Police
ಶಿರ್ವ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವರಿಗೆ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಸ್ಕೈಫ್ ಆಫ್ ಕನೆಕ್ಟ್, ವಾಟ್ಸ್ ಆಪ್ ವೀಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ರೂ. 11,87,463 ಹಣವನ್ನು ಮೋಸದಿಂದ ವಂಚಿಸಿದ ಘಟನೆ ನಡೆದಿದೆ.

ಪ್ರಮೀಳಾ (39) ಅವರ ಮನೆಯಲ್ಲಿರುವಾಗ ಅ. 25 ರಂದು ಬೆಳಗ್ಗೆ ಓರ್ವ ವ್ಯಕ್ತಿ ಕರೆಮಾಡಿ ವಾಂಗ್ ಮಿಂಗ್ ಜಿ ಎಂಬವರು ನಿಮ್ಮ ಹೆಸರಿಗೆ ಪಾರ್ಸೆಲ್ ಕಳುಹಿಸಿದ್ದು ಅದರಲ್ಲಿ 5 ಕೆಜಿ ಬಟ್ಟೆ, 8 ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು 700 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ ಎಂದು ತಿಳಿಸಿ ನಿಮ್ಮ ಮೇಲೆ ಕೇಸು ದಾಖಲಾಗಿರುವುದಾಗಿ ತಿಳಿಸಿದ್ದಾನೆ.
ಕರೆ ಮಾಡಿದ ವ್ಯಕ್ತಿ ತಾನು ಮುಂಬೈ DTDC ಸೀನಿಯರ್ ಎಕ್ಸಿಕ್ಯೂಟಿವ್ ಮನೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ಸ್ಕೈಫ್ ವಿಡಿಯೋ ಕಾಲ್ಗೆ ಕನೆಕ್ಟ್ ಆಗುವಂತೆ ತಿಳಿಸಿ, ಬಾಂಬೆ ಸೈಬರ್ ಕ್ರೈಂ ಬ್ರಾಂಚ್ಗೆ ಕಾಲ್ ಕನೆಕ್ಟ್ ಮಾಡಿರುವುದಾಗಿ ತಿಳಿಸಿದ್ದಾನೆ. ಪ್ಲೇಸ್ಟೋರ್ನಲ್ಲಿ ಸ್ಕೈಫ್ ಆಪ್ ಡೌನ್ಲೋಡ್ ಮಾಡಿ [email protected] ಲಿಂಕ್ ಸರ್ಚ್ ಮಾಡುವಂತೆ ತಿಳಿಸಿದ್ದಾನೆ. ವೀಡಿಯೋ ಕಾಲ್ನಲ್ಲಿ ಚಾಟ್ ಮಾಡುತ್ತಾ ಆಧಾರ್ ಕಾರ್ಡ್ ಕೇಳಿದ್ದು, ಪ್ರಮೀಳಾ ಅವರು ಆಧಾರ್ ಕಾರ್ಡ್ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಪ್ರಮೀಳಾ ಅವರ ಹೆಸರು, ವಿಳಾಸ ಹಾಗೂ ಆಧಾರ್ ನಂಬರ್ ಇರುವ ಅರೆಸ್ಟ್ ಆರ್ಡರ್ ಕಳುಹಿಸಿ ಅರೆಸ್ಟ್ ಎಂದು ಬೆದರಿಸಿದ್ದಾನೆ.
ನಿನ್ನ ಹೆಸರಿನ ಅಕೌಂಟ್ ನಂಬ್ರ ಹಾಗೂ ಅದರಲ್ಲಿ ಎಷ್ಟು ಹಣ ಇದೆ ಎಂದು ಕೇಳಿದಾಗ ಹೆದರಿದ ಮಹಿಳೆ ಅಳುತ್ತಾ ತನ್ನ ಆಕೌಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಆ ವ್ಯಕ್ತಿ ವಾಟ್ಸ್ ಆಪ್ ವಿಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ಮಹಿಳೆಯ ರೂ. 11,87,463 ಹಣವನ್ನು ಮೋಸದಿಂದ ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು : ಕಳೆದ ಎರಡು ವರ್ಷದ ಹಿಂದೆ ನಗರದ ಬೀಡಿ ಬ್ರಾಂಚ್ವೊಂದರಿಂದ ಸಾವಿರಾರು ರೂ ಮೌಲ್ಯದ ಬೀಡಿ ಕಳವು ಮಾಡಿದ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಉಳ್ಳಾಲದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮ ನಿವಾಸಿ ಮಹಮ್ಮದ್ ಬಂಧಿತ ಆರೋಪಿ. ಈತ 2022ರಲ್ಲಿ ಕೂರ್ನಡ್ಕದ ಬೀಡಿ ಬ್ರಾಂಚ್ವೊಂದರಿಂದ ಸುಮಾರು 22 ಸಾವಿರ ರೂ ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿದ್ದು, ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಹಾಗೂ ಡಿವೈಎಸ್ಪಿ ಅರುಣ್ ನಾಗೇಗೌಡರ ನಿರ್ದೇಶನ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ವಸಂತ ಗೌಡ ಮತ್ತು ಬಸವರಾಜು ಅವರು ಆರೋಪಿಯನ್ನು ಉಳ್ಳಾಲದ ಕೆ.ಸಿ ರೋಡ್ ಎಂಬಲ್ಲಿ ಅಕ್ಟೋಬರ್ 26ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅದಮಾರು ಶಾಲಾ ವಿದ್ಯಾರ್ಥಿಗೆ ಅಟೋ ರಿಕ್ಷಾ ಢಿಕ್ಕಿ – ಕಾಲುಗಳಿಗೆ ಗಂಭೀರ ಗಾಯ; ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆ
ಪಡುಬಿದ್ರಿ : ಅಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಒಂದನೇ ತರಗತಿ ವಿದ್ಯಾರ್ಥಿಗೆ ರಿಕ್ಷಾ ಢಿಕ್ಕಿಹೊಡೆದ ಪರಿಣಾಮ ಎರಡೂ ಕಾಲಿಗೂ ಗಂಭೀರ ಗಾಯಗಳಾದ ಘಟನೆ ಶಾಲಾ ಆವರಣದಲ್ಲೇ ಸಂಭವಿಸಿದೆ.
ಗಾಯಗೊಂಡ ಬಾಲಕ ಎರ್ಮಾಳು ಬರ್ಪಣಿ ಸಂತೋಷ್ ಶೆಟ್ಟಿಯವರ ಪುತ್ರ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಭವಿನ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಶಾಲೆ ಬಿಟ್ಟ ಸಂದರ್ಭ ಮನೆಗೆ ಹೋಗಲು ಶಾಲಾ ಆವರಣದ ಒಳಗೆ ತಂದೆಯನ್ನು ಕಾಯುತ್ತಿರುವ ವೇಳೆ, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಅಟೋ ತಂದೆಯನ್ನು ಕಾಯುತ್ತಿದ್ದ ಪುಟಾಣಿ ಬಾಲಕನಿಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಬಾಲಕನ ಎರಡೂ ಕಾಲುಗಳಿಗೂ ಗಂಭೀರ ಗಾಯಗಳಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಅಪಘಾತಕ್ಕೆ ಅಟೋ ರಿಕ್ಷಾ ಚಾಲಕ ಸದಾನಂದ ದೇವಾಡಿಗ ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಾಲಕನ ತಂದೆ ಸಂತೋಷ್ ಶೆಟ್ಟಿ ಬರ್ಪಾಣಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಉಡುಪಿ : ಹಳೇ ಪ್ರಕರಣಕ್ಕೆ ಸಂಬಂಧಿಸಿ ಕಳೆದ 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ರೆಂಜಾಳದ ಮಹಮ್ಮದ್ ಬಶೀರ್ನನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಕರ್ತವ್ಯದಲ್ಲಿ ತೆರಳಿದ್ದ ಠಾಣಾ ಹೆಡ್ ಕಾನ್ಸ್ಟೆಬಲ್ ಸುರೇಶ್, ಪಿಸಿ ಹೇಮಂತ್ ಕುಮಾರ್, ಶಿವಕುಮಾರ್ ಮತ್ತು ಗಡ್ಡಯ್ಯ ಹಿರೇಮಠ ಅವರು ಮಂಗಳೂರಿನ ಮಾರುಕಟ್ಟೆಯಲ್ಲಿ ಆರೋಪಿ ಬಶೀರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಖಾಸಗಿ ಬಸ್: ಬಸ್ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರು
ಕಾಪು : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ವೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಕಾಪುವಿನ ಉಳಿಯಾರಗೋಳಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ – ಶಿರ್ವ ನಡುವೆ ಸಂಚರಿಸುತ್ತಿದ್ದ ಮಿಲಾನ್ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸರಿದು ನಿಂತಿದೆ. ತಕ್ಷಣವೇ ಸ್ಥಳೀಯರು ಕಾರ್ಯಾಚರಣೆ ನಡೆಸಿ, ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಮುಂಭಾಗಕ್ಕೆ ಹಾನಿಯಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಬಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಕಾಪು : ಆಸ್ತಿ ಕಲಹ ವಿಚಾರವಾಗಿ ಆಪಾದಿತಳಾಗಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅನುರಾಧಾ ಕರ್ಕೇರ ಎಂಬಾಕೆಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಮೂಳೂರಿನಲ್ಲಿ ಆಸ್ತಿ ವಿಷಯದಲ್ಲಿ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, 2012ರಲ್ಲಿ ಪ್ರಕರಣ ದಾಖಲಾಗಿತ್ತು. ಆಕೆಯ ಸಹೋದರಿ ನೀತಾ ನೀಡಿದ್ದ ದೂರಿನಂತೆ ಅನುರಾಧಾ ವಿರುದ್ಧ ಪ್ರಕರಣ ದಾಖಲಾಗಿತ್ತು.
2017ರವರೆಗೆ ಕೋರ್ಟ್ಗೆ ಹಾಜರಾಗಿ ಬಳಿಕ ತಲೆಮರೆಸಿ ಕೊಂಡಿದ್ದಳು. ಈ ಬಗ್ಗೆ ಉಡುಪಿಯ 2ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಆದೇಶದಂತೆ ಮುಂಬಯಿಗೆ ತೆರಳಿದ್ದ ಕಾಪು ಎಎಸ್ಐ ರವೀಶ್ ಹೊಳ್ಳ, ಎಚ್ಸಿಗಳಾದ ಮೊಹಮ್ಮದ್ ರಫೀಕ್ ಮತ್ತು ಸುಲೋಚನಾ ಅವರು ಎಸ್ಐ ಅಬ್ದುಲ್ ಖಾದರ್ ಮಾರ್ಗದರ್ಶನದಂತೆ ಆರೋಪಿಯನ್ನು ಸಯಾನ್ನಲ್ಲಿ ಬಂಧಿಸಿ, ಊರಿಗೆ ಕರೆ ತಂದಿದ್ದಾರೆ.
ಆಕೆಯನ್ನು ಉಡುಪಿ ಕೋರ್ಟ್ಗೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15,000 ರೂ. ದಂಡ ವಿಧಿಸಿ, ಆಗಸ್ಟ್ 21ರಂದು ಮತ್ತೆ ಹಾಜರಾಗುವಂತೆ ಸೂಚಿಸಿ ಜಾಮೀನು ನೀಡಿದೆ.
ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ಆಗಸ್ಟ್ 18ರಂದು ನಿಟ್ಟೆ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿರುವ ಹಳೆಯ ಕ್ರಶರ್ ಬಳಿ ಸದಾನಂದ, ಗಣೇಶ್, ಪ್ರಥಮ್, ಜಯರಾಜ್, ಸೂರ್ಯ ಮತ್ತು ರಾಜ ಎಂಬವರು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆಟವಾಡುತ್ತಿದ್ದ 6 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಆಟಕ್ಕೆ ಬಳಸಿದ್ದ 10,200 ರೂ. ನಗದು, ಇಸ್ಪೀಟ್ ಎಲೆಗಳು, ದ್ವಿಚಕ್ರ ವಾಹನ ಸೇರಿದಂತೆ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಗೋ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಶಿರೂರುಪೇಟೆಯ ಮಂಜುನಾಥ ಹೋಟೆಲ್ ಎದುರಿನಲ್ಲಿ ಮಲಗಿದ್ದ ಗೋವುಗಳನ್ನು ಇವರು ಕದ್ದಿರುವುದಾಗಿ ಸಾರ್ವಜನಿಕರು ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಆರೋಪಿಗಳಾದ ಅಬ್ದುಲ್ ಸಮಾದ್ ಮತ್ತು ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಯ ಫ್ಯಾಕ್ಟರಿ ಒಂದರ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಎರಡು ಕಾರುಗಳು, ಮೊಬೈಲ್, ಕೃತ್ಯದ ವೇಳೆ ಬಳಸಿದ್ದ ಚೂರಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಒಟ್ಟು ಒಂಬತ್ತು ಲಕ್ಷ ರೂಪಾಯಿ ಆಗಿರುತ್ತದೆ. ಬೈಂದೂರು ಭಾಗದಲ್ಲಿ ಗೋಕಳ್ಳತನ ಪ್ರಕರಣ ಹೆಚ್ಚುತ್ತಿದ್ದು 24 ಗಂಟೆಗಳ ಅವಧಿಯಲ್ಲಿ ಎರಡು ಪ್ರಕರಣಗಳನ್ನು ಭೇದಿಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಕಳದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ..!!
ಕಾರ್ಕಳ : ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಬ್ರಹತ್ ಪ್ರತಿಭಟನೆ ನಡೆಯಿತು. ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನವನ್ನು ತಳ್ಳುತ್ತಾ, ಲಾರಿಯನ್ನು ಹಗ್ಗದಿಂದ ಕಟ್ಟಿ ಎಳೆಯುತ್ತಾ, ಮಹಿಳಾ ಕಾರ್ಯಕರ್ತರು ಕೈಯಲ್ಲಿ ಚೊಂಬು ಮತ್ತು ತೆಂಗಿನಕಾಯಿಯ ಗೆರಟೆಯನ್ನು ಪ್ರದರ್ಶಿಸುತ್ತಾ ಕಾರ್ಕಳ ಬಸ್ ನಿಲ್ದಾಣದವರೆಗೆ ಬಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಿಕ್ಕಾರವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾದರೆ ಎಲ್ಲಾ ವಸ್ತುಗಳ ದರ ತನ್ನಷ್ಟಕ್ಕೆ ಏರಿಕೆಯಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಚ್ಚ ಸಾಮಗ್ರಿಗಳನ್ನು ಸಾಗಿಸುವುದಾದರೆ ವಾಹನಗಳನ್ನು ಬಳಸಬೇಕಾಗುತ್ತದೆ.

ಕಾಂಗ್ರೆಸ್ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರಿಗೆ ಬಹಳ ದೊಡ್ಡ ಹೊಡೆತ ನೀಡಿದೆ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಾದರೆ ರಾಜ್ಯ ಜನರಿಗೆ ಗ್ಯಾರಂಟಿಗಳ ಅಮೀಷವಡ್ಡಿ ಗೆದ್ದು ಬಂದು ಈಗ ಜನರನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತವಾಗಿದೆ. ಬಡಜನರ ಜೇಬಿಗೆ ಕತ್ತರಿ ಹಾಕಿ ದೋಚಲು ಪ್ರಾರಂಭಿಸಿದೆ ಎಂದರು.
ಮಹಿಳಾ ಮೋರ್ಚ ಅಧ್ಯಕ್ಷರಾದ ರೇಷ್ಮಾ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಗ್ಯಾರಂಟಿಗಳ ಅಮಿಷ ತೋರಿಸಿ ಈಗ ಹಣವನ್ನು ಕ್ರೋಡಿಕರಿಸಲಾಗದೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ, ಖಾಲಿ ಖಜಾನೆ ತುಂಬಿಸಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಕೂಡಲೇ ರಾಜ್ಯದ ಮುಖ್ಯಮಂತ್ರಿ, ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಮಾತನಾಡಿದರು. ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗಡೆ, ಉದಯ ಕೋಟ್ಯಾನ್, ಮುಟ್ಲುಪಾಡಿ ಸುಹಾಸ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ್ ಹೆಗಡೆ, ಹಾಗೂ ಪೊಲೀಸ್ ಉಪಾಧಿಕ್ಷಕರಾದ ಅರವಿಂದ ಕಲಗಜ್ಜಿ ಇವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತಿನೊಂದಿಗೆ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.