ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಯ್ಯಪ್ಪ ನಗರದ ನಿವಾಸಿ, ಅತ್ಯಾಚಾರಕ್ಕೀಡಾದ ಯುವತಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಪೆಡ್ಲರ್‌ಗಾಗಿ ತನಿಖೆ ಮುಂದುವರಿದಿದ್ದು, ಇವರಿಗೆ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂದು ಹೇಳಲಾಗುತ್ತಿದೆ. ಹಿಂದೂ ಯುವತಿಯನ್ನು ಆಗಸ್ಟ್ 24ರಂದು ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಎಂಬ ಮೂವರನ್ನು ಬಂಧಿಸಲಾಗಿದೆ. ಜತೆಗೆ ಮತ್ತಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇವರ ಪೈಕಿ ಓರ್ವ ಶಿರ್ವ ಮೂಲದವ ಹಾಗೂ ಇನ್ನೋರ್ವ ಬೆಂಗಳೂರು ಮೂಲದವ ಎನ್ನಲಾಗಿದೆ. ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು ಅದು ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಇನ್ನಿಬ್ಬರು ಶಂಕಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಘಟನೆ ಹಿಂದೆ ಬೃಹತ್ ಡ್ರಗ್ಸ್ ಮಾಫಿಯ ಇರುವುದು ತನಿಖೆಯಿಂದ ಪತ್ತೆಯಾಗಿದೆ. ಡ್ರಗ್ಸ್ ಜಾಲದ ಹಿಂದಿರುವ ವ್ಯಕ್ತಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.