ಕಾರ್ಕಳ : ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
Student Achievement
ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಭಟ್ ರಾಜ್ಯಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ : ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಪೂಜಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ಭಟ್ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಎಸ್.ವಿ.ಟಿ. ವಿದ್ಯಾಸಂಸ್ಥೆಯ ಸಾಕ್ಷಿ ಶೆಟ್ಟಿ ರಾಜ್ಯ ಮಟ್ಟ ಕುಸ್ತಿ ಪಂದ್ಯಾಟಕ್ಕೆ ಆಯ್ಕೆ
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಎಸ್.ವಿ.ಟಿ. ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿನ ಸಾಕ್ಷಿ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಹಿರಿಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.
ಮಣಿಪಾಲ : ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳ ‘ಟ್ರಸ್ಟ್ ಎಂಐಟಿ’ ತಂಡವನ್ನು ಮೈ ಗೌ ಇಂಡಿಯಾ ನಡೆಸಿದ ಸ್ಪೇಸ್ಪೋರ್ಟ್ ಅಮೆರಿಕಾ ಕಪ್-2024ರಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕಾಗಿ ‘ಭಾರತದ ಯಂಗ್ ಇನ್ನೋವೇಟರ್ಸ್’ಗಳಾಗಿ ಮಾನ್ಯತೆ ನೀಡಲಾಗಿದೆ.

‘ದಿ ಸ್ಪೇಸ್ಪೋರ್ಟ್ ಅಮೆರಿಕ ಕಪ್’ ಎಂಬುದು ರಾಕೆಟ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ ಅತ್ಯಂತ ದೊಡ್ಡ ಅಂತರ್ ಕಾಲೇಜು ಸ್ಪರ್ಧೆಯಾಗಿದೆ. ಜಾಗತಿಕವಾಗಿ ಇಡೀ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಸ್ಪರ್ಧಿಸುತ್ತಾರೆ.
ಇದರಲಿ ರಾಕೆಟ್ಗಳ ವಿನ್ಯಾಸ, ನಿರ್ಮಾಣ ಹಾಗೂ ಅವುಗಳ ಉಡಾವಣೆ ಸವಾಲುಗಳಿಗೆ ವಿದ್ಯಾರ್ಥಿಗಳು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಪ್ರತಿಭಾನ್ವೇಷಣೆಗೆ ನಡೆಯುವ ಬೃಹತ್ ಸ್ಪರ್ಧೆ ಇದಾಗಿದೆ. ಈ ಬಾರಿ ಎಂಐಟಿಯ ಥ್ರಸ್ಟ್ ಎಂಐಟಿ ತಂಡ ತೋರಿದ ಅತ್ಯುತ್ತಮ ಪ್ರದರ್ಶನ ಮೈ ಗೌ ಇಂಡಿಯಾದಿಂದ ರಾಷ್ಟ್ರೀಯ ಮನ್ನಣೆ ಪಡೆಯಲು ಯಶಸ್ವಿಯಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಗಂಗೊಳ್ಳಿ : ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಅಂಗವಾಗಿ ನಾಗೂರಿನಲ್ಲಿ ಏರ್ಪಡಿಸಿದ್ದ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆಯ ಆರು ಮತ್ತು ಏಳನೇ ತರಗತಿಯ ವಿಭಾಗದಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಮ್ ದೇವಾಡಿಗ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಂಜಿತ್ ಎಮ್ ದೇವಾಡಿಗ ಸ್ಯಾಕ್ಸೋಫೋನ್ ಕಲಾವಿದ ಮಾದವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿ ಪುತ್ರ.
ಡೆಂಗ್ಯು, ಪರಿಸರಸ್ನೇಹಿ ಗಣಪನ ಜಾಗೃತಿಯಲ್ಲಿ ಪುಟ್ಟಬಾಲೆ; ಸ್ಪೀಕರ್ ಯು.ಟಿ.ಖಾದರ್ ಶ್ಲಾಘನೆ
ಮಂಗಳೂರು : ಇಂದಿನ ಕೆಲ ಮಕ್ಕಳು ಲೋಕದ ಪರಿವೇ ಮೊಬೈಲ್ ಗುಂಗಿನಲ್ಲಿಯೇ ಮುಳುಗುತ್ತಿದ್ದರೆ, ಇನ್ನು ಕೆಲವರು ಶಾಲೆಯ ಪಠ್ಯದ ಹೊರತು ಬೇರೆ ವಿಚಾರಗಳ ಕಡೆಗೆ ಕಣ್ಣುಹಾಯಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಪುಟ್ಟಬಾಲೆ ಮನೆಮನೆಗೆ, ಕೇರಿಕೇರಿಗೆ ಹೋಗಿ ಡೆಂಗ್ಯು, ಪರಿಸರಸ್ನೇಹಿ ಗಣಪನ ಜಾಗೃತಿಯಲ್ಲಿ ತೊಡಗಿದ್ದಾಳೆ. ಈಕೆಯ ಈ ಸಾಧನೆಗೆ ಸ್ವತಃ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಶ್ಲಾಘನೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.
ಸನ್ನಿಧಿ ಕಶೆಕೋಡಿ ಎಂಬ ಪುಟ್ಟಬಾಲಕಿಯೇ ಈ ರೀತಿ ಜಾಗೃತಿ ಮೂಡಿಸುತ್ತಿರುವಾಕೆ. ಇವಳು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಮಳೆಗಾಲ ಬಂದರೆ ಸಾಕು ಈಕೆ ಮಂಗಳೂರಿನ ಸುತ್ತಮುತ್ತಲಿನ ಪರಿಸರದ ಅಂಗಡಿಗಳಿಗೆ, ಮನೆಗಳಿಗೆ ತೆರಳಿ ಡೆಂಗ್ಯು ಭೀತಿಯ ಬಗ್ಗೆ ಜಾಗೃತಿ ಮೂಡಿಸುತ್ತಾಳೆ. ಅಲ್ಲದೆ ಗಣೇಶ ಚತುರ್ಥಿ ಸಂದರ್ಭ ಎಲ್ಲರೂ ಪರಿಸರಸ್ನೇಹಿ ಗಣಪತಿಯನ್ನೇ ತಂದು ಪೂಜಿಸಬೇಕು. ಇದರಿಂದ ಗಣಪತಿ ವಿಸರ್ಜನೆ ವೇಳೆ ಜಲಮೂಲಗಳು ಕಲುಷಿತಗೊಳ್ಳುವುದಿಲ್ಲ ಎಂದು ದೊಡ್ಡವರಿಗೇ ಪಾಠ ಮಾಡುತ್ತಾಳೆ.
ಈಕೆಯ ಈ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಂಗಳೂರಿನ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ. ಈ ಸಂದರ್ಭ ಸನ್ನಿಧಿ ಕಶೆಕೋಡಿ ‘ವಿಧಾನಸಭಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ಮುಂದೆ ನೀವು ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಬೇಕು. ನಮ್ಮ ಊರಿನ ಕೀರ್ತಿ ಪತಾಕೆ ಹಾರಿಸಬೇಕು” ಎಂದು ಹೇಳಿದಳು. ಇದಕ್ಕೆ ವಿಧಾನಸಭಾಧ್ಯಕ್ಷರು “ನೀನು ಕೂಡ ದೇಶದಲ್ಲಿ ಉತ್ತಮ ಹೆಸರು ಮಾಡುತ್ತಿ” ಎಂದು ಹಾರೈಸಿದರು.
ವಿಜ್ಞಾನ ವಿಚಾರಗೋಷ್ಠಿ : ಸಾಣೂರು ಪ್ರೌಢಶಾಲೆಯ ಕಾರ್ತಿಕ್ ರಾಜ್ಯಮಟ್ಟಕ್ಕೆ ಆಯ್ಕೆ
ಕಾರ್ಕಳ : ಕಮಲ ಬಾಯಿ ಪ್ರೌಢಶಾಲೆ ಕಡಿಯಾಳಿ ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಕಾರ್ಕಳ ಸಾಣೂರು ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.

ಶಾಲೆಯ ವಿಜ್ಞಾನ ಶಿಕ್ಷಕಿ ಅನಿತಾ ರೀಟಾ ಇವರಿಗೆ ಮಾರ್ಗದರ್ಶನ ನೀಡಿರುತ್ತಾರೆ.
ಉಡುಪಿ : ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ವಯೋಮಾನ 18ರ ಬಾಲಕರ ವಿಭಾಗದ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ ಪೂಜಾರಿ ರಾಜ್ಯಮಟ್ಟದ ಅಮೆಚೂರ್ ಜೂನಿಯರ್ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿರಾಗ್ ಸಿ ಪೂಜಾರಿ ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಳೆಮಜಲು ಪೊನ್ವಲ್ಲಿಯ ಅರುಣ್ ಕುಮಾರ್ ಡಿ. ಅವರು ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ 2024ರ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅರುಣ್ ಕುಮಾರ್ ಬೆಂಗಳೂರಿನ ಜಿ.ಪಿ.ಎಸ್.ವಿ. ಮತ್ತು ಕೋ. ಮಲ್ಲೇಶ್ವರಂ ಇಲ್ಲಿ ತರಬೇತಿ ಪಡೆದಿದ್ದಾರೆ. ದೇವದಾಸ್ ಪೊನ್ವಲ್ಲಿ ಹಾಗೂ ಸರಸ್ವತಿ ದೇವಿ ದಂಪತಿ ಪುತ್ರರಾಗಿರುವ ಅರುಣ್ ಕುಮಾರ್ ಯೇನೆಕಲ್ಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ.
ಸ.ಪ್ರೌ.ಶಾಲೆ ಮೂಡುಮಾರ್ನಾಡು ಇಲ್ಲಿನ ವಿದ್ಯಾರ್ಥಿ ಸುಮಂತ್ ಎಸ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮೂಡುಬಿದಿರೆ : ತಾಲೂಕಿನ ಮೂಡುಮಾರ್ನಾಡು ಸರಕಾರಿ ಫ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಎಸ್ ಆಂಧ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿವಿಯಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ಶಿಪ್ನಲ್ಲಿ 600ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಹಿಂದೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದರು. ಬೆಂಗಳೂರಿನ ಹೆಚ್ಸಿಎಲ್ ಫೌಂಡೇಶನ್ ಈ ಕ್ರೀಡಾಕೂಟಗಳನ್ನು ಆಯೋಜಿಸಿತ್ತು.
ಸುಮಂತ್ ಎಸ್. ಅವರು ಕೆಲ್ಲಪುತ್ತಿಗೆಯ ಶೇಖರ ಪೂಜಾರಿ ಮತ್ತು ಮೋಹಿನಿಯವರ ಪುತ್ರರಾಗಿದ್ದಾರೆ
ಮೂಡುಮಾರ್ನಾಡು ಶಾಲೆಯ ವಿದ್ಯಾರ್ಥಿಯ ಈ ಸಾಧನೆಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಮತ್ತು ಸಮಿತಿಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯಿನಿ ಡಾ. ರಾಜಶ್ರೀ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.