Friday, November 22, 2024
Banner
Banner
Banner
Home » ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ವಾರ್ತಾಧಿಕಾರಿ ಮಂಜುನಾಥ್ ಬಿ

ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ವಾರ್ತಾಧಿಕಾರಿ ಮಂಜುನಾಥ್ ಬಿ

by NewsDesk

ಉಡುಪಿ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಕರೆ ನೀಡಿದರು.

ಅವರು ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇವರ ವತಿಯಿಂದ ಆಯೋಜಿಸಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗಳ ಜೊತೆಗೆ ಇತರೆ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರೊಂದಿಗೆ ಸಮುದಾಯದ ಸಮಸ್ಯೆಗಳನ್ನು ಅರಿತು ಸಹಾಯ ಮಾಡಲು ಮುಂದಾಗಬೇಕು. ಸಮಸ್ಯೆಗಳನ್ನು ಪರಿಹರಿಸುವುದರಿಂದ ಕೌಶಲ್ಯ ಹಾಗೂ ಜ್ಞಾನ ಬೆಳೆಯುತ್ತದೆ ಎಂದರು.

ಯುವಜನರು ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಸರಕಾರ ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರಗಳನ್ನು ಆಯೋಜಿಸಿದೆ. ಇದು ವಿದ್ಯಾರ್ಥಿಗಳ ಜೀವನದಲ್ಲಿ ನಾಯಕತ್ವ, ಶಿಸ್ತಿನ ಜತೆಗೆ ಸಾರ್ವತ್ರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಶಿಬಿರಗಳು ಅವಕಾಶಗಳ ವೇದಿಕೆಯಾಗಿದೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರು.

ಯುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಯುವಜನರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುವುದರೊಂದಿಗೆ ಅರ್ಥಪೂರ್ಣವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಸೇವೆಯಲ್ಲಿ ಸ್ವಾರ್ಥವಿರಬಾರದು. ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.

ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮಾತನಾಡಿ, ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿಯರು ಪಡೆದ ಅನುಭವಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಉತ್ತಮವಾಗಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು.

ಕಾಲೇಜಿನ ಶಿಕ್ಷಣ ಸೇವಾ ಸಮಿತಿಯ ಖಜಾಂಜಿ ಶೇಖರ್ ಕೋಟ್ಯಾನ್, ಮಲ್ಪೆಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಸಾಲ್ಯಾನ್, ಖಜಾಂಜಿ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ, ಶಿಕ್ಷಣ ತಜ್ಞ ವಿಶ್ವನಾಥ ಬಾಯರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ) ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ, ಉಪನ್ಯಾಸಕರುಗಳು, ಶಿಬಿರದ ನಾಯಕಿ ಸಹನಾ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕಿ ಶುಭಗೀತಾ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಭವ್ಯಾ ಧನ್ಯವಾದ ಸಮರ್ಪಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb