ಉಡುಪಿ : ನವರಾತ್ರಿ ಹಬ್ಬದ ಪ್ರಯುಕ್ತ ನಡೆಯಲಿರುವ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಅಕ್ಟೋಬರ್ 12ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು, ಯಡ್ತರೆ, ಬೈಂದೂರು ಮತ್ತು ಬಿಜೂರು ಗ್ರಾಮ ಹಾಗೂ ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ, ಹಂಗಳೂರು ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಹಾಗೂ ಅಕ್ಟೋಬರ್ 14 ರಂದು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶೀಯ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ದಿನಾಂಕಗಳಂದು ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರ ವರೆಗೆ ನಿಷೇಧಿಸಿ, ಒಣದಿನ ಎಂದು ಘೋಷಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
Udupi District
ಪ್ರಧಾನಿ ಕಾರ್ಯಾಲಯದ ಅಧಿಕಾರಿ ಹೆಸರಿನಲ್ಲಿ ಶ್ರೀಕೃಷ್ಣ ಮಠಕ್ಕೆ ವಂಚನೆ – ದೂರು ದಾಖಲು
ಉಡುಪಿ : ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ಟೋಬರ್ 9ರಂದು ಉದಯ್ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅವರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಾವು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು.
ಅನುಮಾನ ವ್ಯಕ್ತವಾಯಿತು
ಅದರಂತೆ ಅಕ್ಟೋಬರ್ 9ರಂದು ಭಾರತ ಸರಕಾರ ಎಂದು ಬರೆದ ವಾಹನದಲ್ಲಿ ಆಗಮಿಸಿದ ಡಾ|ಉದಯ್ ಹಾಗು ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಬೆಳಗ್ಗೆ ವಿಶೇಷ ದರ್ಶನ ಮಾಡಿಸಿದ್ದೇವೆ. ಆದರೆ ಅವರ ಚಲನವಲನದಿಂದ ಅನುಮಾನ ವ್ಯಕ್ತವಾಗಿ ಅವರನ್ನು ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡದೇ ತೆರಳಿದ್ದಾರೆ. ಪ್ರಧಾನ ಮಂತ್ರಿಗಳ ವೆಬ್ಸೈಟ್ ಅನ್ನು ಪರಿಶೀಲಿಸಿದಾಗ ಇವರ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆತಿಲ್ಲ. ಕೇಂದ್ರ ಸರಕಾರದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಶ್ರೀ ಮಠಕ್ಕೆ ಆಗಮಿಸಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಠದ ಮ್ಯಾನೇಜರ್ ನಂದನ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಉಡುಪಿ : ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಮತ್ತು ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಹಾಗೂ ಮೂಳೆ ರೋಗ ತಜ್ಞ ಡಾ.ಸುರೇಶ್ ಶೆಣೈ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿಯ ಸಹ ಪ್ರಾಧ್ಯಾಪಕ ಮತ್ತು ಮನೋ ವೈದ್ಯ ಡಾ.ಅನಿಲ್ ಕುಮಾರ್ ಎಂ.ಎನ್., ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ.ಶರತ್ಚಂದ್ರ ರಾವ್ ಮಾತನಾಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮನೋವೈದ್ಯ ಡಾ.ಅನಿಲ್ ಕುಮಾರ್ ‘ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ, ಯೋಗ ಚಿಕಿತ್ಸಕಿ ಅನ್ವಿತಾ ‘ಯೋಗ ಮತ್ತು ಒತ್ತಡ ನಿರ್ವಹಣೆ’ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಉಡುಪಿ ಪರಿಸರದಲ್ಲಿರುವ ಬೇರೆ ಬೇರೆ ಆಸ್ಪತ್ರೆಯ ಸುಮಾರು 60ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರು ಈ ಶಿಬಿರದ ಪ್ರಯೋಜನವನ್ನು ಪಡೆದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಹಾಗೂ ಮನೋವೈದ್ಯ ಡಾ.ಪಿ.ವಿ. ಭಂಡಾರಿ ವಹಿಸಿದ್ದರು. ಆಸ್ಪತ್ರೆಯ ಮನೋವೈದ್ಯರಾದ ಡಾ.ದೀಪಕ್ ಮಲ್ಯ ಮತ್ತು ಡಾ.ಮಾನಸ್ ಈ.ಆರ್. ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತ ಅಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಮನೋವೈದ್ಯ ಡಾ.ಮಾನಸ್ ಈ.ಆರ್. ವಂದಿಸಿದರು. ಆಪ್ತ ಸಮಾಲೋಚಕ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು – ಉಡುಪಿ ಡಿಸಿ
ಉಡುಪಿ : ಕರಾವಳಿ ಬೈಪಾಸ್ನಿಂದ ಮಣಿಪಾಲ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 169ಎ ಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಸಂಭವಿಸಿದ ಅಪಘಾತಗಳಿಂದ ಅನೇಕ ಸಾವು-ನೋವುಗಳಿಗೆ ಕಾರಣರಾಗಿರುವ ಕಾಮಗಾರಿಯ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಲ್ಪೆ-ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿ ಕಳೆದ ಕೆಲವು ವರ್ಷಗಳಿಂದ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇಂದ್ರಾಳಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದಾಗಿ ಮಣಿಪಾಲವನ್ನು ಸಂಪರ್ಕಿಸುವ ಇಕ್ಕಟ್ಟಾಗಿರುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವರು ಬಲಿಯಾಗಿದ್ದಾರೆ. ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಕಾರಣವಾಗಿದ್ದು, ರಸ್ತೆ ಅಪಘಾತಕ್ಕೆ ಕಾರಣಕರ್ತರಾದ ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ವಾರ್ತಾಧಿಕಾರಿ ಮಂಜುನಾಥ್ ಬಿ
ಉಡುಪಿ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಕರೆ ನೀಡಿದರು.
ಅವರು ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇವರ ವತಿಯಿಂದ ಆಯೋಜಿಸಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗಳ ಜೊತೆಗೆ ಇತರೆ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರೊಂದಿಗೆ ಸಮುದಾಯದ ಸಮಸ್ಯೆಗಳನ್ನು ಅರಿತು ಸಹಾಯ ಮಾಡಲು ಮುಂದಾಗಬೇಕು. ಸಮಸ್ಯೆಗಳನ್ನು ಪರಿಹರಿಸುವುದರಿಂದ ಕೌಶಲ್ಯ ಹಾಗೂ ಜ್ಞಾನ ಬೆಳೆಯುತ್ತದೆ ಎಂದರು.
ಯುವಜನರು ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಸರಕಾರ ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರಗಳನ್ನು ಆಯೋಜಿಸಿದೆ. ಇದು ವಿದ್ಯಾರ್ಥಿಗಳ ಜೀವನದಲ್ಲಿ ನಾಯಕತ್ವ, ಶಿಸ್ತಿನ ಜತೆಗೆ ಸಾರ್ವತ್ರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಶಿಬಿರಗಳು ಅವಕಾಶಗಳ ವೇದಿಕೆಯಾಗಿದೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರು.
ಯುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಯುವಜನರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುವುದರೊಂದಿಗೆ ಅರ್ಥಪೂರ್ಣವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಸೇವೆಯಲ್ಲಿ ಸ್ವಾರ್ಥವಿರಬಾರದು. ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮಾತನಾಡಿ, ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿಯರು ಪಡೆದ ಅನುಭವಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಉತ್ತಮವಾಗಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು.
ಕಾಲೇಜಿನ ಶಿಕ್ಷಣ ಸೇವಾ ಸಮಿತಿಯ ಖಜಾಂಜಿ ಶೇಖರ್ ಕೋಟ್ಯಾನ್, ಮಲ್ಪೆಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಸಾಲ್ಯಾನ್, ಖಜಾಂಜಿ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ, ಶಿಕ್ಷಣ ತಜ್ಞ ವಿಶ್ವನಾಥ ಬಾಯರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ) ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ, ಉಪನ್ಯಾಸಕರುಗಳು, ಶಿಬಿರದ ನಾಯಕಿ ಸಹನಾ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶುಭಗೀತಾ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಭವ್ಯಾ ಧನ್ಯವಾದ ಸಮರ್ಪಿಸಿದರು.
ಉಡುಪಿ : ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ, ಅಪರೂಪದ ಕಾರ್ಯಕ್ರಮ ನಡೆಯಿತು. ಏಕಕಾಲದಲ್ಲಿ 101 ಮಂದಿ ಕಲಾವಿದರು ಸಾಮೂಹಿಕವಾಗಿ ವೀಣೆ ನುಡಿಸುವ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ದೇವರಸ್ತುತಿಗಳನ್ನು ಶೃತಿಬದ್ಧವಾಗಿ ಕೇಳುವ ಅಪೂರ್ವ ಅವಕಾಶ ಭಕ್ತರಿಗೆ ಸಿಕ್ಕಿತು.
ವಿದ್ವಾನ್ ಪವನಾ ಆಚಾರ್ಯ ಅವರ ನೇತೃತ್ವದ ತಂಡ ಎರಡು ಗಂಟೆಗಳಿಗೂ ಅಧಿಕಕಾಲ ಈ ಅಪೂರ್ವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಚ್ಚಿಲ ದಸರಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಟ್ಟಿನಲ್ಲಿ, ವರ್ಷಂ ಪ್ರತಿ ಈ ಸಾಮೂಹಿಕ ವೀಣಾ ವಾದನ ಕಾರ್ಯಕ್ರಮ ನಡೆಸಲಾಗುತ್ತದೆ. ಏಕಕಾಲದಲ್ಲಿ 101 ವೀಣೆಗಳ ಜೇಂಕಾರ ಕೇಳುವುದೇ ಒಂದು ಅಪೂರ್ವ ಅನುಭವವಾಗಿದೆ.
ರಸ್ತೆ ದಾಟುತ್ತಿದ್ದ ಪತಿ ಪತ್ನಿಗೆ ಖಾಸಗಿ ಬಸ್ ಡಿಕ್ಕಿ – ಪತಿ ಸ್ಥಳದಲ್ಲೇ ಸಾವು, ಪತ್ನಿಗೆ ಗಂಭೀರ ಗಾಯ
ಪಡುಬಿದ್ರಿ : ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಮಿರ್ಚಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕಾಪು ಭಾರತ್ ನಗರದ ನಿವಾಸಿ ಹಿದಾಯತುಲ್ಲಾ (55) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರ ಪತ್ನಿ ಸಾವರ್ ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಚ್ಚಿಲ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಇವರು, ದಾರಿ ಮಧ್ಯೆ ಮೂಳೂರಿನಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಹೋಟೆಲಿಗೆ ಹೋಗಲು ಬೈಕನ್ನು ನಿಲ್ಲಿಸಿ ಪತ್ನಿ ಜೊತೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು ಇವರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು ರಜೆಯಲ್ಲಿ ಊರಿಗೆ ಬಂದಿದ್ದರು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಲ್ಪೆ ಬಂದರಿನಲ್ಲಿ ಬಾಲಕಾರ್ಮಿಕರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಉಡುಪಿ ಡಿಸಿ ಸೂಚನೆ
ಉಡುಪಿ : ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ 14 ವರ್ಷದೊಳಗಿನ ಬಾಲ ಕಾರ್ಮಿಕರು ಮೀನು ಹೆಕ್ಕುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಕಾರ್ಯಪಡೆಯ ಅಧಿಕಾರಿಗಳು ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಲ್ಪೆ ಬಂದರಿನಲ್ಲಿ ಬೆಳಗಿನ ಜಾವ ಮೀನು ಹರಾಜು ಕೇಂದ್ರಗಳಲ್ಲಿ ನಡೆಯುವ ಮೀನಿನ ಏಲಂ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಹೆಕ್ಕುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ದಾಳಿ ನಡೆಸಿದರೂ ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಾರ್ಯಪಡೆಯ ಸದಸ್ಯರುಗಳು ಆಗಿಂದಾಗ್ಗೆ ನಿರಂತರ ಅನಿರೀಕ್ಷಿತ ದಾಳಿ ಹಾಗೂ ಭೇಟಿಗಳನ್ನು ಮಾಡುವ ಮೂಲಕ ಬಂದರಿನಲ್ಲಿ ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ತೊಡೆದು ಹಾಕ ಬೇಕು ಎಂದು ಅವರು ಸೂಚನೆ ನೀಡಿದರು.
ಬಾಲ ಕಾರ್ಮಿಕತೆ ಮಕ್ಕಳ ಬಾಲ್ಯ ಅವರ ಸಾಮರ್ಥ್ಯ, ಘನತೆಕಸಿದು ಕೊಳ್ಳುವುದಲ್ಲದೇ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೈತಿಕವಾಗಿ ಹಾನಿಯನ್ನುಂಟು ಮಾಡುತ್ತದೆ. ಬಡಮಕ್ಕಳು ಶಿಕ್ಷಣವಂತರಾಗಬೇಕು. ಉತ್ತಮ ವಿದ್ಯಾವಂತರಾಗಿ ಭವ್ಯ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಈ ಮಕ್ಕಳು ಶಾಲೆಯನ್ನು ಅರ್ಧದಲ್ಲೇ ತೊರೆದು ದುಡಿಮೆಗೆ ಮುಂದಾಗುತ್ತಾರೆ. ಎಲ್ಲರೂ ಸೇರಿ ಇದನ್ನು ತಪ್ಪಿಸಬೇಕಿದೆ ಎಂದರು.
ಸಮಾಜದಲ್ಲಿ ಬಾಲಕಾರ್ಮಿಕತೆಯೆಂಬ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಬೇಕು. ಇದಕ್ಕಾಗಿ ಮಕ್ಕಳ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುವುದರ ಜೊತೆಗೆ 14 ವರ್ಷ ದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಶಾಲೆಗೆ ಹೋಗುವುದನ್ನು ತಪ್ಪಿಸಬಾರದು. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಪು : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರು ದೆಂದೂರುಕಟ್ಟೆಯಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕ ಸಂತೋಷ್ ಆಚಾರ್ಯ (39) ಎಂದು ಗುರುತಿಸಲಾಗಿದೆ.
ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಾಪು ಪೋಲಿಸ್ ಠಾಣೆಯ ಎ.ಎಸ್.ಐ. ಗಣೇಶ್ ಪೈ, ಹಾಗೂ ಶಿವ ನಾಯ್ಕ್ ಮಹಜರು ಪ್ರಕ್ರಿಯೆ ನಡೆಸಿದರು.
ಸಮಾಜಸೇವಕ ನಿತ್ಯಾನಂದ ಒಳಕಾಡುವರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ವೈದ್ಯಕೀಯ ತಪಾಸಣಾ ಘಟಕಕ್ಕೆ ರವಾನಿಸಲು ಇಲಾಖೆಗೆ ನೆರವಾದರು.

ಮಣಿಪಾಲ : ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದ್ರಾಳಿಯಲ್ಲಿ ಬುಧವಾರ ಸಂಭವಿಸಿದೆ.
ಮೃತ ದುರ್ದೈವಿ ಮಣಿಪಾಲದ ಉದ್ಯೋಗಿ ದೀಪೇಶ್ ದೇವಾಡಿಗ ಎಂದು ಗುರುತಿಸಲಾಗಿದೆ. ಇಂದ್ರಾಳಿ ದೇವಸ್ಥಾನದಿಂದ ಕಾರು ಕೆಳಗೆ ಬರುತ್ತಿದ್ದ ವೇಳೆ ಬ್ರೇಕ್ ಫೇಲ್ ಆಗಿದ್ದು, ಎರಡೂ ಬದಿಯಲ್ಲಿದ್ದ ವಾಹನಗಳು ಸಹಿತ ಜನರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಕೆಲವು ಮಂದಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.