ಕುಂದಾಪುರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕ ಬಾಲಕಿಯರಿಗೆ ಹಲ್ಲೆ ನಡೆಸಿ ಬೆದರಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಲ್ಲಿ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ. ಎ.8ರಂದು ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತರೊಂದಿಗೆ ಉಡುಪಿಗೆ ಹೋಗಿ ವಾಪಾಸು ಮನೆಗೆ ಬರಲು ಉಡುಪಿಯಿಂದ ಖಾಸಗಿ ಬಸ್‌ನಲ್ಲಿ ಹೊರಟು ಸಂಜೆ ಕುಂದಾಪುರ ಶಾಸ್ತ್ರಿ ಪಾರ್ಕ್ ನಲ್ಲಿ ಇಳಿದಿದ್ದು, ಮುಂದಿನ ಪ್ರಯಾಣಕ್ಕಾಗಿ ಇನ್ನೊಂದು ಬಸ್ಸಿಗಾಗಿ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ಸಂಜೆ ಸುಮಾರು 06:45 ಗಂಟೆಗೆ ಮಹೇಶ್ ಬಾಲಕಿಯ ಹೆಸರನ್ನು ಕೇಳಿ ನಂತರ ಅವಳ ಜೊತೆಯಲ್ಲಿದ್ದವರ ಹೆಸರನ್ನು ಕೇಳಿದನು. ಬಳಿಕ ಅವರನ್ನು ಉದ್ದೇಶಿಸಿ ಆತ, ನಿಮಗೆ ತಿರುಗಾಡಲು ಹಿಂದೂ ಹುಡುಗಿ ಬೇಕಾ ಎಂದು ಅವಾಚ್ಯ ಶಬ್ದದಿಂದ ಬೈದು ಒಬ್ಬ ಹುಡುಗನಿಗೆ ಕೈಯಿಂದ ಹೊಡೆದಿದ್ದನು ಎಂದು ದೂರಲಾಗಿದೆ.
ಈ ವೇಳೆ ಸ್ಥಳೀಯರು ಸೇರಿ ಹೊಡೆಯದಂತೆ ತಡೆದಾಗ ಮಹೇಶ್ ಬಾಲಕಿಯನ್ನುದ್ದೇಶಿಸಿ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ಅಸಭ್ಯವಾಗಿ ಅಲ್ಲಿ ಸೇರಿದ್ದ ಸಾರ್ವಜನಿಕರ ಎದುರು ನಿಂದಿಸಿ ಬೈದನು. “ನೀನು ಇದೇ ರೀತಿ ಮುಸ್ಲಿಂ ಹುಡುಗರ ಜೊತೆಯಲ್ಲಿ ತಿರುಗಾಡಿದರೆ ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದನು ಎಂದು ದೂರಲಾಗಿದೆ.
ಮಹೇಶ್ ಸಾರ್ವಜನಿಕ ಸ್ಥಳದಲ್ಲಿ ನನ್ನ ಮಗಳ ಮಾನಕ್ಕೆ ಕುಂದುಂಟಾಗುವಂತೆ ನಿಂದಿಸಿ, ಅಶಾಂತಿ ಹರಡುವಂತೆ ಮಾಡಿ, ಬೈದು, ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಬಾಲಕಿಯ ತಾಯಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿ ಮಹೇಶ್ ನನ್ನು ಎ.10 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಗುರುವಾರ ಸಂಜೆ ವೇಳೆ ಕುಂದಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.