Udupi
ಉಡುಪಿ : ಕನ್ನಡ ಚಲನಚಿತ್ರ ರಂಗದ ನಟರಾದ ಶ್ರೀಮುರಳಿ, ಅಜಯ್ರಾವ್ ಅವರು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅನಂತರ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಆಶೀರ್ವಾದ ಮಂತ್ರಾಕ್ಷತೆಯೊಂದಿಗೆ ಕೋಟಿಗೀತಾಲೇಖನ ಯಜ್ಞದ ದೀಕ್ಷೆ ಪಡೆದರು. ಈ ಸಂದರ್ಭ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಮಠದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ : ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಹಿಂದೂಗಳ ಮಾರಣಹೋಮಗೈದ ಉಗ್ರರ ವಿರುದ್ಧ ‘ಆಪರೇಶನ್ ಸಿಂಧೂರ್’ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ವೀರ ಯೋಧರ ಶ್ರೇಯಸ್ಸಿಗಾಗಿ ಶಾಸಕ ಯಶ್ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರ ಹಾಗೂ ದೇಶಾಭಿಮಾನಿಗಳ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ, ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಉಗ್ರರಿಗೆ ತಕ್ಕ ಶಾಸ್ತಿ ಮಾಡಿದ್ದಕ್ಕೆ ಹರ್ಷ ವ್ಯಕ್ತವಾಯಿತು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.
ಕುಂದಾಪುರ : ಬಿಗ್ ಬಾಸ್ ಸೀಸನ್-11ರಲ್ಲಿ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಇಂದು(ಶುಕ್ರವಾರ) ಕಾಲಿಡುತ್ತಿದ್ದಾರೆ.
ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಬಿಗ್ ಬಾಸ್ ಬಳಿಕ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ಗೊತ್ತು. ಅದರಂತೆ ಅವರು ವಿವಾಹವಾಗುತ್ತಿರುವ ಆ ಹುಡುಗ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ.
ಚೈತ್ರಾ ಕುಂದಾಪುರ ಅವರನ್ನು ಮದುವೆ ಆಗುತ್ತಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. ಕಾಲೇಜು ದಿನಗಳಿಂದಲೂ ಚೈತ್ರಾ ಹಾಗೂ ಶ್ರೀಕಾಂತ್ ಕಶ್ಯಪ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.
ಶ್ರೀಕಾಂತ್ ಕಶ್ಯಪ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ಪಟ್ಟಣದವರು. ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ಚೈತ್ರಾಗೆ, ಶ್ರೀಕಾಂತ್ ಕಾಲೇಜು ದಿನಗಳಿಂದಲೇ ಪರಿಚಯ. ಇದೇ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ಮಾರ್ಪಟ್ಟು 12 ವರ್ಷಗಳ ಕಾಲ ಪ್ರೀತಿ ಮಾಡಿದ್ದರು.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ಇಂದು ಕುಂದಾಪುರದಲ್ಲಿ ನಡೆಯಲಿದೆ. ಅವರ ಮೆಹಂದಿ ಕಾರ್ಯಕ್ರಮ ಜೋರಾಗಿ ನಡೆದಿದ್ದು ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಡುಪಿ : ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಇಂದ್ರಾಳಿ ಯಕ್ಷಗಾನ ಕೇಂದ್ರ, ಪ್ರಾದೇಶಿಕ ಸಂಶೋಧನ ಕೇಂದ್ರಗಳ (ಆರ್ಆರ್ಸಿ) ನಿರ್ದೇಶಕರಾಗಿದ್ದ ಪ್ರೊ.ಹೆರಂಜೆ ಕೃಷ್ಣ ಭಟ್ (84) ಅಸೌಖ್ಯದಿಂದ ಮೇ 8ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಮೂಲತಃ ಬ್ರಹ್ಮಾವರ ಸಮೀಪದ ಹೆರಂಜೆಯವರಾದ ಭಟ್ಟರು ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಸುದೀರ್ಘ ಕಾಲ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಉಪನ್ಯಾಸಕರು, ವಿಭಾಗ ಮುಖ್ಯಸ್ಥರು, ಎನ್ಸಿಸಿ ಮುಖ್ಯಸ್ಥರಾಗಿ, ಎಸ್ಟೇಟ್ ಮೆನೇಜರ್ ಆಗಿ ಸೇವೆ ಸಲ್ಲಿಸಿದ್ದರು.
ಪ್ರೊ.ಕು.ಶಿ.ಹರಿದಾಸ ಭಟ್ಟರ ಬಳಿಕ, ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಆರ್ಆರ್ಸಿ ನಿರ್ದೇಶಕರಾಗಿದ್ದರು. ಇವರ ಸಂಪಾದಕತ್ವದಲ್ಲಿ ಗೋವಿಂದ ಪೈ ಸಂಶೋಧನ ಸಂಪುಟದಂತಹ (ಮೊದಲ ಸಂಪುಟ) ಹತ್ತಾರು ಗ್ರಂಥಗಳು ಕೇಂದ್ರದಿಂದ ಹೊರಬಂದಿದ್ದವು. ಇವರ ನೇತೃತ್ವದಲ್ಲಿ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆದಿದ್ದವು.
ಎಂಜಿಎಂ ಕಾಲೇಜಿನ ಆವರಣದಲ್ಲಿ ವಾದಿರಾಜ ಕನಕದಾಸ ಸಂಗೀತೋತ್ಸವ, ಸಾಂಸ್ಕೃತಿಕ ಹಬ್ಬಗಳು, ತುಳು ಸಮ್ಮೇಳನ, ಹಲವು ಜನಪದ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳ ದಾಖಲಾತಿಗಳು ನಡೆದವು. ಉತ್ತಮ ಸಂಘಟಕರಾಗಿದ್ದ ಕೃಷ್ಣ ಭಟ್ಟರು ಸುದೀರ್ಘ ಕಾಲ ಉಡುಪಿ ಪರ್ಯಾಯೋತ್ಸವದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.
ವೇದಾಧ್ಯಯವನ್ನೂ ನಡೆಸಿದ್ದ ಭಟ್ಟರು ಡಾ.ಶಿವರಾಮ ಕಾರಂತ, ಕೆ.ಕೆ.ಹೆಬ್ಬಾರರಂತಹ ಹಿರಿಯರ ಒಡನಾಟವನ್ನು ಹೊಂದಿದ್ದರು.
ಸುಮಾರು ಐದು ದಶಕಗಳ ಕಾಲ ಉಡುಪಿಯಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊ.ಭಟ್ಟರು ಹಳೆಯ ಮತ್ತು ಹೊಸ ತಲೆಮಾರಿನ ನಡುವಿನ ಕೊಂಡಿಯಾಗಿದ್ದರು. ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದರೂ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ತೆರೆಮರೆಯಲ್ಲಿಯೇ ನಿಂತು ಕಾರ್ಯ ನಿರ್ವಹಿಸುವ ಅವರ ಕಾರ್ಯಶೈಲಿ ಅನುಕರಣೀಯವಾಗಿತ್ತು. ಇವರ ಅಮೂಲ್ಯ ಬಹುಮುಖ ಸೇವೆಯನ್ನು ಪರಿಗಣಿಸಿ ಶ್ರೀಕೃಷ್ಣಮಠದಲ್ಲಿ ವಿವಿಧ ಮಠಾಧೀಶರಿಂದ, 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ತಿಂಗಳೆ ಗರೋಡಿ ಉತ್ಸವ ಸಹಿತ ಹಲವು ಗೌರವ ಪುರಸ್ಕಾರಗಳು ಸಂದಿವೆ.
ಸಂತಾಪ ಪ್ರೊ. ಭಟ್ಟರ ನಿಧನಕ್ಕೆ ಪರ್ಯಾಯ ಪುತ್ತಿಗೆ, ಪೇಜಾವರ, ಅದಮಾರು, ಪಲಿಮಾರು, ಭಂಡಾರಕೇರಿ, ಕಾಣಿಯೂರು, ಸೋದೆ, ಶೀರೂರು ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ಡಾವೀರೇಂದ್ರ ಹೆಗ್ಗಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಮೂಡಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ಸಂತಾಪ ಸೂಚಿಸಿದ್ದಾರೆ.
ಉಡುಪಿ : ಭಾರತದ ಸೈನಿಕರ ಶೌರ್ಯ ಪರಾಕ್ರಮ ಮತ್ತು ಸಾತ್ವಿಕ ನಿಷ್ಠೆಯನ್ನು ಮೆಚ್ಚುತ್ತೇವೆ. ಅವರ ಈ ಸಾಧನೆಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

ಸೈನಿಕರ ಒಂದು ಉದ್ದೇಶ, ಕಾರ್ಯ ಸಫಲವಾಗಿದ್ದು ಅದಕ್ಕಾಗಿ ಶ್ರೀಕೃಷ್ಣಮುಖ್ಯಪ್ರಾಣರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಎಲ್ಲವೂ ಶಾಂತಿಯುತವಾಗಿ ನಡೆಯಲಿ. ದೇಶ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉಡುಪಿ : ಹಿರಿಯ ನಾದಸ್ವರ ವಾದಕ ಅಲೆವೂರು ಬೊಗ್ರ ಶೇರಿಗಾರ್ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಅಸಂಖ್ಯಾತ ದೇವಸ್ಥಾನ, ಗರೋಡಿ, ದೈವಸ್ಥಾನ, ನಾಗರಾಧನೆಯಲ್ಲಿ ಹಿರಿಯ ನಾಗಸ್ವರ ವಾದಕರಾಗಿ ಅಲೆವೂರು ಬೋಗ್ರ ಶೇರಿಗಾರ್ ಪ್ರಸಿದ್ದಿಯನ್ನು ಪಡೆದಿದ್ದರು. ನಾಗಸ್ವರದ ಕಲಾರಾಧನೆಯನ್ನು ಆತ್ಮಸಮರ್ಪಣಾ ಮನೋಭಾವದಿಂದ ಕಾರ್ಯಗತಗೊಳಿಸಿ ಪಾರಂಪರಿಕ ಶೈಲಿಯಲ್ಲಿ ಕಲಾ ಮಾತೆಯ ಸೇವೆಯನ್ನು ಮಾಡಿದ ಅಪರೂಪದ ಕಲಾವಿದರು.
ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕೃತರಾದ ಬೋಗ್ರ ಶೇರಿಗಾರ್ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ಪ್ರಸಿದ್ಧ ನಾಗಸ್ವರ ವಾದಕ ಉದಯ ಶೇರಿಗಾರ್ ಸಹಿತ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕಾರ್ಕಳ : ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಆಗಮಿಸಿದರು. ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಾಂಪ್ರದಾಯಿಕ ಸ್ವಾಗತ ನೀಡಿ ಸಚಿವರನ್ನು ಬರಮಾಡಿಕೊಂಡರು.
ಕಾರ್ಕಳದ ಪ್ರಸಿದ್ಧ ತಾಣವಾಗಿರುವ ಆನೆಕೆರೆ ನಿಸರ್ಗಧಾಮಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಅಲ್ಲಿನ ಆನೆಕೆರೆ ಬಸದಿಗೆ ಭೇಟಿ ನೀಡಿದ ಸಚಿವರು ಬಸದಿ ನಿರ್ಮಾಣ ಮತ್ತು ಆನೆಕೆರೆ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು ಮಾಡಿರುವ ಮನವಿಯಂತೆ ಎಲ್ಲ ರೀತಿಯ ಸಹಕಾರ ಮತ್ತು ಯೋಗ್ಯ ಮಟ್ಟದಲ್ಲಿ ಅನುದಾನ ಕೊಡುವ ಭರವಸೆ ವ್ಯಕ್ತಪಡಿಸಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.
ಉಡುಪಿ : ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ಜಿಲ್ಲಾದ್ಯಂತ ಸಂಭ್ರಮಾಚರಣೆ ನಡೆದಿದೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಜತೆಗೆ ಮನೆ ಮನೆಗಳಲ್ಲೂ ಪೂಜೆ, ಪ್ರಾರ್ಥನೆ, ಸಿಹಿ ವಿತರಣೆ, ಸಂಘ ಸಂಸ್ಥೆಗಳಿಂದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ಹೀಗೆ ಭಾರತೀಯ ಸೇನೆಯ ಸಾಹಸಕ್ಕೆ ಇಡೀ ಜಿಲ್ಲೆ ಸಂಭ್ರಮಿಸಿದೆ. ದೇಶ ಸುರಕ್ಷಿತವಾಗಿರಲಿ, ಯೋಧರಿಗೆ ಒಳಿತಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭಾರತೀಯ ಸೈನಿಕರ ಶೌರ್ಯ, ಪರಾಕ್ರಮ ಹಾಗೂ ತಾತ್ವಿಕ ನಿಷ್ಠೆಯನ್ನು ಮೆಚ್ಚಿಕೊಂಡಿದ್ದೇವೆ. ಭಾರತೀಯ ಸೇನೆಯ ಸಾಧನೆ ಅಭಿನಂದನಾರ್ಹ. ಸೈನಿಕರ ಉದ್ದೇಶ ಸಫಲವಾಗಿ ಎಲ್ಲವೂ ಶಾಂತಿಯುವಾಗಿ ನಡೆದು, ಎಲ್ಲರಿಗೂ ಶುಭವಾಗಲಿ ಮತ್ತು ದೇಶ ರಕ್ಷಣೆಯಾಗಲಿ ಎಂಬಂತೆ ಶ್ರೀ ಕೃಷ್ಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ದೇಶದ ಹೆಮ್ಮೆ ಹಾಗೂ ಗೌರವ ಹೆಚ್ಚಿಸಿ ರುವ ಭಾರತೀಯ ಸೇನೆಯ ಸೈನಿಕರ ಶ್ರೇಯಸ್ಸಿಗಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತುಪ್ಪದ ದೀಪ ಬೆಳಗಿಸಲಾಯಿತು.
ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿ ಶ್ರೀಕೃಷ್ಣದೇವರ ಮಠದ ಚಂದ್ರ ಶಾಲೆಯಲ್ಲಿ ಸೋಸಲೇ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿದರು.
ಪರ್ಯಾಯ ಪುತ್ತಿಗೆ ಉಭಯ ಮಠಾಧೀಶರು ದೇವರ ದರ್ಶನ ಮಾಡಿದರು. ಪೂಜ್ಯ ವ್ಯಾಸರಾಜ ಸ್ವಾಮಿಗಳ ಪರಸ್ಪರ ಪ್ರಸಾದಗಳನ್ನು ಸ್ವೀಕರಿಸಿದರು. ಶ್ರೀಗಳನ್ನು ಪಟ್ಟದ ದೇವರ ಸಹಿತ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು ಮತ್ತು ಪರ್ಯಾಯ ಮಠದಿಂದ ವಿಶೇಷ ಗೌರವಾದರಗಳನ್ನು ಸಲ್ಲಿಸಲಾಯಿತು.