಿಸಿ ಕಾರಿನ ಬೋನಟ್ ಒಳಗಿರುವ ಹೆಬ್ಬವನ್ನು ಸತತ ಕಾರ್ಯಾಚರಣೆಯಿಂದ ಹೊರತೆಗೆದರು.
ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರ ಸಹಾಯ ಪಡುಕೊಂಡು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ
ಅರಣ್ಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿದರು.