ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರದ ಸುರಂಗ ಮಾರ್ಗ, ಇಂದ್ರಾಳಿಯ ಮೇಲ್ಸೇತುವೆ, ಮಲ್ಪೆ ಭೂಸ್ವಾಧೀನದ ವಿಳಂಬ ಮತ್ತು ನೆನೆಗುದ್ದಿಗೆ ಬಿದ್ದಿರುವ ತನಿಕೋಡು ಗೇಟ್ನಿಂದ ಎಸ್.ಕೆ. ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಮನವಿ ಸ್ವೀಕರಿಸಿದ ಸಚಿವ ಗಡ್ಕರಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆಗೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Udupi District
ಉಡುಪಿ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
ಉಡುಪಿ : ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ವತಿಯಿಂದ ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಬನ್ನಂಜೆಯ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ| ಬಿ. ರಾಜಾರಾಂ ಭಟ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಪರಸ್ಪರ ಸಹಕಾರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುದ್ರಕ ಬಾಂಧವರಿಗೆ ಉತ್ತಮ ಭವಿಷ್ಯವಿದೆ ಎನ್ನುತ್ತಾ ಮುದ್ರಕರ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು.
ನಿವೃತ್ತ ಶಿಕ್ಷಕರು ಮತ್ತು ಕಲಾವಿದರಾದ ಎಂ.ಎಸ್ ಭಟ್ ಮಾತನಾಡಿ, ಮುದ್ರಣಾಲಯಗಳ ಹಿರಿಯ ಕಾರ್ಮಿಕರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾದುದು. ಪ್ರತಿಭೆಗಳಿಗೆ ನೀಡುವ ಪುರಸ್ಕಾರವು ವಿದ್ಯಾರ್ಥಿಗಳ ಸಾಧನೆಗೆ ನೀಡುವ ಗೌರವ, ಬೆಂಬಲ ಮತ್ತು ಪ್ರೇರಣೆಯಾಗಿರುತ್ತದೆ ಎಂದು ತಿಳಿಸಿದರು.
ಮುದ್ರಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಜಿ. ಸುಬ್ಬರಾವ್ ಮತ್ತು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಕಲ್ಯಾಣಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲ್ಯಾಣಿ ಪ್ರೆಸ್ ಪೆರ್ಡೂರು ಇಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ನಾಯ್ಕ ಅವರನ್ನು ಮುದ್ರಣಾಲಯಗಳ ಹಿರಿಯ ಕಾರ್ಮಿಕರೆಂಬ ನೆಲೆಯಲ್ಲಿ ಸನ್ಮಾನಿಸಲಾಯಿತು. ಯತೀಶ್ಚಂದ್ರ ಅವರು ಸನ್ಮಾನ ಪತ್ರ ವಾಚಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶ್ರೇಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ಮುದ್ರಣಾಲಯದ ಮಾಲಕರ ಮಕ್ಕಳನ್ನು ಪುರಸ್ಕಾರ ನೀಡಿ ಗೌರವಿಸಲಾಯಿತು. ವಾಸುದೇವ ವರ್ಣ ಮತ್ತು ವಿನೋದ್ ರಾವ್ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿ ಸಂದೀಪ್ ಆರ್. ಪೈ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ಸಂಚಾಲಕರಾದ ಮಹೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಿ.ಎಂ. ಶರೀಫ್, ಉಡುಪಿ ವಲಯಾಧ್ಯಕ್ಷರಾದ ಪ್ರಶಾಂತ್ ನಾಯ್ಕ್, ಕಾಪು ವಲಯಾಧ್ಯಕ್ಷರಾದ ಸುಧೀರ್ ಬಂಗೇರ, ಕುಂದಾಪುರ ವಲಯಾಧ್ಯಕ್ಷರಾದ ವಾಸುದೇವ ವರ್ಣ ಮತ್ತು ಕಾರ್ಕಳ ವಲಯಾಧ್ಯಕ್ಷರಾದ ಪ್ರವೀಣ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸಹಸಂಚಾಲಕರಾದ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಶ್ರೀ ರಮೇಶ ತಿಂಗಳಾಯ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕು ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಶೆಟ್ಟಿ ಕೊನೆಯಲ್ಲಿ ಧನ್ಯವಾದವಿತ್ತರು.


ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಬುಧವಾರ ಬೆಳಿಗ್ಗಿನಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜೂನ್ 26 ಮತ್ತು 27 ರಂದು “ಆರೆಂಜ್ ಅಲರ್ಟ್” ನೀಡಲಾಗಿದೆ, ಜೂನ್ 28 ಮತ್ತು 29 ರಂದು “ಯಲ್ಲೋ ಅಲರ್ಟ್” ನೀಡಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕಾಪು ತಾಲೂಕಿನ ಮೂಳೂರು ಉದಯ್ ಪೂಜಾರಿ ಎಂಬವರ ಮನೆಗೆ ಇಂದು ಬೆಳಿಗ್ಗೆ ಮರಬಿದ್ದು ಅಪಾರ ಹಾನಿಯುಂಟಾಗಿದೆ. ಮಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಮರ ಬಿದ್ದಿದ್ದು ಬಚ್ಚಲು ಕೋಣೆ, ಶೌಚಾಲಯಕ್ಕೆ ಹಾನಿಯುಂಟಾಗಿದೆ. ಮನೆಯವರು ಹಾಲ್ನಲ್ಲಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಹಿಂಬದಿಯ ಮರ ಬಿದ್ದ ಪರಿಣಾಮ ಮನೆಯೊಳಗೆ ಇದ್ದವರಿಗೆ ಯಾವುದೇ ಅಪಾಯಗಳುಂಟಾಗಿಲ್ಲ.
ಸಾವಿರಾರು ರೂಪಾಯಿ ನಷ್ಟ ಅಂದಾಜಿಸಲಾಗಿದ್ದು ತಾಲೂಕು ಆಡಳಿತ, ಕಂದಾಯ ಇಲಾಖೆ, ಪುರಸಭೆಗೆ ಮಾಹಿತಿ ನೀಡಿದ್ದಾರೆ.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಉಡುಪಿ ಜಿಲ್ಲಾಧಿಕಾರಿ
ಉಡುಪಿ : ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಇದರ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಸಂಸ್ಥೆಯ ಪರಿಶೀಲನಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದೂರು ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬಂದ ತಕ್ಷಣವೇ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶೀಲನಾ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಮನೆ, ಕಂಪೆನಿಗಳು, ಆಸ್ಪತ್ರೆ, ಅಪಾರ್ಟ್ಮೆಂಟ್ ಸೇರಿದಂತೆ ಇತರೆ ಯಾವುದೇ ಕಟ್ಟಡಗಳಲ್ಲಿ ಮ್ಯಾನ್ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ಗುಂಡಿಗಳು ಕಟ್ಟಿಕೊಂಡಲ್ಲಿ ಸ್ವಚ್ಛಗೊಳಿಸಲು ಅನುಕೂಲ ವಾಗುವಂತೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಹಾಯವಾಣಿ ಸಂಖ್ಯೆ 14420 ಹಾಗೂ ಗ್ರಾಮೀಣ ಪ್ರದೇಶದಲ್ಲಿ 9480985555ಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶ್ರೀ ಅದಮಾರು ಮಠದ ಆಶ್ರಯದಲ್ಲಿ ಎನ್.ಎಸ್. ಡಿ. ವಾರಣಾಸಿ ವಿದ್ಯಾರ್ಥಿಗಳಿಂದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಗುರು ದಕ್ಷಿಣೆ ಹಿಂದಿ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಭಾಗವಹಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣ್ಯರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಡಾ. ಭಾಸ್ಕರಾನಂದ ಕುಮಾರ್, ಶ್ರೀ ಪ್ರವೀಣ್ ಕುಂಜನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾನ ಕೇಂದ್ರ ಅರ್ಪಿಸುವ
N.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
|ಏಕಲವ್ಯ|
ಯಕ್ಷಗಾನ ಪ್ರಯೋಗ
ನಿರ್ದೇಶನ : ಗುರು ಸಂಜೀವ ಸುವರ್ಣ
ಪ್ರಸಂಗ ರಚನೆ : ಹೊಸ್ತೋಟ ಮಂಜುನಾಥ ಭಗವತ್
ಹಿಂದಿ ಅನುವಾದ : ಪ್ರಭಾತ ಪಾಟಿಲ್ | ಶೋಭಾ ಆರ್ ತಂತ್ರಿ
26-5-2024, 6:00ಗೆ
ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪೈಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್, ಉಡುಪಿ.

ಸೊಳ್ಳೆ ಉತ್ಪತ್ತಿಗೆ ಕಾರಣರಾಗುವವರ ವಿರುದ್ಧ ಕ್ರಮಕ್ಕೆ ಸಿವಿಲ್ ಬೈಲಾ ಜಾರಿ : ಡಾ.ಪ್ರಶಾಂತ್ ಭಟ್
ಉಡುಪಿ : ಡೆಂಗು ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿ ಮರೆಯುವ ನಾಗರಿಕರ ವಿರುದ್ಧ ಕಾನೂನು ಕ್ರಮ ಜರಗಿಸುವ ಸಿವಿಲ್ ಬೈಲಾವನ್ನು ಉಡುಪಿ ನಗರಸಭೆಗೆ ಕರಡು ಪ್ರತಿ ತಯಾರಿಸಿ ಸಲ್ಲಿಸಲಾಗಿದೆ. ಇದನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಜೂನ್ 25ರವರೆಗೆ ಒಟ್ಟು 164 ಡೆಂಗು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಉಡುಪಿ- 102, ಕುಂದಾಪುರ- 35, ಕಾರ್ಕಳ- 25 ಪ್ರಕರಣಗಳು ಕಂಡುಬಂದಿವೆ. ಅದೇ ರೀತಿ ಒಟ್ಟು 30 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ 29 ವಲಸೆ ಕಾರ್ಮಿಕರು ಹಾಗೂ ಒಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪೆಟ್ರೋಲ್ ದರ ಏರಿಕೆ, ರೈತರಿಗೆ ಹಾಲಿನ ಸಬ್ಸಿಡಿ ನೀಡದೇ ಇರುವ ಬಗ್ಗೆ ಪ್ರತಿಭಟನೆ; ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಉಡುಪಿ : ಪೆಟ್ರೋಲ್ ದರ ಏರಿಕೆ, ರೈತರಿಗೆ ಹಾಲಿನ ಸಬ್ಸಿಡಿ ನೀಡದೇ ಇರುವುದು, ಈಗ ಹಾಲಿನ ದರ ಏರಿಕೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಡೆಸಲಾಯಿತು. ಜಡಿ ಮಳೆಯ ನಡುವೆಯೂ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗುವ ಯತ್ನ ನಡೆಸಿದ ಪ್ರತಿಭಟನಕಾರರು ಪೊಲೀಸರ ಜೊತೆ ಜಟಾಪಟಿ ನಡೆಸಿದರು.
ವಾಲ್ಮೀಕಿ ನಿಗಮ ಹಗರಣದ ಕುರಿತು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧವೂ ಈ ವೇಳೆ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆ ವೇಳೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿಗೆ ಗೇಟು ಹಾಕಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ನೂಕಾಟವೂ ನಡೆಯಿತು. ಬಿಜೆಪಿ ರಾಜ್ಯ ಮೋರ್ಛಾದ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದರು.
ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಕಾರ್ಕಳ : ಯುವ ಸಂಗಮ(ರಿ.) ಕೌಡೂರು ಇವರ ಆಶ್ರಯದಲ್ಲಿ ಕಾರ್ಕಳ ತಾಲ್ಲೂಕಿನಲ್ಲಿಯೇ ವಿನೂತನ ಕಾರ್ಯಕ್ರಮ ಹೃದಯ ತಪಾಸಣೆ (ಇಸಿಜಿ), ಆರೋಗ್ಯ ತಪಾಸಣೆ, ಹೃದಯಾಘಾತದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಜಯದೇವ ಆಸ್ಪತ್ರೆ ಬೆಂಗಳೂರು, ಮಿತ್ರ ಆಸ್ಪತ್ರೆ ಉಡುಪಿ, ಹೈಟೆಕ್ ಆಸ್ಪತ್ರೆ ಉಡುಪಿ ಇಲ್ಲಿಯ ತಜ್ಞ ವೈದ್ಯರಾದ ಡಾ. ಅನೂಪ್ ಕೆ ಶೆಟ್ಟಿಯವರು ಉದ್ಘಾಟಿಸಿ ಹೃದಯಾಘಾತ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಪಾಲರಾದ ಡಾ| ಮಂಜುನಾಥ್ ಎ ಕೋಟ್ಯಾನ್ರವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅರೋಗ್ಯ ತಪಾಸಣೆಯನ್ನು ಉಡುಪಿಯ ಖ್ಯಾತ ವೈದ್ಯರಾದ ಡಾ. ಪ್ರಭಾಕರ್ ಮಲ್ಯ, ಉದ್ಯಾವರ SDM ಆಸ್ಪತ್ರೆಯ ವೈದ್ಯೆ ಡಾ. ಅನ್ಲಾ ಕೆ ಶೆಟ್ಟಿ, ಬೈಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ. ಮಹಾಂತ್ ಹೆಗ್ಡೆಯವರು ನಡೆಸಿಕೊಟ್ಟರು.
ಉಡುಪಿಯ ನ್ಯೂ ನೇಶನಲ್ ಡಯಾಗ್ನೋಸ್ಟಿಕ್ ಸೆಂಟರ್ನ ಪೂರ್ಣ ಕಾಮತ್ ಅವರ ತಂಡದಿಂದ ಸಾರ್ವಜನಿಕರಿಗೆ ECG, ಮಧುಮೇಹ ಪರೀಕ್ಷೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರಾರಾದ ಕೆ ಸುಧೀರ್ ಹೆಗ್ಡೆ ಹಾಗೂ ಪಧಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಉಡುಪಿ : ಆನ್ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭ ಗಳಿಸುವ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲೀನಾ ಜೋಸೆಫ್(28) ಎಂಬವರಿಗೆ ಜೂ.17ರಂದು ಅಪರಿಚಿತರು ಮೊಬೈಲ್ಗೆ ಸಂದೇಶ ಕಳುಹಿಸಿ, ಟಾಸ್ಕ್ ಪಡೆದು ಹೆಚ್ಚು ಲಾಭಾಂಶವನ್ನು ಪಡೆಯಬಹುದು ಎಂಬುದಾಗಿ ನಂಬಿಸಿದ್ದರು. ಅದರಂತೆ ಇವರು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ 6,63,244ರೂ. ಹಣ ಜಮೆ ಮಾಡಿದ್ದರು. ಆದರೆ ಆರೋಪಿಗಳು ಅದನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.