ಬೈಂದೂರು : ತಾಲೂಕು ಕಚೇರಿಯ ಸಭಾಂಗಣದಲ್ಲಿ ಬೈಂದೂರು ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕ ಬಂಧುಗಳೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆಯವರು ಸಭೆ ನಡೆಸಿದರು.
ಸಭೆಯಲ್ಲಿ ಕಾರ್ಮಿಕರು ಪ್ರಸ್ತುತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಲವು ಯೋಜನೆಗಳಿದ್ದರೂ ಇದರ ಬಗ್ಗೆ ಅರಿವಿರದೆ ಅಥವಾ ಯೋಜನೆಯ ಸವಲತ್ತು ಪಡೆಯಲು ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳದೇ ಯೋಜನೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಇಂತಹ ಕಾರ್ಮಿಕರನ್ನು ಹುಡುಕಿ ನಿಯಮಿತವಾಗಿ ಅದಾಲತ್ ನಡೆಸಿ ಕಾರ್ಮಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚಿಸಿದರು.
ಕಾರ್ಮಿಕರ ವಿವಿಧ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿಯೂ ನಿಯಮಿತವಾಗಿ ಗಮನ ಸೆಳೆಯಲಾಗುತ್ತಿದ್ದು, ಒಟ್ಟಾರೆಯಾಗಿ ಕಾರ್ಮಿಕರು ಎದುರಿಸುತ್ತಿರುವ ಅನ್ಯಾಯಗಳಿಗೆ ನ್ಯಾಯಯುತ ಪರಿಹಾರ ಒದಗಿಸಿಕೊಡಲು ಹಾಗೂ ಅವರಿಗೆ ಸಿಗಬಹುದಾದ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಭಾರತೀಯ ಕಾರ್ಮಿಕ ಸಂಘದ ಸಂಚಾಲಕರಾದ ಮೋಹನ್ ಚಂದ್ರ ಉಪ್ಪುಂದ, ಉಡುಪಿ ಜಿಲ್ಲಾ ಭಾರತೀಯ ಕಾರ್ಮಿಕ ಸಂಘದ ಪದಾಧಿಕಾರಿಗಳು, ಬೈಂದೂರು ತಾಲೂಕು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಬೈಂದೂರು ತಾಲೂಕು ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.