ಉಡುಪಿ : ಯುವ ಯಕ್ಷಗಾನ ಕಲಾವಿದ, ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ ಗುರುಪ್ರಸಾದ್ ಕುಲಾಲ್ (25) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಗುರುಪ್ರಸಾದ್ ಕುಲಾಲ್ ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು.
ಉಡುಪಿ : ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರೂ ಪ್ರಸಂಗಕರ್ತರೂ ಆಗಿದ್ದ ಅಗರಿ ಶ್ರೀನಿವಾಸ ಭಾಗವತರ ನೆನಪಿನಲ್ಲಿ ನೀಡುವ ಅಗರಿ ಪ್ರಶಸ್ತಿ ಹಾಗೂ ಅವರ ಸುಪುತ್ರರೂ ಶ್ರೇಷ್ಠ ಭಾಗವತರೂ ಆಗಿದ್ದ ಅಗರಿ ರಘುರಾಮ ಭಾಗವತರ ನೆನಪಿನಲ್ಲಿ ನೀಡುವ ಅಗರಿ ಸಮ್ಮಾನ ಪ್ರದಾನ ಕಾರ್ಯಕ್ರಮ ಜರಗಿತು.
ಅಗರಿ ಪ್ರಶಸ್ತಿಯನ್ನು ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಸ್ವೀಕರಿಸಿದರು. ಉಡುಪಿಯ ಯಕ್ಷಗಾನ ಕಲಾರಂಗದ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯನ್ನು ಗುರುತಿಸಿ ನೀಡಲಾದ ಅಗರಿ ಸಮ್ಮಾನವನ್ನು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವೀಕರಿಸಿದರು. ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಅಸ್ರಣ್ಣರು, ಶ್ರೀಪತಿ ಭಟ್, ಅಗರಿ ರಾಘವೇಂದ್ರ ರಾವ್, ಸುಮಂಗಲ ರತ್ನಾಕರ್, ವಾದಿರಾಜ ಕಲ್ಲುರಾಯ, ಕೃಷ್ಣಪ್ರಕಾಶ್ ಉಳಿತ್ತಾಯ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿತು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್.ಎನ್. ಶೃಂಗೇಶ್ವರ ಉಪಸ್ಥಿತರಿದ್ದರು.
ಉಡುಪಿ : ಇಂದು ಆಧುನಿಕತೆಯನ್ನು ಮೇಳೈಸಿಕೊಂಡು ವಿಜೃಂಭಿಸುತ್ತಿರುವ ಯಕ್ಷಗಾನ ಪ್ರದರ್ಶನದ ಅಬ್ಬರದ ನಡುವೆ ಶಾಸ್ತ್ರೀಯ ರೀತಿಯಲ್ಲಿ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ವಿದ್ವಾಂಸ ಡಾ.ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅನುಕರಣೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ವನಸುಮ ಟ್ರಸ್ಟ್ ಕಟಪಾಡಿ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ಶಾಸ್ತ್ರೀಯ ಯಕ್ಷ ಮೇಳ ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾ ಭವನದಲ್ಲಿ ಭಾನುವಾರ ನಡೆದ ಋತುಪರ್ಣ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನದ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಇಂದು ಆಧುನಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕಲಾವಿದರಿಗೆ ಉತ್ತಮ ಸಂಪಾದನೆಯ ದಾರಿ ನೀಡಿದೆ. ಹಿಂದಿನ ಯಕ್ಷಗಾನವನ್ನು ಕಂಡವರು, ಇಂದಿನ ಬದಲಾವಣೆಗಳನ್ನು ಕಂಡು ವ್ಯಥೆ ಪಟ್ಟಿರುವುದನ್ನು ಕಂಡಿದ್ದೇನೆ. ಈ ಸಂದರ್ಭದಲ್ಲಿ ಯಕ್ಷಗಾನದ ಶಾಸ್ತ್ರೀಯ ಮುಖ ಅಳಿದು ಹೋಗಬಾರದು ಎನ್ನುವ ತುಡಿತದೊಂದಿಗೆ ಎಲ್ಲಾ ವಿಭಾಗಗಳಲ್ಲಿ ವೃತ್ತಿಪರ ಪರಿಣತಿಯನ್ನು ಪಡೆದಿರುವ, ಪೂರ್ವ ತಯಾರಿಯಿಲ್ಲದ ಯಕ್ಷಗಾನಕ್ಕೆ ಸಮಯಾಧಾರಿತ ತಾಲೀಮು ಇದು ಶಾಸ್ತ್ರೀಯ ಯಕ್ಷಗಾನ ಮೇಳದ ವೈಶಿಷ್ಟö್ಯವಾಗಿರಬೇಕು ಎನ್ನುವ ತುಡಿತದೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದಿರುವ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅಭಿನಂದನೀಯ. ಅವರೊಂದಿಗೆ ಪ್ರಸಿದ್ಧ ರಂಗನಿರ್ದೇಶಕ ಬಾಸುಮ ಕೊಡಗು ಅವರ ಚಿಂತನೆಗಳು ಮೇಳೈಸಿರುವುದು, ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರ ಕಲಾ ಪ್ರೋತ್ಸಾಹ ಇದೆಲ್ಲಾವನ್ನು ಕಂಡಾಗ ಕರಾವಳಿಯಲ್ಲಿ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂಬುದು ವೇದ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ರಂಗ ಪ್ರಯೋಗಗಳು ವಿಶಿಷ್ಟವಾಗಿರುವುದನ್ನು ಕಂಡಿದ್ದೇನೆ. ಶಾಸ್ತ್ರೀಯ ಯಕ್ಷಮೇಳವನ್ನು ಹುಟ್ಟುಹಾಕಿ ಆ ಮೂಲಕ ಯುವ ಪೀಳಿಗೆಗೆ ಶಾಸ್ತೀಯ ಯಕ್ಷಗಾನವನ್ನು ಪರಿಚಯ ಮಾಡಲು ಹೊರಟ ಅವರ ಪ್ರಯತ್ನ ಶ್ಲಾಘನೀಯ ಎಂದರು.
ವನಸುಮ ಟ್ರಸ್ಟ್ನ ಮುಖ್ಯಸ್ಥ, ರಂಗ ನಿರ್ದೇಶಕ ಬಾಸುಮ ಕೊಡಗು ಅವರು ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ರೂವಾರಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ, ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಗಣೇಶ್ ರಾವ್ ಎಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಪ್ರದರ್ಶನಗೊಂಡ ಋತುಪರ್ಣ ಯಕ್ಷಗಾನ ಪ್ರದರ್ಶನದಲ್ಲಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಋತುಪರ್ಣನಾಗಿ ಪಾತ್ರ ವಹಿಸಿದರು. ಬಾಹುಕನಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ, ಶನಿ ಪಾತ್ರದಲ್ಲಿ ಶ್ರೀನಿವಾಸ ತಂತ್ರಿ ಪಾದೂರು ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಕಿರಣ ಮಣಿಪಾಲ, ಮದ್ದಳೆ ಕೆ.ಜೆ.ಸುಧೀಂದ್ರ ಹಾಗೂ ಚೆಂಡೆಯಲ್ಲಿ ಕೆ.ಜೆ.ಕೃಷ್ಣ ಸಹಕರಿಸಿದರು.
ಶ್ರೀ ಅಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಬಳಗದ ಪ್ರಯೋಜಕತ್ವದಿಂದ ಇತ್ತೀಚಿಗೆ ಅಗಲಿದ ಇರ್ವರು ಪ್ರಸಿದ್ಧ ಕಲಾವಿದರಾದ ಕೀರ್ತಿಶೇಷ ಸುಬ್ರಹ್ಮಣ್ಯ ದಾರೇಶ್ವರರ ಅನುಸ್ಮೃತಿ ಹಾಗೂ ಶ್ರೀಧರ ರಾವ್ ಕುಂಬ್ಳೆಯವರ ನುಡಿನಮನ ಯಕ್ಷಗಾನ ತಾಳಮದ್ದಳೆ ಶೇಣಿ ಗೋಪಾಲ ಕೃಷ್ಣ ಭಟ್ ವಿರಚಿತ ಕವಿರತ್ನ ಕಾಳಿದಾಸ ಮೂಡಬಿದರೆ ಸಮೀಪ ಸಂಪಿಗೆ ದುರ್ಗಾಜ್ಯೋತಿಷ್ಯಾಲಯದ ಡಾ. ಯೋಗಿ ಸುಧಾಕರ ತಂತ್ರಿಯವರ ಮನೆಯಂಗಳದಲ್ಲಿ ನಡೆಯಿತು.
ಕಾರ್ಯಕ್ರಮದ ಸನ್ಮಾನ ಹಾಗೂ ಪುಷ್ಪನಮನ ಸ್ವೀಕರಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಧಾರೇಶ್ವರರು ಸುಮಾರು ಹತ್ತು ವರ್ಷಗಳ ಕಾಲ ಉಡುಪಿ ರಾಜ್ಯಾಂಗಣದಲ್ಲಿ ಹಳೆಯ ಪೌರಾಣಿಕ ಪ್ರಸಂಗ ಯಕ್ಷಗಾನ ಅಷ್ಟಾಹ, ಸಪ್ತಾಹ ಮಾಡುತ್ತಿದ್ದೆವು. ಹಾಗೂ ಈ ವರ್ಷದ ಜಾನಪದ ಪ್ರಶಸ್ತಿಯನ್ನು ದಾರೇಶ್ವರರಿಗೆ ಕೊಡಬೇಕೆಂದು ಕೇಳಿದಾಗ ಈ ರೀತಿ ಕನಸಾಗಿ ಹೋಯಿತು ಎಂದು ನುಡಿದರು. ಅಲ್ಲದೇ ಮುಂದೆ ನನಗೆ ಒಂದು ಸರಕಾರದ ದೊಡ್ಡ ಜವಾಬ್ದಾರಿ ಎಂದರೇ ಈ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ “ಶ್ರೀದೇವಿ ಭುವನೇಶ್ವರೀ” ಎಂಬ ಯಕ್ಷಗಾನ ಪ್ರಸಂಗ ರಚನೆ ಮಾಡಿ ಯಕ್ಷಗಾನ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಮಂತ್ರಿಗಳು ಹೇಳಿದರು. ಅದಕ್ಕೆ ಹಲವಾರು ಯಕ್ಷಗಾನ ಕವಿಗಳನ್ನು ಸಂಪರ್ಕಿಸಿದಾಗ ಸಾಧ್ಯವಾಗದೇ ಇದ್ದಾಗ ಅದರ ಕಥೆ ಹಾಗೂ ಪ್ರಸಂಗ ರಚನೆಯನ್ನು ಕವಿ ಚಾರ ಪ್ರದೀಪ ಹೆಬ್ಬಾರ್ರಿಗೆ ಒಪ್ಪಿಕೊಂಡು ಪ್ರಾಥಕ್ಷತೆಗೆ ಮೊನ್ನೆ ಕೇವಲ ಎರಡು ದಿನದಲ್ಲಿ ಕರ್ನಾಟಕದ ಇತಿಹಾಸವನ್ನು ಬರೆದು ಕೊಟ್ಟರು. ಸೆಪ್ಟೆಂಬರ್ನಲ್ಲಿ ಮಂಗಳೂರು ಪುರಭವನದಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ ಪ್ರದರ್ಶನಕ್ಕೆ ತಾವೆಲ್ಲರೂ ಬನ್ನಿ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರ ಶಿವರಾಮ ಶೆಟ್ಟರು ಮುಂಗಡವಾಗಿ ಹೇಳಿದರು.
ಡಾ. ಜ್ಯೋಶಿಯವರು ಗಾನ ದಾರೆ ದಾರೇಶ್ವರ ಎಂದು ಸುಬ್ರಮಣ್ಯ ಧಾರೇಶ್ವರರು ಸಂಗೀತ, ಹಾಗೂ ಜಾನಪದ, ಹಾಗೂ ಪೌರಾಣಿಕ ಹಿಡಿತಗಳಿಂದ ಪ್ರಸಂಗದ ಯಶಸ್ಸಿಗೆ ಕಾರಣನಾಗುತ್ತಿದ್ದರು. ನಾನು ಕಿರಿಮಂಜೇಶ್ವರ ಕಡೆಗೆ ಹೋದರೆ ಅವರ ಮನೆಯೇ ನನಗೆ ವಾಸವಾಗಿತ್ತು ಎಂದು ಧಾರೇಶ್ವರರ ಬಗ್ಗೆ ಹಾಗೂ ಕುಂಬ್ಳೆಯವರು ಸರಳ ಸಜ್ಜನ ವ್ಯಕ್ತಿ ಎಂದು ಅನುಸ್ಮೃತಿ ಮಾಡಿದರು.
ಡಾ. ಗಾಳಿಮನೆಯವರು ಕುಂಬ್ಳೆಯವರು ತಮ್ಮ ಊರಿನ ತಾಳಮದ್ದಳೆ ನನ್ನ ಕರೆದುಕೊಂಡು ಹೋಗಿ ಆದರ ಆತಿಥ್ಯ ನೀಡರು. ತುಂಬಿದ ಕೊಡ ತುಳುಕುದಿಲ್ಲ ಎಂಬ ಮಾತಿನಂತೆ ಹಲವಾರು ಸಂದರ್ಭದಲ್ಲಿ ನನ್ನಲ್ಲಿ ಆ ಪಾತ್ರ ಮಾಡುವುದು ಹೇಗೆ ಎಂದು ಕೇಳುವಂತಹ ಮುಗ್ಧತೆ ಮಗುವಿನ ಮನಸ್ಸು ಶ್ರೀಧರರಾಯರ ಪ್ರೀತಿಗೆ ಶಿರಬಾಗುವೇ ಎಂದು ಹೇಳಿದರು. ಎರಡು ಅನರ್ಘ್ಯ ಯಕ್ಷಗಾನ ಕ್ಷೇತ್ರದ ಮಹಾನ್ ಚೇತನಗಳ ಅನುಸ್ಮೃತಿ ಮಾಡಲು ಚಾರ ಪ್ರದೀಪ ಹೆಬ್ಬಾರ್ ಹಾಗೂ ಡಾ. ಗಾಳಿಮನೆಯವರು ಕೇಳಿದಾಗ ಆಯಿತು ಒಪ್ಪಿಗೆ ಕೊಟ್ಟೆ, ಆದರೇ ನನ್ನ ಮನೆಯಂಗಳದಲ್ಲಿ ಮಾಡಲು ನಾನು ಸರಕಾರಕ್ಕೆ ತೆರಿಗೆ ವಿಧಿಸಬೇಕಾಯಿತು. ಯಾವುದೋ ತೆರಿಗೆ ಇಲಾಖೆಗೆ ದೂರು ನೀಡದ ಕಾರಣ ಈ ರೀತಿ ಡಾ. ಯೋಗಿ ತಂತ್ರಿಗಳು ಏನೆಯಾಗಲಿ ಈ ಕಾರ್ಯಕ್ರಮ ಮಾಡಲು ಒಪ್ಪಿದೆ. ಹಾಗೂ ನಾನು ಈ ಕಾರ್ಯಕ್ರಮದ ಸ್ಥಳ ಬಾಡಿಗೆ ಇಲ್ಲ. ಹಾಗೂ ಉಚಿತವಾಗಿ ಬಡವರಿಗೆ ಮದುವೆ, ಮುಂಜಿ ಸಣ್ಣ ಸಣ್ಣ ಕಾರ್ಯಕ್ರಮ ಮಾಡಲು ಅವಕಾಶವಿದೆ ಎಂದು ಡಾ. ಯೋಗಿ ಸುಧಾಕರ ತಂತ್ರಿಯವರು ಹೇಳಿದರು.
ಧನಲಕ್ಷ್ಮೀ ಗೇರು ಉದ್ಯಮದ ಮಾಲಕರು ಹಾಗೂ ಅಮ್ಹಾಯಃ ಯಕ್ಷ ಸಂಸ್ಕೃತಿ ಬಳಗದ ಗೌರವ ಸಲಹೆಗಾರರಾದ ಶ್ರೀಪತಿ ಭಟ್ರು ಇಂತಹ ಕಾರ್ಯಕ್ರಮ ಮಾಡಲು ನಮ್ಮಂತವರ ಪ್ರೋತ್ಸಹ ಇದ್ದೇ ಇದೆ. ಹಾಗೂ ಕಾಳಿದಾಸನ ಮಾಸವಾದ ಈ ಸಂದರ್ಭದೋಚಿತ ಯಕ್ಷಗಾನ ಪ್ರಸಂಗದ ಆಯ್ಕೆ ಕಲಾವಿದರ ಸಮಾಗಮ ಅನುಪಮ ಎಂದು ಅಧ್ಯಕ್ಷೀಯ ನುಡಿ ಹೇಳಿದರು. ಸಭೆಯಲ್ಲಿ ಕೆ. ರಮಾನಂದ ಪಂಡಿತರು ಹಿರಿಯ ವಕೀಲರು ಹಾಗೂ ಮೂಡಬಿದರೆ ಎಂಸಿಎಸ್ ಬ್ಯಾಂಕಿನ ವಿಶೇಷ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ ಎಂ ಉಪಸ್ಥಿತರಿದ್ದರು.
ಯುವ ಕವಿ ಚಾರ ಪ್ರದೀಪ ಹೆಬ್ಬಾರ್ ಪ್ರಸ್ತಾವನೆಗೈದರೆ, ಕೃಷ್ಣಮೂರ್ತಿ ಮಾಯಣ ಸ್ವಾಗತಿಸಿದರು. ತಮ್ಮ ಸೊಗಸಾದ ನುಡಿಮುತ್ತುಗಳಿಂದ ನೆಲ್ಲಿಮಾರ್ ಸದಾಶಿವ ರಾವ್ ನಿರೂಪಣೆಗೈದರು. ಬಡಗಿನ ಹಿಮ್ಮೇಳ ಮಲೆನಾಡಿನ ಕೋಗಿಲೆ ಶಿವಶಂಕರ ಭಟ್ ಹರಿಹರಪುರದ ಭಾಗವತಿಗೆಗೆ ಕೋಟ ಶಿವಾನಂದರ ಹಾಗೂ ರಾಘವೇಂದ್ರ ಹೆಗಡೆ ಯಲ್ಲಾಪುರರ ಚಂಡೆ-ಮದ್ದಲೆಯ ಸಾಥ್ ನೀಡಿದರು. ಡಾ. ಜ್ಯೋಶಿ ಭೋಜರಾಜನ ಪಾತ್ರವಾದರೆ, ಕಾಳಿದಾಸನ ಪಾತ್ರದಲ್ಲಿ ಡಾ. ಗಾಳಿಮನೆಯವರು ಸಂಸ್ಕೃತ ಮಿಶ್ರಣ ಮಾತುಗಳು, ವಿಧ್ಯಾದರೆಯಾಗಿ ಕೆರೆಗದ್ದೆಯವರ ಲಾವಣ್ಯ, ನೆಲ್ಲಿಮರ್ ರ ಗಣಿಕಾಂಗನೆ ರತ್ನಕಲೆ ಹಾಗೂ ಪಂಡಿತ ಕವಿ ಡಿಂಡಿಮ ಮತ್ತು ಸುಭಾಹು ಮಹಾರಾಜನಾಗಿ, ಚಾರರ ಮೊದಲಾರ್ಧ ಕಾಳನ ಪಾತ್ರದಲ್ಲಿ ಕವಿರತ್ನ ಕಾಳಿದಾಸ ಯಕ್ಷಗಾನ ನಡೆಯಿತು.
ಯಕ್ಷಸಂಸ್ಕೃತಿ ಬಳಗ ಗಾಳಿಮನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ದ.ಕ ಪ್ರಾಯೋಜಕತ್ವದಲ್ಲಿ ನಾಡಿನ ಗಣ್ಯರಿಂದ ಧಾರೇಶ್ವರ ಅನುಸ್ಮೃತಿ, ಕುಂಬ್ಳೆ ಶ್ರೀಧರ ರಾವ್ ನುಡಿನಮನ
ಭಾಗವತೋತ್ತಮ-ರಂಗಸೂತ್ರಧಾರೀ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ವಿನಯಶೀಲ ಹಿರಿಯ ಕಲಾವಿದ ಶ್ರೀಧರ ಕುಂಬ್ಳೆ ಸಂಸ್ಮೃತಿ ಹಾಗೂ ಕಾಳಿದಾಸ ಮಾಸದ ಅಂಗವಾಗಿ ಯಕ್ಷಗಾನ ತಾಳಮದ್ದಳೆ
ಕವಿ-ಶೇಣಿ ಗೋಪಾಲಕೃಷ್ಣ ಭಟ್ಟರು
ಅಖ್ಯಾನ : ಕವಿರತ್ನ ಕಾಳಿದಾಸ
ಸ್ಥಳ : ಶ್ರೀ ದುರ್ಗಾ ಜ್ಯೋತಿಷ್ಯಾಲಯ ಸಂಪಿಗೆ, ಮೂಡುಬಿದಿರೆ ಮನೆಯಂಗಳದಲ್ಲಿ
ಆಷಾಡ ಶುದ್ದ ಚತುರ್ದಶೀ (14.04.5126)
20.07.2024 ಶನಿವಾರ ಅಪರಾಹ್ನ 02.00 ಗಂಟೆಗೆ
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ “ಐಲೇಸಾ ದಿ ವಾಯ್ಸ್ ಆಫ್ ಓಷ್ಯನ್” ವತಿಯಿಂದ “ಐ-ಲೇಸಾ ವಿಜಯಕಲಾ ರಂಗೋತ್ಸವ”ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭವು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇದೇ ಬರುವ ದಿನಾಂಕ 21-07-2024 ಭಾನುವಾರ ಬೆಂಗಳೂರಿನ ಬನ್ನೇರುಘಟ್ಟ ಮಾರ್ಗದ, ವಿಜಯಾ ಬ್ಯಾಂಕ್ ಲೇಔಟ್ ನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣ”ದಲ್ಲಿ ನಡೆಯಲಿದೆ.
ಶರತ್ ಶೆಟ್ಟಿ ನೇತೃತ್ವದ ತುಳುನಾಡಿನ ಖ್ಯಾತ ರಂಗಭೂಮಿ ಸಂಸ್ಥೆ “ವಿಜಯ ಕಲಾವಿದರು ಕಿನ್ನಿಗೋಳಿ” ಇವರ 25ನೇ ವಾರ್ಷಿಕ ಸಂಭ್ರಮಾರ್ಥವಾಗಿ ತುಳು ಹಾಸ್ಯಮಯ ಸಾಮಾಜಿಕ ನಾಟಕ “ತೊಟ್ಟಿಲ್” ಪ್ರದರ್ಶನವಿದೆ.
“ಐ-ಲೇಸಾ ದಿ ವಾಯ್ಸ್ ಆಫ್ ಓಷ್ಯನ್(ರಿ)” ನಿರ್ಮಾಣದ ಹೊಸ ತುಳು ಭಾವಗೀತೆಗಳನ್ನು ಖ್ಯಾತ ಸಂಗೀತ ನಿರ್ದೇಶಕ ಶ್ರೀ ವಿ. ಮನೋಹರ್ ಲೋಕಾರ್ಪಣೆ ಗೊಳಿಸಲಿದ್ದಾರೆ. ಬಹು ಭಾಷಾ ತಾರಾ ಗಾಯಕ ಡಾ. ರಮೇಶ್ಚಂದ್ರರೊಂದಿಗೆ ಹಾಡುಗಳ ಮೂಲ ಗಾಯಕರೇ ಸಂಗೀತ ರಸಮಂಜರಿಯನ್ನು ಪ್ರಸ್ತುತ ಪಡಿಸಲಿದ್ದಾರೆ.
“ಯಕ್ಷತರಂಗ ಬೆಂಗಳೂರು (ರಿ)” ಸಂಸ್ಥೆಯ ಬಾಲ ಕಲಾವಿದರಿಂದ “ಶ್ರೀ ಕೃಷ್ಣ ಲೀಲೆ-ಕಂಸ ವದೆ” ಯಕ್ಷಗಾನ ಪ್ರದರ್ಶನವಿದೆ.
ಬೆಂಗಳೂರಿನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ನಗರ”ದ ನಾಗರಿಕ ಬಂಧುಗಳು ತುಂಬು ಸಹಕಾರ ನೀಡಲಿದ್ದಾರೆ. 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ “ವಿಜಯ ಕಲಾವಿದರು ಕಿನ್ನಿಗೋಳಿ” ತಂಡವನ್ನು ರಾಜಧಾನಿ ಬೆಂಗಳೂರಿನಲ್ಲಿ ಉದ್ಯಮಿ, ಕಲಾ ಪೋಷಕ ಶ್ರೀ ಭವಾನಿಶಂಕರ್ ಶೆಟ್ಟಿಯವರು ಸನ್ಮಾನಿಸಿ ಅಭಿನಂದಿಸಲಿದ್ದಾರೆ.
ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಾಗಿದ್ದು, ಸಮಸ್ತ ಕಲಾಭಿಮಾನಿಗಳಿಗೆ “ಟೀಮ್ ಐ-ಲೇಸಾ” ತುಂಬು ಹೃದಯದ ಸ್ವಾಗತ ಕೋರಿದ್ದಾರೆ.
ಕೋಟ : ಗಾಣಿಗ ಯುವ ಸಂಘಟನೆ ಕೋಟ ಘಟಕ ಆಶ್ರಯದಲ್ಲಿ, ಗಾಣಿಗ ಮಹಿಳಾ ಸಂಘಟನೆ ಹಾಗೂ ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸಹಕಾರದೊಂದಿಗೆ 2024ನೇ ಸಾಲಿನ ದಿ.ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಯುವ ಸಂಗಮ ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರಗಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸಮಾಜದ ಕೊಡುಗೆ ಅಪಾರವಾದರೆ, ಅದರಲ್ಲೂ ಹಾರಾಡಿ ಮನೆತನ ಯಕ್ಷಗಾನ ಕ್ಷೇತ್ರದಲ್ಲಿ ಚಿರಸ್ಥಾಯಿಯಾದ ಹೆಸರಾಗಿದೆ. ಹಾರಾಡಿ ದಿ.ಮಹಾಬಲ ಗಾಣಿಗರ ಸಂಸ್ಮರಣೆಗಾಗಿ ಸ್ಥಾಪಿಸಿರುವ ಈ ಪ್ರಶಸ್ತಿ ಗೌರವಯುತವಾಗಿದೆ ಎಂದರು.
ಹಿರಿಯ ಯಕ್ಷಗಾನ ವಿದ್ವಾಂಸ ಗುಂಡ್ಮಿ ಸದಾನಂದ ಐತಾಳ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಜೋಡೆ ಕೋರೆ ಮುಂಡಾಸು ಮಹಾಬಲ ಗಾಣಿಗರಿಗೇ ಮೀಸಲಾಗಿತ್ತು. ಅವರ ನಿಧನದ ಅನಂತರ ವೃತ್ತಿ ರಂಗದಲ್ಲಿ ಈ ವಿಶೇಷ ಸಂಪೂರ್ಣ ಮರೆಯಾಯಿತು. ಹಿರಿಯ ಕಲಾವಿದರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಈ ಸಂದರ್ಭ ಮಂದಾರ್ತಿ ಮೇಳದ ಎರಡನೇ ವೇಷಧಾರಿ, ಹಿರಿಯ ಕಲಾವಿದ ಆಜ್ರಿ ಗೋಪಾಲ ಗಾಣಿಗರಿಗೆ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಣಿಗ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಗತಿಪರ ಕೃಷಿಕರಾದ ಚಂದ್ರಶೇಖರ್ ಗಾಣಿಗ ಹಂದಟ್ಟು, ಸಾಸ್ತಾನ ಸಹಕಾರಿ ಸಂಘದ ನಿರ್ದೇಶಕ ಆನಂದ ಗಾಣಿಗ ಮಾಬುಕಳ ಹಾಗೂ ಗಾಣಿಗ ಸಮಾಜದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಮ್ಮಾನ, ದಿ.ವಸಂತಿ ಹಾಗೂ ದಿ. ಸುಬ್ಬ ಗಾಣಿಗ ಐರೋಡಿ ಸ್ಮರಣಾರ್ಥ ಸಂತೋಷ್ ಕುಮಾರ್ ಮತ್ತು ಶೇವಧಿ ಸುರೇಶ್ ಗಾಣಿಗ ಕೊಡಮಾಡಿದ ಶೈಕ್ಷಣಿಕ ಪರಿಕರಗಳ ವಿತರಣೆ ನಡೆಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಉಪಾಧ್ಯಕ್ಷ ಉದಯ ಕುಮಾರ್ ಕೆ., ಶೇವಧಿ ಸುರೇಶ್ ಗಾಣಿಗ, ಉದ್ಯಮಿ ನಿತೀನ್ ನಾರಾಯಣ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್ ಗಾಣಿಗ ಕೋಟ, ಕೋಟ ಘಟಕದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ ಕಾರ್ಕಡ, ಮಹಿಳಾ ಸಂಘಟನೆ ಅಧ್ಯಕ್ಷೆ ರೇಖಾ ಗಣೇಶ್, ಮಹಾಬಲ ಗಾಣಿಗ ಮಕ್ಕಳಾದ ವಿಶ್ವನಾಥ ಕಾರ್ತಟ್ಟು, ಜನಾರ್ಧನ ಬ್ರಹ್ಮಾವರ, ವಸಂತಿರಾಜು ಕಾರ್ತಟ್ಟು ಮತ್ತು ಕುಟುಂಬ ಸದಸ್ಯರು ಇದ್ದರು.
ಸಂಘಟನೆಯ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ಸ್ವಾಗತಿಸಿ, ನಾಗರಾಜ್ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಗಾಣಿಗ ಅತಿಥಿಗಳನ್ನು ಪರಿಚಯಿಸಿ, ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆನಂದ ಮಾಬುಕಳ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ಯಕ್ಷಗಾನದ ಇತಿಹಾಸದಲ್ಲೇ ಅಪರೂಪಕ್ಕೆ ಸಮಗ್ರ ಗಾಣಿಗ ಕಲಾವಿದರಿಂದ ಕೂಡಿದ ಭೀಷ್ಮವಿಜಯ ಯಕ್ಷಗಾನ ನಡೆಯಿತು.
ಮಂಗಳೂರು : ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಂಸತ್ತಿನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಶಾಸಕ ಡಾ. ಭರತ್ ಶೆಟ್ಟಿ ಬಿಜೆಪಿಗರಿಂದ ಹಿಂದೂ ಧರ್ಮಕ್ಕಾದ ಅವಮಾನಗಳಿಗೇಕೆ ತುಟಿಬಿಚ್ಚದೆ ಮೌನವಾಗಿದ್ದಾರೆ. ಸಾಧ್ಯವಾದರೆ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಸವಾಲೆಸೆದಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಭರತ್ ಶೆಟ್ಟಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿರುವ ವಿನಯರಾಜ್, ಪರಶುರಾಮನ ಕಂಚಿನ ಮೂರ್ತಿಯೆಂದು ಆಗಿನ ಬಿಜೆಪಿ ಸಚಿವ ಸುನಿಲ್ ಕುಮಾರ್ ಫೈಬರ್ ಮೂರ್ತಿ ಸ್ಥಾಪಿಸಿ ಮೋಸ ಮಾಡಿದಾಗ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿಲ್ಲವೇ? ಶಿವದೂತ ಗುಳಿಗ ದೈವವನ್ನು ಬಿಜೆಪಿಯ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಗುಳಿಗೆ ಎಂದರೆ ನಮ್ಮ ಕಡೆ ಮಾತ್ರೆ ಎಂದು ಅವಹೇಳನ ಮಾಡಿದಾಗ ಭರತ್ ಶೆಟ್ಟಿಯವರು ನಾಲಗೆ ಯಾಕೆ ಹರಿಬಿಟ್ಟಲ್ಲ ಎಂದು ಪ್ರಶ್ನಿಸಿದರು.
ಸ್ಪೀಕರ್ ಯು.ಟಿ.ಖಾದರ್ ತುಳುಭಾಷೆಯನ್ನು ತುಳನಾಡಿನ “ದೈವಗಳು ಮಾತನಾಡುವ ಭಾಷೆ” ಎಂದಾಗ ಬಿಜೆಪಿ ಮಂತ್ರಿ ಮಾಧುಸ್ವಾಮಿ ‘ನಿಮ್ಮ ಕಡೆ ದೈವಗಳು ಮಾತನಾಡುತ್ತವೆಯೇ?’ ಎಂದು ತಮಾಷೆ ಮಾಡಿದಾಗ ಯಾಕೆ ಮಾತನಾಡಿಲ್ಲ? ಯಕ್ಷಗಾನದಲ್ಲಿ ಗಣಪತಿ ದೇವರ ಬಗ್ಗೆ ತಮಾಷೆ ಮಾಡಿದಾಗ ಚಕಾರವೆತ್ತಿಲ್ಲ. ಕೊರೋನ ವೇಳೆ ವಾಮಂಜೂರು ಸ್ಮಶಾನದಲ್ಲಿ ಹಿಂದೂ ಮಹಿಳೆಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದಾಗ ಡಾ. ಭರತ್ ಶೆಟ್ಟಿಯವರಿಗೆ ಮರೆತುಹೋದ ಹಿಂದೂಗಳ ಕಾಳಜಿ ಈಗ ನೆನಪಿಗೆ ಬಂತೇ ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯೆಯಿಂದಲೇ ಕದ್ರಿ ದೇವಸ್ಥಾನದ ಹುಂಡಿಹಣ ಕಳವಾಗಿದೆ ಎಂಬ ಆರೋಪ ಬಂದಾಗ, ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶಿಸಲು ತಡೆದಾಗ, ನಾರಾಯಣ ಗುರುಗಳ ಪಠ್ಯವನ್ನು ಪಠ್ಯಪುಸ್ತಕದಿಂದ ಕಿತ್ತೆಸೆದಾಗ ಯಾಕೆ ಮಾತನಾಡಿಲ್ಲ. ಹಿಂದೂ ಶಾಸಕನಾಗಿ ಇವರು ತಮ್ಮ ಸಂಸ್ಕೃತಿಯನ್ನು ಮರೆತಂತಿದೆ. ಶಸ್ತ್ರಾಸ್ತ್ರ ಹಿಡಿಯಬೇಕೆಂದು ಹಿಂದೂ ಯುವಕರ ದಾರಿ ತಪ್ಪಿಸುವ ಕೆಲಸವನ್ನು ಭರತ್ ಶೆಟ್ಟಿ ಮಾಡುತ್ತಿದ್ದಾರೆ. ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲೆತ್ನಿಸುವ ನೀವು ಜನಪ್ರತಿನಿಧಿಯಾಗಲು ನಾಲಾಯಕ್ ಮನುಷ್ಯ ಎಂದು ವಿನಯ್ರಾಜ್ ಕಿಡಿಕಾರಿದರು.
ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗ ಮಳೆಗಾಲದ ವಿಶೇಷ ಯಕ್ಷಗಾನ ಪ್ರದರ್ಶನವಾಗಿ ‘ಶ್ರೀ ಕಲ್ಯಾಣ’ ಕಥಾನಕವು ಇತ್ತೀಚೆಗೆ ಕಲಾರಂಗ-ಐವೈಸಿ ಸಭಾಂಗಣದಲ್ಲಿ ಸಂಪನ್ನಗೊಂಡಿದ್ದು ಸುಮಾರು ಐವತ್ತು ಮಂದಿ ರಂಗಕಲಾವಿದರು, ನೇಪಥ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
‘ಶ್ರೀ ಕಲ್ಯಾಣ’ ಯಕ್ಷಗಾನ ಕಥಾನಕವನ್ನು ಭವಿಷ್ಯೋತ್ತರ ಪುರಾಣವೂ ಸೇರಿದಂತೆ ಹಲವು ಕಥಾಮೂಲಗಳಿಂದ ಆಯ್ದುಕೊಳ್ಳಲಾಗಿದೆ. ಮಧ್ಯಕಾಲೀನ ಸಂದರ್ಭದ ಭಕ್ತಿಪಂಥದ ಚಳುವಳಿಯಿಂದ ಪ್ರಭಾವಕ್ಕೊಳಗಾಗಿರುವ ಈ ಕಥಾನಕವು ದೇವರು ಮತ್ತು ಲೌಕಿಕರ ನಡುವಿನ ಸಂಬಂಧವನ್ನು ಹೆಚ್ಚು ಹತ್ತಿರವಾಗಿಸುವುದಕ್ಕೆ ದೃಷ್ಟಾಂತದಂತಿದೆ. ಕಲಿಯುಗದ ಯುಗಧರ್ಮಕ್ಕೆ ಅನುಸಾರವಾಗಿ ದೇವರೇ ಭಕ್ತರ ಮಟ್ಟಕ್ಕಿಳಿದು, ಲೋಕದಲ್ಲಿ ಭಕ್ತಿಯ ಅನುಸಂಧಾನವನ್ನು ಜಾಗೃತಗೊಳಿಸುವುದು ಈ ಕಥಾನಕದ ಆಶಯ. ಆದ್ದರಿಂದಲೇ ದೇವರು ಇಲ್ಲಿ ಸಾಮಾನ್ಯನಂತೆ ಪಾಡುಪಡುತ್ತ ಸಾಲ ಮಾಡಿ ಮದುವೆಯಾಗುವುದಕ್ಕೆ ಮುಂದಾಗಿ, ಆ ಸಾಲವನ್ನು ಭಕ್ತರ ಕೈಯಿಂದ ತೀರಿಸಿಕೊಳ್ಳುವ ಬದ್ಧತೆಗೊಳಗಾಗಿ, ಆ ಮೂಲಕ ಭಕ್ತರನ್ನು ತನ್ನ ಸಾಮೀಪ್ಯದಲ್ಲಿಯೇ ಇರಿಸಿಕೊಳ್ಳುತ್ತಾನೆ. ಪ್ರದರ್ಶನದ ಕೊನೆಗೆ ಪ್ರಸ್ತುತಿಗೊಂಡ ‘ವೇಂಕಟೇಶ್ವರ-ಪದ್ಮಾವತಿ ಕಲ್ಯಾಣ ಮಹೋತ್ಸವ’ವು ಸಹೃದಯ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ಕೊನೆಗೆ ಭಕ್ತಾದಿಗಳು ಭಜನೆ ಹಾಡುತ್ತ ಭಕ್ತಿಭಾವನೆಯನ್ನು ಪ್ರಕಟಪಡಿಸುವುದರ ಮೂಲಕ ಕಥಾನಕಕ್ಕೆ ಮಂಗಳ ಹಾಡುವ ದೃಶ್ಯದೊಂದಿಗೆ ಪ್ರದರ್ಶನ ಸಮಾಪನಗೊಂಡಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರದರ್ಶನವನ್ನು ಸಂಯೋಜಿಸಿದರೆ, ಆರಂಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವೀರಾಜ ಕವತ್ತಾರು ಅವರು ಪೂರ್ಣಕಥಾನಕವನ್ನು ಸಂಕಲನಗೊಳಿಸಿ, ಪ್ರದರ್ಶನದ ನಿರ್ದೇಶನ ನೀಡಿದರು. ಎಸ್. ಗಣರಾಜ ಭಟ್ ರಂಗಸಜ್ಜಿಕೆಯನ್ನು ನಿರ್ವಹಿಸಿದರು. ವಿದ್ಯಾಪ್ರಸಾದ್ ಅವರು ವಿಸ್ತೃತವಾದ ಮೂಲಕಥನವನ್ನು ರಂಗಪಠ್ಯವಾಗಿಸುವಲ್ಲಿ ಸಹಕರಿಸಿದರು.
ಉಡುಪಿ : ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ (75) ಹೊನ್ನಾವರದಲ್ಲಿ ನಿಧನರಾದರು. ಅವರು ಪತ್ನಿ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆಯವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು. ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ,ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಲಾ ಸೇವೆ ಗೈದಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಾ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಸರಳ ಸಜ್ಜನಿಕೆಯ ಕಲಾವಿದರು ಎಂದೇ ಮಾನಿತರಾಗಿದ್ದ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.