ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಕೃಷಿ ಇಲಾಖೆಗಳಲ್ಲಿನ ಹುದ್ದೆಗಳ ಭರ್ತಿಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರಿಗೆ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹೋಬಳಿ ಮಟ್ಟದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ವೃಂದದ ಮಂಜೂರಾದ ಒಟ್ಟು 3054 ಹುದ್ದೆಗಳ ಪೈಕಿ 614 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿ 22 ಹುದ್ದೆ ಮಂಜೂರುಗೊಂಡಿದ್ದರೆ 08 ಹುದ್ದೆ ಭರ್ತಿಯಾಗಿದೆ. ಸಹಾಯಕ ಕೃಷಿ ಅಧಿಕಾರಿ 40 ಹುದ್ದೆ ಮಂಜೂರಾಗಿದ್ದರೆ 03 ಹುದ್ದೆಗಳೆಷ್ಟೇ ಭರ್ತಿಯಾಗಿದೆ ಎಂದು ಹೇಳಿದ್ದಾರೆ.
ಕೃಷಿ ಇಲಾಖೆಯಲ್ಲಿ ಶೇಕಡಾ 80ರಷ್ಟು ಕ್ಷೇತ್ರ ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳ ಹುದ್ದೆ ಖಾಲಿ ಇದ್ದು ಸದರಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತಾದ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ವೃಂದದಲ್ಲಿ 945 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಅಂತಿಮ ಆಯ್ಕೆ ಪಟ್ಟಿ ಬಂದ ನಂತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಕೃಷಿ ಸಚಿವರು ಉತ್ತರಿಸಿದ್ದಾರೆ.