ಬೈಂದೂರು : ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ನಿವಾಸಿ ಕೃಷಿಕ ಮಂಜುನಾಥ ಶೇಟ್ (85) ಎಂಬುವವರು ತೆಂಗಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಂತಹ ಸಮಯದಲ್ಲಿ ಬಾವಿ ಬದಿಯಲ್ಲಿ ಬಿದ್ದಿರುವ ತೆಂಗಿನಕಾಯಿಯನ್ನು ಹೆಕ್ಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಮಂಜುನಾಥ ಶೇಟ್ ಅವರು ಬೆಳಗಿನ ಸಮಯದಲ್ಲಿ ತೆಂಗಿನ ತೋಟಕ್ಕೆ ಹೋಗಿ ತೋಟದಲ್ಲಿ ಬಿದ್ದಿರುವ ಕಾಯಿಯನ್ನು ಹೆಕ್ಕುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ದಿನ ನಿತ್ಯದ ರೂಢಿಯಂತೆ ಬುಧವಾರ ಬೆಳಗಿನ ಸಮಯದಲ್ಲಿ ತೋಟಕ್ಕೆ ಕಾಯಿಯನ್ನು ಹೆಕ್ಕಲು ಮನೆಯಿಂದ ಹೋಗಿದ್ದ ಅವರು ಬಹಳ ಸಮಯದ ವರೆಗೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಮಗ ರಾಘವೇಂದ್ರ ಶೇಟ್ ತಮ್ಮ ತಂದೆಯನ್ನು ಹುಡುಕುತ್ತಾ ತೋಟಕ್ಕೆ ತೆರಳಿದ್ದರು. ತೋಟದಲ್ಲಿ ತೀವೃವಾಗಿ ಹುಡುಕಿದ ಬಳಿಕ ಬಾವಿಯಲ್ಲಿ ತಂದೆ ಧರಿಸಿರುವ ಚಪ್ಪಲಿ ತೇಲುತ್ತಿರುವುದನ್ನು ಗಮನಿಸಿ ಬೈಂದೂರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಬಾವಿಯಲ್ಲಿ ಹುಡುಕಾಟ ಮಾಡಿದ ಬಳಿಕ ಮಂಜುನಾಥ ಶೇಟ್ ಮೃತ ಶರೀರ ಬಾವಿಯಲ್ಲಿ ಪತ್ತೆಯಾಗಿದೆ.
ಬೈಂದೂರು ಠಾಣೆ ಠಾಣಾಧಿಕಾರಿ ತಿಮ್ಮೇಶ್ ಡಿ.ಎನ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು. ಮಗ ರಾಘವೇಂದ್ರ ಶೇಟ್ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

