ಕುಂದಾಪುರ : ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ ನಡೆಸಿ ಹುಂಡಿ ಹಣ ಕದ್ದೊಯ್ದ ಕಳ್ಳ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಅದನ್ನು ಇಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ.
ಹೆಮ್ಮಾಡಿಯ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಹಸಿರು ಚೀಲ ಇದ್ದುದನ್ನು ಗಮನಿಸಿದ್ದ ಶಿಕ್ಷಕರು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಭಾನುವಾರ ಶಾಲೆಗೆ ರಜೆ ಇದ್ದು, ಸೋಮವಾರವೂ ಅದೇ ಸ್ಥಳದಲ್ಲಿದ್ದ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಹಸಿರು ಚೀಲವನ್ನು ಬಿಡಿಸಿ ನೋಡಿದಾಗ ಹಣ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಮುಖ್ಯೋಪಾಧ್ಯಾಯರು ದೇವಸ್ಥಾನದ ಆಡಳಿತ ಮಂಡಳಿಗೆ ಸುದ್ದಿ ಮುಟ್ಟಿಸಿದ್ದು, ಆಡಳಿತ ಮಂಡಳಿಯವರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂದಾಪುರ ಅಪರಾಧ ವಿಭಾಗದ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಹಣವನ್ನು ವಶಕ್ಕೆಪಡದಿದ್ದಾರೆ.
ಇತ್ತೀಚೆಗಷ್ಟೇ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಶುಕ್ರವಾರ ತಡರಾತ್ರಿ ಬಾಗಿಲ ಚಿಲಕದ ಸ್ಕ್ರೂ ತೆಗೆದು ಒಳ ನುಗ್ಗಿದ ಕಳ್ಳ, ಹುಂಡಿ ಹಣ ಹಾಗೂ ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸೇವಾರ್ಥಿಗಳಿಂದ ಸಂಗ್ರಹಿಸಿದ ಹಣ ಕದ್ದು ಪರಾರಿಯಾಗಿದ್ದ. ಶನಿವಾರ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆಯಲು ಬಂದ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನದ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.