ಉಡುಪಿ : ಚಾಲಕ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ತೋಡಿಗೆ ಉರುಳಿಬಿದ್ದ ಪರಿಣಾಮ ನಾಲ್ಕು ಮಂದಿ ಭಕ್ತಾದಿಗಳು ಗಾಯಗೊಂಡ ಘಟನೆ ಉಡುಪಿ ಕಲ್ಸಂಕ ಬಳಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದೆ.
ಆಟೋ ರಿಕ್ಷಾದಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚು, ಆರು ಮಂದಿ ಪ್ರಯಾಣಿಕರು ಪ್ರಯತ್ನಿಸುತ್ತಿದ್ದರು. ಈ ಪೈಕಿ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರೆಲ್ಲರೂ ಉಡುಪಿ ಕೃಷ್ಣದೇವರ ದರ್ಶನಕ್ಕಾಗಿ ಆಗಮಿಸಿದ್ದರು. ದರ್ಶನ ಪಡೆದು ಹಿಂತಿರುಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನ ಕೈಗೂ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಆಟೋದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಲ್ಸಂಕದಿಂದ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ತಡೆಬೇಲಿ ಇಲ್ಲದ ಪರಿಣಾಮ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
