ಬ್ರಹ್ಮಾವರ/ಕುಂದಾಪುರ : ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂದಾಪುರ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕಿನಲ್ಲಿ ಮಳೆಯಿಂದ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಬೈಲಾಡಿ, ತೆಂಕಬೆಟ್ಟು, ಗುಳ್ಳಾಡಿ, ಮೊಗೆಬೆಟ್ಟು ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ನೂರಾರು ಎಕರೆ ಕೃಷಿಭೂಮಿಗಳು ಸೇರಿದಂತೆ ತಗ್ಗುಪ್ರದೇಶಗಳ ಮನೆಗಳು ಜಲಾವೃತವಾಗಿದೆ.

ಅಗ್ನಿಶಾಮಕ ದಳದ ಸಿಬಂದಿ, ತೆಕ್ಕಟ್ಟೆ ವಲಯದ ಬೇಳೂರು ವಿಪತ್ತು ನಿರ್ವಹಣಾ ಘಟಕದ ಶೌರ್ಯಪಡೆಯ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ ದೋಣಿ ಮೂಲಕ ಈ ಪರಿಸರದ ಸುಮಾರು 8 ಕುಟುಂಬದ ಸುಮಾರು 25 ಮಂದಿ ನೆರೆ ಪೀಡಿತ ನಿರಾಶ್ರಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ನೆರೆ ಪೀಡಿತ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಪರಿಸರಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ ಸಹಿತ ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದರು.