ಉಡುಪಿ : ಜಿಲ್ಲೆಯಲ್ಲಿ ಇಂದೂ ಕೂಡ ಮಳೆ ಮುಂದುವರೆದಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಶಾಲೆ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಉಡುಪಿಯಲ್ಲಿ ಬೆಳಿಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಇನ್ನು ಬೈಂದೂರು ತಾಲೂಕು ಸೇರಿದಂತೆ ಹೆಚ್ಚಿನೆಲ್ಲಾ ಕಡೆಗಳಲ್ಲಿ ನೆರೆ ಇಳಿದಿದ್ದರೂ, ಆಸ್ತಿ-ಪಾಸ್ತಿಗಳಿಗೆ ಹಾಗೂ ಸೊತ್ತುಗಳಿಗೆ ಆಗುತ್ತಿರುವ ಹಾನಿ ಮುಂದುವರಿದಿದೆ.

ಶುಕ್ರವಾರ ಜಿಲ್ಲೆಯಲ್ಲಿ ಎಂಟು ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು, ಇದರಿಂದ ಸುಮಾರು ನಾಲ್ಕು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ನಾಲ್ಕು ಜಾನುವಾರು ಕೊಟ್ಟಿಗೆಗೆ ಹಾನಿ ಹಾಗೂ ಒಂದು ಕಡೆ ತೋಟಗಾರಿಕಾ ಬೆಳೆಗೆ ಹಾನಿಯಾದ ವರದಿಗಳೂ ಬಂದಿವೆ. ಉಳಿದಂತೆ ಪುನರ್ವಸು ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು ಮೀನುಗಾರಿಕೆ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ.



