ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ವೇಷಧಾರಿಗಳಿಬ್ಬರು ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷಧರಿಸಿದ್ದು, ಇದೀಗ ಈ ವೇಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋ ತುಣುಕಿನಲ್ಲಿ ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷ ಧರಿಸಿದ ವೇಷಧಾರಿಗಳು ತುಳುವಿನಲ್ಲಿ ಮಾತನಾಡುವುದನ್ನು ನಾವಿಲ್ಲಿ ಕಾಣಬಹುದು.
ಉಡುಪಿ ಭಾಗದಲ್ಲಿ ನವರಾತ್ರಿಯ ಸಂದರ್ಭ ವೇಷ ಧರಿಸಿ ಮನೆ ಮನೆಗೆ ತೆರಳುವ ಸಂಪ್ರದಾಯವಿದೆ. ಪ್ರತಿ ವರ್ಷವೂ ವಿಭಿನ್ನ ಮತ್ತು ವಿಶೇಷವಾಗಿರುವ ವೇಷಗಳೊಂದಿಗೆ ಮನೆಮನೆಗೆ ವೇಷಧಾರಿಗಳು ಬರುತ್ತಾರೆ. ಹಾಗೆಯೇ ಪ್ರಸ್ತುತ ವಿದ್ಯಮಾನಗಳನ್ನು ಇಟ್ಟುಕೊಂಡು ವೇಷಧಾರಿಗಳಿಬ್ಬರು ನವರಾತ್ರಿ ವೇಷ ಧರಿಸಿದ್ದಾರೆ.
ರೇಣುಕಾ ಸ್ವಾಮಿಯ ಹತ್ಯೆಯ ಬಳಿಕ ಆತನ ಪ್ರೇತವನ್ನು ಕೊಂಡೊಯ್ಯಲು ಯಮರಾಜ ಬಂದಿದ್ದು, ಯಮರಾಜ ವೇಷಧಾರಿ ರೇಣುಕಾ ಸ್ವಾಮಿಯ ಪ್ರೇತವನ್ನು ಕೊಂಡೊಯ್ಯುವ ಹಾಸ್ಯ ಸನ್ನಿವೇಶವನ್ನು ಇಟ್ಟುಕೊಂಡು ವೇಷಧರಿಸಿದ್ದಾರೆ. ರೇಣುಕಾ ಸ್ವಾಮಿ ಪ್ರೇತ ಮತ್ತು ಯಮರಾಜ ವೇಷ ಗಮನ ಸೆಳೆಯುತ್ತಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.