Udupi District
ಜಿಲ್ಲೆಯಲ್ಲಿ ಗಾಳಿ, ಮಳೆ ಹಾನಿ – ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವೆ ಹೆಬ್ಬಾಳಕರ್
ಉಡುಪಿ : ಉಡುಪಿ ಜಿಲ್ಲೆಯ ಕೆಲವೆಡೆ ಗಾಳಿ ಮತ್ತು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರು ಸಚಿವ ಸಂಪುಟ ಸಭೆಗೆ ಹೊರಡುವ ಮುನ್ನ ಉಡುಪಿಯ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದರು. ಜಿಲ್ಲೆಯ ಅಮಾಸೆಬೈಲು ಸೇರಿದಂತೆ ಕೆಲವೆಡೆ ಮಳೆ, ಗಾಳಿಯಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ ಸಚಿವರು, ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಜೊತೆಗೆ, ಜನರಿಗೆ ಎಚ್ಚರಿಕೆ ಕ್ರಮಗಳ ಕುರಿತು ತಿಳಿಸಬೇಕೆಂದೂ ಸೂಚಿಸಿದರು.
ಕುಂದಾಪುರ : ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಹೆಬ್ರಿ, ಕುಂದಾಪುರ ಭಾಗದಲ್ಲಿ ಬುಧವಾರ ಬೀಸಿದ ಸುಂಟರಗಾಳಿಗೆ ಅಪಾರ ಪ್ರಮಾಣದ ಕೃಷಿ, ಮನೆ, ದನದ ಕೊಟ್ಟಿಗೆಗಳು, ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿಯಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಶಂಕರನಾರಾಯಣ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆ, ದನದ ಕೊಟ್ಟಗೆ ಮತ್ತು ಅಪಾರ ಕೃಷಿ ಹಾನಿಗೀಡಾಗಿದೆ. ಕುಳ್ಳುಂಜೆ ಗ್ರಾಮದಲ್ಲೂ ಮನೆಗೆ ಹಾನಿಯಾಗಿದೆ. ಇಲ್ಲಿ ದನದ ಕೊಟ್ಟಿಗೆ ಗಾಳಿಗೆ ಹಾರಿ ಹೋಗಿದ್ದು, ಸಂಪೂರ್ಣ ಹಾನಿಗೊಂಡಿದೆ. 1,000ಕ್ಕೂ ಹೆಚ್ಚು ಅಡಿಕೆ ಮರ, 50ಕ್ಕೂ ಹೆಚ್ಚು ತೆಂಗಿನ ಮರ, ಅಪಾರ ಪ್ರಮಾಣದ ಬಾಳೆ, ಗೇರು ಕಾಳು ಮೆಣಸು ಗಿಡಗಳು ಹಾನಿಗೊಂಡಿವೆ. ಸುಶೀಲಾ ಎಂಬ ಮಹಿಳೆಗೆ ಗಾಯಗಳಾಗಿದ್ದು, ಪುತ್ರಿ ಪ್ರೇಮಾನಾಯ್ಕ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ವರದಿಯಾಗಿದೆ.
ಕುಳ್ಳುಂಜೆ ಗ್ರಾಮದ ಗುಲಾಬಿ ನಾಯ್ಕ ಅವರು ಅಡಿಕೆ ತೋಟವು ಸುಂಟರಗಾಳಿಗೆ ಹಾನಿಗೊಂಡಿವೆ. 600ಕ್ಕೂ ಹೆಚ್ಚು ಅಡಿಕೆ ಮರ ಹಾನಿಗೊಂಡಿವೆ. ಸುಮಾರು 2 ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ.
ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ, ತೆಂಕೂರು, ಹೊರ್ಲಿಜೆಡ್ಡು ನಡಂಬೂರು, ಹಳೆ ಅಮಾಸೆಬೈಲು, ಜಡ್ಡಿನಗದ್ದೆ ಪ್ರದೇಶದಲ್ಲಿ ಬೀಸಿದ ಸುಂಟರಗಾಳಿ ಅಪಾರ ಪ್ರಮಾಣದಲ್ಲಿ ಮನೆಗಳು ಮತ್ತು ಕೃಷಿಗೆ ಹಾನಿ ಸಂಭವಿಸಿದೆ.
ಕಮಲಶಿಲೆ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಗಿನ ಜಾವ ಮೂರುವರೆ ಸುಮಾರಿಗೆ ಹರಿದ ಕುಬ್ಜಾ ನದಿಯ ನೀರು ದೇವಿಯ ಚರಣಗಳನ್ನು ಸ್ಪರ್ಶಿಸಿತು.
ವರ್ಷಂಪತಿ ಒಂದು ಬಾರಿ ಗರ್ಭಗುಡಿಗೆ ಬರುವ ಕುಬ್ಜಾ ನದಿ ನೀರು, ಗರ್ಭಗುಡಿಗೆ ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದರು.
ವರ್ಷಂಪತಿ ಜರುಗುವ ಈ ನೈಸರ್ಗಿಕ ಪುಣ್ಯಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಾರೆ. ನದಿ ನೀರು ಸದ್ಯ ಇಳಿಮುಖಗಿದೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯೆ ಕಾಮತ್ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ. ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.
ಉಡುಪಿ : 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಪಳ್ಳಿ ದಾದಬೆಟ್ಟು ಎಂಬಲ್ಲಿ ಬುಧವಾರ ಸಂಭವಿಸಿದೆ.
ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತೆಂದು ತಿಳಿದುಬಂದಿದೆ. ಭಾಗ್ಯಶ್ರೀ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕರು, ವಿದ್ಯಾರ್ಥಿ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತಳ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿತ್ತು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾದ ಕೋಟ – Thalassemia ಮತ್ತು Aplastic ಎಂಬ ಗಂಭೀರ ರಕ್ತದ ಖಾಯಿಲೆಯ ಚಿಕಿತ್ಸೆ ಬಗ್ಗೆ ಚರ್ಚೆ
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದು ದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಅಪೂರ್ವ ಚಂದ್ರ ರವರನ್ನು ಭೇಟಿಯಾಗಿ ಉಡುಪಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ (KMC) ಮಕ್ಕಳ ವಿಭಿನ್ನ ಕಾಯಿಲೆಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಸಹಕಾರದ ಕುರಿತು ಚರ್ಚಿಸಿದರು.
Thalassemia ಮತ್ತು Aplastic anaemia ಎಂಬ ರಕ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಮಕ್ಕಳ ಅರೋಗ್ಯದ ಮೇಲೆ ಮಾತ್ರವಲ್ಲದೆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ಭೀಕರ ಹೊಡೆತ ನೀಡಿದೆ. ಈ ಖಾಯಿಲೆ ಬಂದರೆ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಖರ್ಚು ತಗಲುವ ಸಂಭವವಿದೆ. ಕಸ್ತೂರ್ಬಾ ಮೆಡಿಕಲ್ ಕಾಲೇಜು ಮುಖಾಂತರ ಈಗಾಗಲೇ ಬಹಳಷ್ಟು ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗಿದೆ.
ಈ ಖಾಯಿಲೆ ತಗಲುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿಷ್ಠಿತ “ಕೋಲ್ ಇಂಡಿಯಾ” ಸಂಸ್ಥೆಯು ಸುಮಾರು 10 ಲಕ್ಷದಿಂದ 15 ಲಕ್ಷ ರೂಪಾಯಿಯವರೆಗೆ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಿ ಪ್ರಸ್ತುತ ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ರೋಗಿಗಳಿಗೆ ನೆರವಾಗುವಂತೆ ಕೋರಲಾಯಿತು. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಜೆಪಿ ನಡ್ಡಾರವರಿಗೆ ಇಲಾಖೆಯ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಲಾಯಿತು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಅತಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹರ್ಶ ಮಂಗಳ ಇದರ ನಿರ್ದೇಶಕರಾದ ಶ್ರೀಮತಿ ಎಲ್.ಎಸ್.ಚಾಂಗ್ಸನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಲು ಹಾಗೂ ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ವಿರುದ್ಧ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯಾದ್ಯಂತ ಗ್ರಾಮೀಣ ಭಾಗಗಳಿಂದ ನಗರಕ್ಕೆ ಬಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಲಕ್ಷದಲ್ಲಿದೆ. ಅಂತೆಯೇ ಮುಖ್ಯವಾಗಿ ಉಡುಪಿಯಂತಹ ನಗರಕ್ಕೆ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರ ಜಿಲ್ಲೆಯಿಂದ ಬರುತ್ತಾರೆ. ಈಗಾಗಲೇ ಹೈಸ್ಕೂಲ್ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗಿ 40 ದಿನಗಳಾಗುತ್ತಾ ಬಂದರೂ ಇನ್ನು ಸಹ ಹಾಸ್ಟೆಲ್ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ, ಶಿಕ್ಷಣ ವಂಚಿತರಾಗುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾಸಿರಿ, ಕಾರ್ಮಿಕರ ನಿಧಿ ವಿದ್ಯಾರ್ಥಿ ವೇತನವೂ ಸಹ ಬಿಡುಗಡೆಯಾಗುತ್ತಿಲ್ಲ, ರೈತನಿಧಿ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಮ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ, ನಗರ ಸಹ-ಕಾರ್ಯದರ್ಶಿಗಳಾದ ಭಾವನಾ ಸೇರಿದಂತೆ ಪ್ರಮುಖರಾದ ಭೂಷಣ್, ಮನು, ಮಾಣಿಕ್ಯ, ಸ್ವಸ್ತಿಕ್, ನವೀನ್, ಅನಂತಕೃಷ್ಣ ಮತ್ತಿತರರಿದ್ದರು.

ಮಾಹೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ವಾಸಮಾರ್ಗ ನಿಭಾವಣೆಯ ಕಾರ್ಯಾಗಾರ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನಲ್ಲಿ ಸುಧಾರಿತ ವರ್ಣಪ್ರಭಾ ಮಾದರಿ [ಅಡ್ವಾನ್ಸ್ಡ್ ಆರೋರ ಮೊನೆಕ್ವಿನ್-advanced Aurora mannequin] ಯನ್ನು ಬಳಸಿ ‘ಸಮರ್ಪಕ ಶ್ವಾಸಮಾರ್ಗ ನಿಭಾವಣೆ’ [ಕಾಂಪ್ರಿಹೆನ್ಸಿವ್ ಏರ್ವೇ ಮೆನೇಜ್ಮೆಂಟ್] ಮಾಡುವ ಕುರಿತಾದ ವಿಶಿಷ್ಟ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕೆಎಂಸಿಯ ಡೀನ್ ಮತ್ತು ಪ್ರಾಧ್ಯಾಪಕರಾದ ಡಾ. ಪದ್ಮರಾಜ ಹೆಗ್ಡೆ ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ‘ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಶುಶ್ರೂಷೆಯ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಬಗ್ಗೆ ತರಬೇತಿಯ ಅಗತ್ಯತೆಯನ್ನು ಒತ್ತಿ ಹೇಳಿದರು. ನವತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಕುರಿತು ಸ್ನಾತಕೋತ್ತರ ಪದವೀಧರರನ್ನು ತರಬೇತಿಗೊಳಿಸಿ ಸ್ವಾಸ್ಥ್ಯಪೂರ್ಣ ಸಮಾಜ ಮತ್ತು ಸುಸ್ಥಿರ ಭವಿಷ್ಯದೊಂದಿಗೆ ರಾಷ್ಟ್ರವನ್ನು ಕಟ್ಟುವಲ್ಲಿ ಕೊಡುಗೆ ನೀಡಬೇಕು’ ಎಂದು ಅವರು ಹೇಳಿದರು.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ನ ಡೀನ್ ಡಾ. ಜುಡಿತ್ ಎ. ನೊರೊನ್ಹಾ ಅವರು ಮಾತನಾಡಿ, ‘ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ತರಬೇತಿಗೊಳಿಸುವ ಪ್ರಸ್ತುತ ಕಾರ್ಯಾಗಾರವು ಹೆಚ್ಚು ಅರ್ಥಪೂರ್ಣವಾಗಿದೆ. ಇದು ಸಮೂಹಪ್ರಯತ್ನದ ಮನೋಭಾವವನ್ನು ಕೂಡ ಉತ್ತೇಜಿಸುತ್ತದೆ’ ಎಂದರು.
ಮಣಿಪಾಲದ ಅಂತರ್ಕುಶಲ ಸುಧಾರಿತ ವ್ರಣ ಆರೈಕೆ ಕೇಂದ್ರ [ಮಣಿಪಾಲ್ ಸೆಂಟರ್ ಫಾರ್ ಇಂಟರ್ಪ್ರೊಫೆಶನಲ್ ಅಡ್ವಾನ್ಸ್ಡ್ ವೂಂಡ್ ಕೇರ್- Manipal Center for Interprofessional Advanced Wound Care] ಇದರ ಸಂಜಾಲಕರಾದ ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಕಾರ್ಯಾಗಾರದ ಮುಖ್ಯ ಆಶಯದ ಕುರಿತು ಮಾತನಾಡಿದರು. ಪ್ರಸ್ತುತ ಕೇಂದ್ರವು ಗಾಯಗಳ ಶುಶ್ರೂಷೆಯಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನದೊಂದಿಗೆ ಆರೋಗ್ಯ ಆರೈಕೆ ವಿಭಾಗದ ವೃತ್ತಿಪರರನ್ನು ತರಬೇತಿಗೊಳಿಸಲು ಚತುರಂಕ ಪ್ರಶಿಕ್ಷಣ [4-ಕ್ರೆಡಿಟ್ ಸರ್ಟಿಫಿಕೇಟ್ ಕೋರ್ಸ್] ನ್ನು ಮೊದಲಬಾರಿಗೆ ಉಪಕ್ರಮಿಸಿರುವುದನ್ನು ಪ್ರಕಟಿಸಿದರು.
ಡೆಲ್ಟಾ ಹೆಲ್ತ್ ಕೇರ್ನ ಮುಖ್ಯ ತಾಂತ್ರಿಕ ಅಧಿಕಾರಿ ಏಕ್ತಾ ಮಲಿಕ್ ಅವರು ಆರೋರಾ ಮೊನೆಕ್ವಿನ್ನ್ನು ಪರಿಚಯಿಸಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರಾಯೋಗಿಕ ಕಲಿಕೆಯ ಹೊಸ ಮಾದರಿಯೊಂದು ಸೇರ್ಪಡೆಗೊಂಡಿರುವುದನ್ನು ವಿವರಿಸಿದರು. ಡಾ. ವಿಮಲ್ ಕೃಷ್ಣನ್, ಡಾ. ವಿಶಾಲ್ ಶಾನ್ಭಾಗ್. ಡಾ. ಪ್ರತಿಭಾ ತೋದೂರು, ಪ್ರಸನ್ನ ಕುಮಾರ, ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಈ ಹೊಸ ಮಾದರಿಯ ವೆದ್ಯಕೀಯ ಉಪಕರಣವನ್ನು ಬಳಸಿ, ಹೃದಯಾಘಾತ ಹೊಂದಿದ ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದರು. ಶ್ರೀನಿಧಿ ಜೋಗಿ ಮತ್ತು ಇಫೆನ್ಶಿಯಾ ಡಿ. ವಾಹ್ಲ್ಯಾಂಗ್ ಅವರು ಕಾರ್ಯಾಗಾರವನ್ನು ಆಯೋಜಿಸಿದ್ದು, ಸ್ನಾತಕೋತ್ತರ ಪದವಿ ಮತ್ತು ಶುಶ್ರೂಷಕಿ [ನರ್ಸ್] ಯರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಹೊಸ ಉಪಕ್ರಮವು ಅರೋರಾ ಮನುಷ್ಯಾಕೃತಿಯನ್ನು ಬಳಸಿಕೊಂಡು ಸಿಮ್ಯುಲೇಶನ್ ಆಧಾರಿತ ತರಬೇತಿಯ ಮೂಲಕ ಆರೋಗ್ಯ ವೃತ್ತಿಯ ಶಿಕ್ಷಣವನ್ನು ಹೆಚ್ಚಿಸುತ್ತದೆ. ಇದು ಹೃದಯ ಸ್ತಂಭನ ನಿರ್ವಹಣೆ, ARDS ಪ್ರತಿಕ್ರಿಯೆ ಮತ್ತು ಸುಧಾರಿತ ಶ್ವಾಸಮಾರ್ಗ ನಿರ್ವಹಣೆಯಂತಹ ನಿರ್ಣಾಯಕ ಕೌಶಲ್ಯಗಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಆರೋಗ್ಯ ವೃತ್ತಿಪರರಿಗೆ ಒದಗಿಸುತ್ತದೆ. ವಾಸ್ತವಿಕ ಸಿಮ್ಯುಲೇಶನ್ಗಳನ್ನು ಬಳಸಿಕೊಳ್ಳುವ ಮೂಲಕ, ತರಬೇತಿಯು ಉನ್ನತ ಮಟ್ಟದ ವೈದ್ಯಕೀಯ ಸನ್ನಿವೇಶಗಳಲ್ಲಿ ಸಾಮರ್ಥ್ಯ, ರೋಗ ನಿರ್ಣಯ ಮತ್ತು ರೋಗಿಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ನವೀನ ವಿಧಾನದ ಮೂಲಕ ವೈದ್ಯಕೀಯ ಸೇವೆಯಲ್ಲಿ ತಮ್ಮ ತಂತ್ರಗಳನ್ನು ಪರಿಷ್ಕರಿಸಬಹುದು ಮತ್ತು ನಿಯಂತ್ರಿತ, ಬೆಂಬಲಿತ ಪರಿಸರದಲ್ಲಿ ವಿಶ್ವಾಸವನ್ನು ಪಡೆಯಬಹುದು, ಅಂತಿಮವಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಕಾರಣವಾಗುತ್ತದೆ.

ಉಡುಪಿ : ತೆಂಕನಿಡಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಶೋಭಾ ಡಿ.ನಾಯ್ಕ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಶೋಭಾ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. 26 ಸದಸ್ಯ ಬಲದ ತೆಂಕನಿಡಿಯೂರು ಗ್ರಾಪಂನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತ 14 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 12 ಮಂದಿ ಸದಸ್ಯರು ಆಯ್ಕೆಯಾಗಿದ್ದರು.
ಎಸ್ಟಿ ಮೀಸಲಾತಿಯಲ್ಲಿ ಶೋಭಾ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 13 ಸದಸ್ಯರೊಂದಿಗೆ ಸಮಬಲ ಸಾಧಿಸಿದ್ದು, ಪಂಚಾಯತ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ನಾಯಕರಾದ ಗಣೇಶ್ ನೆರ್ಗಿ, ಗೋಪಾಲಕೃಷ್ಣ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಗ್ರಾಪಂ ಸದಸ್ಯರಾದ ಸತೀಶ್ ನಾಯಕ್, ಸುರೇಶ್ ನಾಯಕ್, ಪ್ರಥ್ವಿರಾಜ್ ಶೆಟ್ಟಿ, ಶರತ್ ಶೆಟ್ಟಿ, ವೆಂಕಟೇಶ್ ಕುಲಾಲ್, ರವಿರಾಜ್ ಲಕ್ಷ್ಮೀನಗರ, ಮೀನಾ ಪಿಂಟೊ, ಸಿಂಪ್ರಿಯಾ ರೊಡ್ರಿಗಸ್, ಮಂಜುನಾಥ್ ಆಚಾರ್ಯ, ಅನುಷಾ ಆಚಾರ್ಯ, ವಿನಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.