ಉಡುಪಿ : ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರಾವಳಿ ವೃತ್ತಿ ನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ನಡೆಯಿತು.
ಡಿವೈಎಫ್‌ಐ ರಾಜ್ಯ ಮುಖಂಡ, ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಗೌರವ ಸಲಹೆಗಾರ ಸಂತೋಷ್ ಬಜಾಲ್ ಮಾತನಾಡಿ, ಹಲವು ವರ್ಷಗಳಿಂದ ಬ್ರಹ್ಮಾವರ, ಪಾಂಗಳ, ಮಲ್ಪೆ, ಕಟ್‌ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ಬದುಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು, ಅವರ ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಕನಿಷ್ಟ ಸ್ಪಂದಿಸದೇ ಇರುವ ಶಾಸಕ ಸಂಸದರು, ಇಲ್ಲಿನ ಮತೀಯ ರಾಜಕಾರಣಕ್ಕೆ ಅಬ್ಬರಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಸಮುದಾಯಗಳು ಅಲೆಮಾರಿಯಾಗಿ ಬದುಕುತ್ತಿರುವ ಕಾರಣಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯಗಳ ಮೇಲಕ್ಕೆತ್ತಲು ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಹೆಸರಿಗಷ್ಟೇ ಇದೆ. ಆದರೆ ಆದ್ಯತೆಯಲ್ಲಿ ಇವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಇವರು ಬದುಕುತ್ತಿರುವ ಗುಡಿಸಲಿಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು ಎಂದು ಅವರು ಒತ್ತಾಯಿಸಿದರು.