ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು ಜಾಥಾ ನವೆಂಬರ್ 14ರ ಗುರುವಾರ ಸಂಜೆ 3 ಗಂಟೆಗೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Community Support
ಎಂ.ಆರ್.ಪಿ.ಎಲ್ ಸಂಸ್ಥೆಯಿಂದ 1500 ಫಲಾನುಭವಿ ಕುಟುಂಬಗಳಿಗೆ 20 ಲಕ್ಷ ಬೆಲೆಯ ಸಿರಿಧಾನ್ಯ ವಿತರಣೆ
ಸುರತ್ಕಲ್ : ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್. ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಳಲುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ನೀಡಿದ್ದು, ವೃದ್ದಾಶ್ರಮ ಮತ್ತು ಅಸ್ಪತ್ರೆಗಳಿಗೆ ಅಂಬುಲೆನ್ಸ್ ವಾಹನ ನೀಡಿ ಸಹಕಾರ ನೀಡಿದೆ. ಇದೀಗ ಅನಾರೋಗ್ಯದಿಂದ ಬಲಳುವ 1500 ಫಲಾನುಭವಿಗಳಿಗೆ ಸಿರಿಧಾನ್ಯ ನೀಡಿ ಸಹಕಾರ ನೀಡಲಾಗಿದೆ, ಫಲಾನುಭವಿಗಳು ಇದರಿಂದ ತಮ್ಮ ಆರೋಗ್ಯವನ್ನು ವೃದ್ದಿಸಬಹುದಾಗಿದೆ, ಒಟ್ಟು 20 ಲಕ್ಷ ರೂಪಾಯಿ ಬೆಲೆಬಾಳುವ 1800 ಕಿಲೋ ಸಿರಿಧಾನ್ಯ ವಿತರಿಸಲಾಗಿದ್ದು, ಹೆಚ್ಚಿನ ಕಡೆಗಳಿಗೆ ತೆರಳಿ ನೇರವಾಗಿ ಫಲಾನಿಭವಿಗಳಿಗೆ ನೀಡಲಾಗಿದೆ ಎಂದರು.
ಈ ಸಂದರ್ಭ ಎಂ.ಆರ್.ಪಿ.ಎಲ್ ಅಧಿಕಾರಿ ಸ್ಟೀವನ್ ಪಿಂಟೋ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಣಿಪಾಲ ಕೆಎಂಸಿಯಲ್ಲಿ ರಕ್ತದ ತೀವ್ರ ಕೊರತೆ : ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಲು ಮನವಿ
ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಈ ಪ್ರದೇಶದ ಪ್ರಮುಖ ಆಸ್ಪತ್ರೆಯಾಗಿದ್ದು, ಪ್ರಸ್ತುತ ರಕ್ತದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದು ತುರ್ತು ವೈದ್ಯಕೀಯ ವಿಧಾನಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ರಕ್ತದ ಕೊರತೆಯು ಕೆಲವು ಕಾಯಿಲೆಗಳು ಮತ್ತು ಅಪಘಾತಗಳ ಸಂದರ್ಭಗಳಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲು ಕಾರಣವಾಗಬಹುದು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು, ಸಮಾಜ ಬಾಂಧವರು ಮುಂದೆ ಬಂದು ರಕ್ತದಾನ ಮಾಡಲು ತುರ್ತು ಮನವಿ ಮಾಡಿದ್ದಾರೆ. “ಈ ಸಮಯದಲ್ಲಿ ರಕ್ತದ ಅವಶ್ಯಕತೆ ಬಹಳ ಮುಖ್ಯವಾಗಿದೆ. ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ಈ ಸಂದರ್ಭದಲ್ಲಿ ನಮಗೆ ಸಹಾಯ ಮಾಡಲು ನಾವು ವಿನಂತಿಸುತ್ತೇವೆ. 10ಕ್ಕಿಂತ ಹೆಚ್ಚು ದಾನಿಗಳು ಇದ್ದರೆ, ನಾವು ವಾಹನದ ವ್ಯವಸ್ಥೆ ಮಾಡುತ್ತೇವೆ” ಎಂದವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂ:0820 2922331 ಸಂಪರ್ಕಿಸಬಹುದು
ಉಡುಪಿ : ಇಂದ್ರಾಳಿಯ ರೈಲ್ವೆ ಸೇತುವೆ ಬಳಿ, ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಗಂಡಸಿನ ಶವವು ಗುರುವಾರ ರಾತ್ರಿ ಪತ್ತೆಯಾಗಿದೆ.
ವ್ಯಕ್ತಿಯು ಚಲಿಸುತ್ತಿರುವ ರೈಲಿಗೆ ಅಡ್ಡಬಂದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯನ್ನು ಮೂಡಸಗ್ರಿಯ ನೀಲಾದರ ನಾಯ್ಕ ಎಂದು ಶಂಕಿಸಲಾಗಿದೆ.
ಸಮಾಸಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಯ ಕರೆಗೆ ಧಾವಿಸಿ ಬಂದು, ಟಾರ್ಚ್ ಬೆಳಕಿನ ಸಹಕಾರದಿಂದ ಛಿದ್ರ ದೇಹವನ್ನು ಒಟ್ಟುಗೂಡಿಸಿ, ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾದರು.
ಮಣಿಪಾಲ ಪೋಲಿಸ್ ಠಾಣೆಯ ಹೆಡ್ ಕಾನ್ಸಟೇಬಲ್ ಶ್ರವಣ ಕುಮಾರ್, ಹೆಡ್ ಕಾನ್ಸಟೇಬಲ್ ಗುರುರಾಜ್, ರೈಲ್ವೆ ಆರ್.ಪಿ.ಎಫ್ ಮಧುಸೂದನ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.
ಕಾರ್ಕಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅತಿಥಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ಗ್ರಾಮದಲ್ಲಿ ಸಂಭವಿಸಿದೆ.
ಮೃತ ಮಹಿಳೆ ಮೂಡಬಿದ್ರೆ ಮೂಲದ ಈದು ಗ್ರಾಮದ ನಿವಾಸಿ ರಾಜೇಶ್ ಅವರ ಪತ್ನಿ ಪ್ರಸನ್ನಾ(29) ಎಂದು ಗುರುತಿಸಲಾಗಿದೆ.
ಇವರು ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ 10 ತಿಂಗಳ ಹೆಣ್ಣು ಮಗುವಿದ್ದು, ರಾಜೇಶ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಕಷ್ಟಪಟ್ಟು ಓದಿದ್ದರೂ ಬೇಗನೇ ಮಗು ಆಗಿರುವ ಕಾರಣದಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಪ್ರಸನ್ನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮನೆಯ ಡೈನಿಂಗ್ ಹಾಲ್ನಿಂದ ಮಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ
ಉಡುಪಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಜಿಲ್ಲೆ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪ್ರೀತಿಯ ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಿಎಚ್ಒ ಡಾ.ಐ.ಪಿ.ಗಡಾದ ಅವರು ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅಪ್ಪು ಅಭಿಮಾನಿಗಳ ಬಳಗದಿಂದ ಗಿರೀಶ್ ಕಡ್ಡಿಪುಡಿ ಮಾತನಾಡಿ ಜಿಲ್ಲೆಯಲ್ಲಿ ಈ ವರೆಗೂ ಕೈಗೊಂಡ ಸಾಮಾಜಿಕ ಕೆಲಸಗಳ ಬಗ್ಗೆ ವಿವರಿಸಿದರು. ಡಿಎಚ್ಒ ಮಾತನಾಡಿ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಅಪ್ಪು ಅಭಿಮಾನಿ ಬಳಗದೊಂದಿಗೆ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಆಯೋಜಿಸಿ, ನೇತ್ರದಾನ, ರಕ್ತದಾನ, ಹೃದಯ ಸಂಬಂಧಿ ಕಾಯಿಲೆಗಳ ವಿಷಯಗಳು ಮತ್ತು ಬಡ ನಿರ್ಗತಿಕ ರೋಗಿಗಳಿಗೆ ಸಹಾಯ ಹಸ್ತ ಚಾಚುವುದರೊಂದಿಗೆ ಜೊತೆಯಾಗಲಿದ್ದೇವೆ ಎಂದರು.
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪುಷ್ಪ ನಮನಗೈದರು. ಅಪ್ಪು ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ವತಿಯಿಂದ, ಪ್ರೀತಂ ಬಿ ಎಸ್, ಗುರುರಾಜ್ ಗಂಗಾಣಿ, ಮನು, ಗಗನ್ ವೀರೇಶ್, ರಕ್ಷಿತ್ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಮಹೇಶ್ ಗುಂಡಿಬೈಲು, ಸದಸ್ಯರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದುಬೈ ಗಡಿನಾಡ ಉತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಡಾ. ಫಖ್ರುದ್ದೀನ್ ಕುನಿಲ್ ಅವರಿಗೆ ಸನ್ಮಾನ
ಮಂಗಳೂರು : ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಆಯೋಜಿಸಲಾದ ದುಬೈ ಗಡಿನಾಡ ಉತ್ಸವಕ್ಕೆ ಸಾಕ್ಷಿಯಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅಕಾಡೆಮಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸುಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿಯನ್ನು ಕುನಿಲ್ ಗ್ರೂಪ್ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್, ಇವರಿಗೆ ನೀಡಿ ಗೌರವಿಸಿದೆ.
ಈ ಬಗ್ಗೆ ಡಾ. ಫಖ್ರುದ್ದೀನ್ ಕುನಿಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 35 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಶಿರಿಯಾ ಎಂಬ ಸಣ್ಣ ಗ್ರಾಮದಲ್ಲಿ ಡಾ। ಕುನಿಲ್ ಅವರ ಶೈಕ್ಷಣಿಕ ಯಾತ್ರೆಯು ಪ್ರಾರಂಭವಾಯಿತು. ಅಲ್ಲಿ ಅವರು ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಸಮಗ್ರ ಶಿಕ್ಷಣವನ್ನು ನೀಡುವ ಶಾಲೆಯನ್ನು ಸ್ಥಾಪಿಸಿದರು. ಸ್ಥಳೀಯ ಸಮುದಾಯದ ಸಹಕಾರದೊಂದಿಗೆ ಅವರು ಬದಿಯಡ್ಕದಲ್ಲಿ ಎರಡನೇ ಶಾಲೆಯನ್ನು ಸ್ಥಾಪಿಸಿದರು ಹಾಗೂ ಅವರ ನಿರಂತರ ಬೆಂಬಲದಿಂದ ಉತ್ತೇಜಿತರಾಗಿ, ಕರ್ನಾಟಕದ ನಾಟೆಕಲ್’ನಲ್ಲಿ ಮತ್ತು ತುಂಬೆಯಲ್ಲಿ ಕುನಿಲ್ ಶಾಲೆಗಳನ್ನು ವಿಸ್ತರಿಸಿದರು.
ನಾಲ್ಕು ಶಾಲೆಗಳು 7000 ವಿದ್ಯಾರ್ಥಿಗಳಿಗೆ ಪೋಷಕ ಭೂಮಿಯಾಗಿ ಮಾರ್ಪಟ್ಟಿವೆ. 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 100% ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿವೆ, ಇದು ಡಾ. ಫಖ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ದೊರೆತರೆ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್ ಅವರು ಬಿ.ಎ., ಬಿ.ಕಾಂ, ಬಿ.ಎಸ್ಸಿ ಮತ್ತು ಬಿ.ಬಿ.ಎ.ಯಲ್ಲಿ ಪದವಿ ಕೋರ್ಸ್ಗಳನ್ನು ಪರಿಚಯಿಸಲು ಯೋಜನೆಯನ್ನು ರೂಪಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಅವಕಾಶಗಳನ್ನು ಇನ್ನಷ್ಟು ಸಮೃದ್ಧಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕುನಿಲ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಪ್ರಸಾದ್ ನಾಯ್ಕ್ ಉಪಸ್ಥಿತರಿದ್ದರು.
ಉಡುಪಿ : ಮಲ್ಪೆ ಕೆಮ್ಮಣ್ಣು ಕುದ್ರು ನೆಕ್ಸ್ಟ್ ಪಡು ತೊನ್ಸೆಯಲ್ಲಿ ಕೊಳೆತ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ ಆಗಿದೆ.
ಮೃತರನ್ನು ಆತ್ರಾಡಿ ನಿವಾಸಿ ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ.
ಶವವನ್ನು ಮೇಲಕ್ಕೆತ್ತಲು ಅಲ್ವಿನ್, ಹರಿದಾಸ್, ಸತ್ಯ ನಿಖಿಲ್, ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಕೊಳೆತ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಲ್ಲಿ ಇಲಾಖೆಗೆ ನೇರವಾದರು.
ಮಲ್ಪೆ ಪೊಲೀಸ್ ಠಾಣೆಯ ಎಸ್.ಐ. ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಮಾಡಿದರು.
ಕುಕ್ಕಿಕಟ್ಟೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇದ್ದ ಹಿರಿಯ ವ್ಯಕ್ತಿಯ ರಕ್ಷಣೆ : ಹೊಸಬದುಕು ಆಶ್ರಮಕ್ಕೆ ದಾಖಲು
ಉಡುಪಿ : ಹಲವಾರು ವರ್ಷಗಳಿಂದ ಉಡುಪಿ ಕುಕ್ಕಿಕಟ್ಟೆಯ ಬಸ್ ನಿಲ್ದಾಣದಲ್ಲಿ ನೆಲೆಕಂಡ ಮಾನಸಿಕ ಹಿರಿಯ ವ್ಯಕ್ತಿ ಸಾರ್ವಜನಿಕರಿಗೆ ಕಲ್ಲು ಎಸೆದು ಭಯಾನಕ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಮನವಿಯ ಮೆರೆಗೆ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ರಕ್ಷಣೆ ಮಾಡಿ ಹೊಸಬದುಕು ಆಶ್ರಮಕ್ಕೆ ದಾಖಲು ಮಾಡಲಾಯಿತು.
ಸಮಾಜ ಸೇವಕರು ಸೇವಾ ಕಾರ್ಯಾಚರಣೆ ಮಾಡುವಾಗ ಮಾನಸಿಕವಾಗಿ ನೊಂದ ಹಿರಿಯ ವ್ಯಕ್ತಿ ಸಮಾಜ ಸೇವಕರಿಗೆ ಹೊಡೆಯಲು ಮುಂದಾದರು ಯಾವುದಕ್ಕೂ ಹೆದರದೆ ಹಿರಿಯ ವ್ಯಕ್ತಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕುಕ್ಕಿಕಟ್ಟೆ ಬಸ್ ನಿಲ್ದಾಣ ಆಸುಪಾಸು ದುರ್ವಾಸನೆ ನಾರುತ್ತಿದ್ದು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ನಿಲ್ಲಲು ಆಗದ ಪರಿಸ್ಥಿತಿ ಎದುರಾದಾಗ, ಪೊಲೀಸ್ ನೇತೃತ್ವದಲ್ಲಿ ಹೊಸಬದುಕು ಆಶ್ರಮದ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ಥಾನ ಹಾಗೂ ರಾಜಶ್ರೀಯವರು ಸ್ಥಳಕ್ಕೆ ಧಾವಿಸಿ ಹಿರಿಯ ವ್ಯಕ್ತಿಯನ್ನು ನೋಡಿ ಅದೇ ಸ್ಥಳದಲ್ಲಿ ಸ್ವಚ್ಛ ಮಾಡಿ, ಸ್ನಾನ ಮಾಡಿ, ಕೂದಲು ಕಟ್ ಮಾಡಿ ಸಂಪೂರ್ಣ ಸ್ವಚ್ಛಗೊಳಿಸಿ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿ : ನಿರ್ಗತಿಕರ ಸೇವಾ ಕೈಂಕರ್ಯದಲ್ಲಿ ನಿರತರಾಗಿರುವ ಕೋರ್ಟ್ ರಸ್ತೆಯ ಹೊಸಬದುಕು ಆಶ್ರಮಕ್ಕೆ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಿದರು.
ಉದ್ಯಮಿ ಮಹಮ್ಮದ್ ಆಸಿಫ್ ಇಕ್ಬಾಲ್ ಅವರು 100 ಊಟದ ತಟ್ಟೆಯದೊಂದಿಗೆ, 100 ಲೋಟವನ್ನು ನೀಡಿದರು. ಹಾಗೂ ಹಾಸಿಗೆಗಳನ್ನು ಉದ್ಯಮಿಗಳಾದ ಮುರಳೀಧರ ಬಲ್ಲಾಳ ಮತ್ತು ಗಿರಿಜಾ ಸರ್ಜಿಕಲ್ ವ್ಯವಸ್ಥಾಪಕರು ರವೀಂದ್ರ ಶೆಟ್ಟಿಯವರು ನೀಡಿದರು.
ವಸ್ತುರೂಪದ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗಿರಿಯಾಸ್ ಮಳಿಗೆಯ ವ್ಯವಸ್ಥಾಪಕರಾದ ರತನ್, ಹಾಗೂ ದಾನಿಗಳು ಉಪಸ್ಥಿತರಿದ್ದರು.
ಆಶ್ರಮ ಸಂಚಾಲಕ ವಿನಯಚಂದ್ರರು ಆಶ್ರಮದ ಧ್ಯೇಯವನ್ನು ಪ್ರಾಸ್ತಾವಿಕ ಮಾತಿನಲ್ಲಿ ಉಲ್ಲೇಖಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ವಾಗತಿಸಿದರು.