Weather Impact
ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಪುನರ್ವಸು ಮಳೆ ಅಬ್ಬರ; ಜನ, ಜಾನುವಾರುಗಳ ರಕ್ಷಣೆ
ಉಡುಪಿ : ಜಿಲ್ಲೆಯಲ್ಲಿ ನಿನ್ನೆ ಪ್ರಾರಂಭಗೊಂಡ ಮಳೆ ಮುಂದುವರೆದಿದ್ದು ಉಡುಪಿಯ ಹಲವೆಡೆ ಜನ ಜಾನುವಾರುಗಳನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. ಮುಖ್ಯವಾಗಿ ತಗ್ಗುಪ್ರದೇಶಗಳಾದ ಬೈಲಕೆರೆ, ಕಲ್ಸಂಕ ಮಠದಬೆಟ್ಟುವಿನ ಬಹುಭಾಗ ಜಲಾವೃತಗೊಂಡಿವೆ. ಗುಂಡಿಬೈಲುವಿನಲ್ಲಿ ನೆರೆ ನೀರು ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ್ದ ಅಗ್ನಿಶಾಮಕ ದಳ ಹಲವರನ್ನು ರಕ್ಷಣೆ ಮಾಡಿದೆ.
ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ನಡೆಸಿ ಒಂದೇ ಮನೆಯ ಮೂವರನ್ನು ರಕ್ಷಣೆ ಮಾಡಿತು. ಉಳಿದಂತೆ ಪಾಡಿಗಾರು ಸಮೀಪ ನಾಲ್ಕು ಮನೆಗಳಿಂದ ಜನರನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಪೊಲೀಸ್ ಅಗ್ನಿಶಾಮಕ ದಳದ ಜೊತೆಗೆ ಸಾರ್ವಜನಿಕರು ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು.
ಗುಂಡಿಬೈಲುವಿನಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಸ್ಥಳಕ್ಕೆ ನಗರಸಭೆ ಆಯುಕ್ತ ರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬೈಂದೂರು ಮತ್ತು ಕುಂದಾಪುರದಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು ಆ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಉಡುಪಿ : ಉಡುಪಿಯಲ್ಲಿ ಮಳೆ ಮುಂದುವರಿದಿದ್ದು ಅಪಾರ ಆಸ್ತಿಪಾಸ್ತಿ ನಷ್ಡ ಸಂಭವಿಸಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವರನ್ನು ರಕ್ಷಣೆ ಮಾಡಲಾಗಿದೆ. ಈ ಮಧ್ಯೆ ನೆರೆ ನೀರಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದ್ದು,
ಅದೃಷ್ಟವಶಾತ್ ಅದರಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿಯ ಕನ್ನರ್ಪಾಡಿ-ಕಡೆಕ್ಕಾರು ಸಂಪರ್ಕ ರಸ್ತೆಯಲ್ಲಿ ಸಂಭವಿಸಿದೆ.
ಮಳೆಗೆ ಸಂಪೂರ್ಣ ಜಲಾವೃತ ವಾಗಿದ್ದ ರಸ್ತೆಯಲ್ಲೇ ಕಾರು ಚಾಲಕ ಕಾರನ್ನು ಚಲಾಯಿಸಿದ್ದ. ಈ ವೇಳೆ ನೀರಿನ ಹರಿವಿನ ರಭಸಕ್ಕೆ ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ವೇಳೆ ಕಾರಿನಿಂದ ಹೊರಕ್ಕೆ ಜಿಗಿದು ನಾಲ್ವರು ಪ್ರಾಣ ಉಳಿಸಿಕೊಂಡಿದ್ದಾರೆ. ಕೊನೆಗೆ ಗದ್ದೆಯಲ್ಲಿ ಸಿಲುಕಿಕೊಂಡ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಬಂಟ್ವಾಳ : ಇಲ್ಲಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಬಳಿ ಶನಿವಾರ ಬೆಳಗ್ಗೆ ಬೀಸಿದ ಬಿರುಗಾಳಿಗೆ ಅಂಗಡಿ – ಮುಂಗಟ್ಟುಗಳ ಮೇಲ್ಛಾವಣಿ ತಗಡುಶೀಟುಗಳು ಹಾರಿಹೋಗಿರುವ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ಜೋರಾಗಿ ಬಿರುಗಾಳಿ ಬೀಸಿದೆ. ಈ ವೇಳೆ ಖಾದರ್ ಇಕ್ರಾ ಎಂಬವರಿಗೆ ಸೇರಿರುವ ಅಂಗಡಿಗೆ ಅಳವಡಿಸಿರುವ ಶೀಟ್ಗಳು ಹಾರಿ ಹೋಗಿದೆ. ಅದರ ವೀಡಿಯೋ ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿವೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ ಸಾವುನೋವುಗಳು ಸಂಭವಿಸಿಲ್ಲ.
ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿ, ಲಕ್ಷಾಂತರ ರೂ.ನಷ್ಟ; ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ
ಉಡುಪಿ : ಒಂದು ವಾರದ ಮಳೆ ಉಡುಪಿಯಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಮುಖ್ಯವಾಗಿ ಎರಡು ದಿನಗಳ ಗಾಳಿಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಂದು ಬಂದ ಭಾರೀ ಗಾಳಿ ಮಳೆಗೆ ಉಡುಪಿ ತಾಲೂಕಿನ ಕರ್ಜೆ ಗ್ರಾಮದ ಕುರ್ಪಾಡಿ ಭಾಗದಲ್ಲಿ ಸುಮಾರು 36 ಮನೆಗಳಿಗೆ ತೀವ್ರ ಹಾನಿಯಾಗಿದೆ. ಹಲವಾರು ಮರ, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ಸಮಸ್ಯೆಯಾಗಿದೆ. ಕಡೇಕಾರ್ ಗ್ರಾಮದಲ್ಲೂ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಈಗಾಗಲೇ ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಜನರ ನರವಿಗೆ ಧಾವಿಸಿದ್ದಾರೆ. ಬೈಂದೂರಿನಲ್ಲಿ ಹೊಟೇಲೊಂದರ ಮೇಲ್ಛಾವಣಿ ಗಾಳಿಗೆ ಹಾರಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಕಾಪು ತಾಲೂಕು ಮತ್ತು ಕುಂದಾಪುರ ತಾಲೂಕಿನಲ್ಲೂ ಗಾಳಿಮಳೆಗೆ ಮನೆಗಳು ಮತ್ತು ಕೊಟ್ಟಿಗೆಗಳು ಹಾನಿಗೊಂಡಿದ್ದು ಸ್ಥಳೀಯ ಪಂಚಾಯತ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.