ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ಗಳು ಆದೇಶ ನೀಡಿದ್ದಾರೆ.
Weather Alert
ಭಾರೀ ಗಾಳಿಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ : ಮನೆ ಹಾಗೂ 2 ರಿಕ್ಷಾಗಳಿಗೆ ಹಾನಿ : ಲಕ್ಷಾಂತರ ರೂ. ನಷ್ಟ
ಉಡುಪಿ : ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಿಂದ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆ ಹಾಗೂ ಎರಡು ಆಟೋ ರಿಕ್ಷಾ ಜಖಂಗೊಂಡ ಘಟನೆ ಜು. 26ರಂದು ಶುಕ್ರವಾರ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಸಂಭವಿಸಿದೆ.
ಶುಕ್ರವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೀಸಿದ ಗಾಳಿ ಮಳೆಗೆ ಬಜೆಯ ಅಮ್ಮಣ್ಣಿ ಶೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನಮರ ಬಿದ್ದು ಮನೆ ಹಾನಿಯಾಗಿದ್ದು, ಮನೆ ಬಳಿ ನಿಲ್ಲಿಸಿದ್ದ ಅಮ್ಮಣಿಯವರ ಮಕ್ಕಳಾದ ಗಣಪತಿ ಶೇರಿಗಾರ ಹಾಗೂ ರವಿ ಶೇರಿಗಾರ ಎಂಬವರ ಆಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ ಎಂದು ತಿಳಿದು ಬಂದಿದೆ. ಅವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.
ಕುಂದಾಪುರ : ಭಾರೀ ಗಾಳಿ-ಮಳೆಯಿಂದಾಗಿ ಮನೆಯೊಂದರ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ತಾಲೂಕಿನ ಬಳ್ಕೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಭಾರೀ ಗಾಳಿ-ಮಳೆ ಬಂದ ಪರಿಣಾಮ ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.
ಮರ ಬಿದ್ದ ರಭಸಕ್ಕೆ ಮನೆಯ ಮಹಡಿ ಸಂಪೂರ್ಣ ಕುಸಿದ ಪರಿಣಾಮ ಮನೆಯೊಳಗೆ ಮಲಗಿದ್ದ ಸೀತಾ ದೇವಾಡಿಗ ಅವರ ಪತಿ ಶಂಕರ ದೇವಾಡಿಗ ಅವರ ತಲೆ ಹಾಗೂ ಮೈಮೇಲೆ ಹೆಂಚು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ಶಂಕರ ದೇವಾಡಿಗ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬೈಂದೂರು : ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮತ್ತು ನೆರೆಗೆ ತಾಲೂಕಿನ ಹಲವಾರು ಗ್ರಾಮಗಳ ತಗ್ಗುಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಕೆಲವು ಗ್ರಾಮಗಳಲ್ಲಿ ಹಲವಾರು ಎಕರೆ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ.
ಸೌಪರ್ಣಿಕ ನದಿ ನೀರಿನ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು ಐದು ದಿನಗಳಿಂದ ನೆರೆ ಇಳಿಮುಖ ಕಾಣದಿರುವ ಪರಿಸ್ಥಿತಿ ಉಂಟಾಗಿ ಭತ್ತದ ಕೃಷಿ ನಾಶವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆರೆ ಪಿಡಿತ ಗ್ರಾಮಸ್ಥರು ಆಗ್ರಹಸಿದರು.
ನಾವುಂದ ಸಾಲ್ಬುಡ, ಅರೆಹೊಳೆ, ಕಂಡಿಕೇರಿ, ಬಡಾಕೆರೆ, ಹಡವು ಪಡುಕೋಣೆ, ಮರವಂತೆ, ಕೊಂಣ್ಕಿ, ಮರವಂತೆ ಪರಿಸರದಲ್ಲಿ ಭಾರೀ ಮಳೆಯಿಂದಾಗಿ ಒಂದು ವಾರವಿಡೀ ನೆರೆ ಪರಿಸ್ಥಿತಿ ಉಂಟಾಗಿ, ಜನ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿತ್ತು. ನೆರೆಗೆ ಅಲ್ಲಿನ ನಿವಾಸಿಗರು ಅಕ್ಷರಶಃ ನಲುಗಿ ಹೋಗಿದ್ದರು. ಈ ವೇಳೆ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹೆಕ್ಟೇರ್ಗಟ್ಟಲೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು, ನಾಟಿ ಮಾಡಿದ ಭತ್ತದ ಪೈರು ಕೊಳೆತು ಹೋಗಿತ್ತು.
ಇಂದು ಸ್ವಲ ಮಟ್ಟಿಗೆ ನೆರೆ ಇಳಿಮುಖ ಕಂಡಿದೆ ಹೀಗೆ ಮಳೆ ಮುಂದುವರಿದರೆ ಮತ್ತೆ ಜಲ ದಿಗ್ಬಂಧನ ಮುಂದುವರೆಯುತ್ತದೆ
ಉಡುಪಿ : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಮಳೆ ಜೊತೆಗೆ ಸಮುದ್ರದ ಅಲೆಗಳು ಅಬ್ಬರಿಸುತ್ತಿವೆ. ದಡಕ್ಕೆ ಅಪ್ಪಳಿಸುತ್ತಿರುವ ಬೃಹತ್ ಗಾತ್ರದ ಅಲೆಗಳಿಂದ ಸಮುದ್ರ ತೀರದ ನಿವಾಸಿಗಳು ಅಪಾಯ ಎದುರಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಗುಜ್ಜರಬೆಟ್ಟುವಿನಲ್ಲಿ ರಕ್ಕಸ ಗಾತ್ರದ ಅಲೆಗಳು ಸಮುದ್ರ ತೀರದ ತಡೆಗೋಡೆಯನ್ನು ಹಾಗೂ ತೆಂಗಿನ ಮರಗಳನ್ನು ಸಮುದ್ರ ಪಾಲುಮಾಡಿವೆ. ಭಾರಿ ಅಲೆಗಳಿಂದಾಗಿ ಸಮುದ್ರ ತೀರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಐಎಂಡಿ (ಭಾರತೀಯ ಹವಾಮಾನ ಇಲಾಖೆ)ಯಿಂದ ಸಮುದ್ರದಲ್ಲಿ ಭಾರೀ ಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಬರುವ ಸಾಧ್ಯತೆಯ ಕಾರಣ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರೆಡ್ ಅಲರ್ಟ್ ಮಳೆ : ನಾಳೆ (ಜುಲೈ 20) ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯುಸಿಗೆ ರಜೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜುಲೈ 20ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ರಜೆಯನ್ನು ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ದುರ್ಬಲ, ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ, ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವುದು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಉಡುಪಿ : ಕಳೆದು ಐದು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನೆರೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 20) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ನೀಡಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ. ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.
ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಭಾರೀ ವರ್ಷಾಧಾರೆಯಾಗುತ್ತಿದ್ದು, ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.
ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಎದುರಾಗಿದೆ. ಪಾಪನಾಶಿನಿ ನದಿಗೆ ಹೊಂದಿಕೊಂಡಿರುವ ಉದ್ಯಾವರ, ಮಟ್ಟು ಪ್ರದೇಶದಲ್ಲಿ ನೆರೆ ಬಂದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಉದ್ಯಾವರದ ಮಠದ ಕುದ್ರು ,ಕೆಮ್ತೂರು ಮತ್ತಿತರೆಡೆಗಳಲ್ಲಿ ನದಿ ಅಪಾಯದ ಮಟ್ಟ ತಲುಪಿದೆ.
ಇಂದು ಮುಂಜಾನೆ ಅಗ್ನಿಶಾಮಕ ಸಿಬ್ಬಂದಿ ಈ ಭಾಗದ ಜನರ ನೆರವಿಗೆ ಧಾವಿಸಿದ್ದಾರೆ. ತಗ್ಗುಪ್ರದೇಶದಲ್ಲಿ ಸಿಲುಕಿಕೊಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಈ ಭಾಗದಲ್ಲಿ ಹಲವು ಮನೆಗಳಿದ್ದು ಅಗತ್ಯ ಬಿದ್ದರೆ ಇನ್ನಷ್ಟು ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಾಲೆ ಮತ್ತು ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದ್ದು ಮಳೆ ಬಿಟ್ಟೂ ಬಿಟ್ಟೂ ಬರುತ್ತಿದೆ. ನದಿ ಪಾತ್ರದ ಜನರು ಮುಂಜಾಗರೂಕತೆ ವಹಿಸುವಂತೆ ಸಂದೇಶ ನೀಡಲಾಗಿದೆ.
ಉಡುಪಿ : ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಕಟ್ಟೆಗುಡ್ಡೆಯಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಶಾರದಾ ಅವರ ಮನೆ ಕುಸಿದು ಸಂಪೂರ್ಣ ಹಾನಿಗೀಡಾದ ಹಿನ್ನೆಲೆಯಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣರವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಸಾಲ್ಯಾನ್, ರಾಘವೇಂದ್ರ ಕುತ್ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನಕರ ಬಾಬು, ಪಕ್ಷದ ಪ್ರಮುಖರಾದ ಜಯಕರ ಸನಿಲ್, ಗಣೇಶ್ ಕುಮಾರ್ ಸಂಪಿಗೆ ನಗರ, ರಾಕೇಶ್, ಕಡೆಕಾರ್ ಪಂಚಾಯತ್ ಅಭಿವದ್ಧಿ ಅಧಿಕಾರಿ ಸಿದ್ದೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮುಂದುವರೆದ ಮಳೆ; ಕಡೆಕಾರಿನಲ್ಲಿ ಶಾರದಾ ಪೂಜಾರ್ತಿ ಮನೆ ಗೋಡೆ ಕುಸಿತ, ಅಪಾರ ನಷ್ಟ
ಉಡುಪಿ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟೆಗುಡ್ಡೆ ಕುತ್ಪಾಡಿ ಶಾರದಾ ಪೂಜಾರ್ತಿ ಅವರ ಮನೆಯ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಮನೆಯಲ್ಲಿ 10 ಜನ ವಾಸವಾಗಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಮನೆಯೊಳಗಿನ ದಾಖಲೆ ಪತ್ರ, ಮಕ್ಕಳ ಪುಸ್ತಕ, ಬಟ್ಟೆ ಬರೆ ಸಂಪೂರ್ಣ ನಾಶವಾಗಿದೆ.
ಜಿಲ್ಲೆಯ ಹಲವೆಡೆ ಗಾಳಿ ಮಳೆಯಿಂದಾಗಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ ಪುರಸಭೆ ವ್ಯಾಪ್ತಿ ಖಾರ್ವಿಕೇರಿಯಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಬುಧವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮಳೆ ಬಿಡುವು ಪಡೆದಿದ್ದು, ಮಧ್ಯಾಹ್ನದ ಬಳಿಕ ಎಲ್ಲೆಡೆ ಬಿಟ್ಟುಬಿಟ್ಟು ನಿರಂತರ ಮಳೆಯಾಗಿದೆ. ಉಡುಪಿ, ಕಾರ್ಕಳ, ಬೈಂದೂರು, ಕಾರ್ಕಳ, ಹೆಬ್ರಿ ಸುತ್ತಮುತ್ತ ಪ್ರದೇಶಗಳಲ್ಲಿ ಸಂಜೆ ವೇಳೆ ಹೆಚ್ಚು ಮಳೆ ಸುರಿದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ 16ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.ಕುಂದಾಪುರ ತಾಲೂಕಿನ ಅಂಪಾರು, ಮೊಳಹಳ್ಳಿ, ಹಾಲಾಡಿ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃಷಿ ಬೆಳೆ ನಷ್ಟವಾಗಿದೆ.