ಉಡುಪಿ : ನವರಾತ್ರಿ ಹಬ್ಬದ ಪ್ರಯುಕ್ತ ನಡೆಯಲಿರುವ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಅಕ್ಟೋಬರ್ 12ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು, ಯಡ್ತರೆ, ಬೈಂದೂರು ಮತ್ತು ಬಿಜೂರು ಗ್ರಾಮ ಹಾಗೂ ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ, ಹಂಗಳೂರು ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಹಾಗೂ ಅಕ್ಟೋಬರ್ 14 ರಂದು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶೀಯ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ದಿನಾಂಕಗಳಂದು ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರ ವರೆಗೆ ನಿಷೇಧಿಸಿ, ಒಣದಿನ ಎಂದು ಘೋಷಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
Navaratri Celebration
ಉಡುಪಿ : ನವರಾತ್ರಿಯ 9 ದಿನಗಳ ಕಾಲ ಉಡುಪಿಯ ಕೃಷ್ಣದೇವರು ಹೆಣ್ಣಿನ ಅಲಂಕಾರದಲ್ಲಿ ದರ್ಶನ ನೀಡುವುದು ವಿಶೇಷ. ಪ್ರತಿದಿನವೂ ಕೃಷ್ಣದೇವರಿಗೆ ನಾನಾ ಬಗೆಯ ಅಲಂಕಾರಗಳನ್ನು ಮಾಡಲಾಗುತ್ತದೆ. ಆದರೆ ನವರಾತ್ರಿಯ 9 ದಿನಗಳ ಕಾಲ ನಾನಾ ಬಗೆಯ ಸ್ತ್ರೀ ಶಕ್ತಿಯ ರೂಪಗಳನ್ನು ಕೃಷ್ಣ ದೇವರಲ್ಲಿ ಕಾಣಬಹುದು.
ಕೇವಲ ಅಷ್ಟಮಠಾಧೀಶರು ಮಾತ್ರ ಕೃಷ್ಣದೇವರಿಗೆ ಪೂಜೆ ಮಾಡುವ ಸಂಪ್ರದಾಯ ಇದೆ. ಹಾಗಾಗಿ 9 ದಿನಗಳ ಕಾಲ ಕೃಷ್ಣದೇವರಿಗೆ ಸ್ವಾಮೀಜಿಗಳೇ ವಿಶೇಷ ಸ್ತ್ರೀ ರೂಪದ ಅಲಂಕಾರಗಳನ್ನು ಮಾಡಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಸದ್ಯ ಶ್ರೀ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, ಸ್ವಾಮೀಜಿಗಳು ಮಾಡಿದ ಈ ಅಲಂಕಾರ ಭಕ್ತರ ಗಮನ ಸೆಳೆದಿದೆ. ಕೇವಲ ನವರಾತ್ರಿಯ ಸಂದರ್ಭ ಮಾತ್ರವಲ್ಲ ಪ್ರತಿ ಶುಕ್ರವಾರದಂದು ಉಡುಪಿಯ ಕೃಷ್ಣ ದೇವರಿಗೆ ಹೆಣ್ಣಿನ ಅಲಂಕಾರ ಮಾಡಲಾಗುತ್ತದೆ.
ಮಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತದನಂತರ ಕಾರಲ್ಲಿ ಹೊರಡುವ ಸಮಯದಲ್ಲಿ ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಹುಲಿ ವೇಷವನ್ನು ಕಂಡು ಕಾರಿನಿಂದ ಇಳಿದರು. ತಕ್ಷಣ ಸುಬ್ರಹ್ಮಣ್ಯದ ಖ್ಯಾತ ಫೋಟೋಗ್ರಾಫರ್ ಸಂತೋಷ್ ನುಚಿಲ ಅವರು ರಕ್ಷಿತ್ ಪ್ರೇಮ್ ದಂಪತಿಗಳಿಗೆ ಹುಲಿ ವೇಷ ನರ್ತನವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದ್ದಾರೆ.
ಹುಲಿ ವೇಷದಾರಿಗಳ ನರ್ತನವನ್ನು ಕಂಡು ಪುಳಕಿತರಾದ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ರಕ್ಷಿತ್ ಪ್ರೇಮ್ ದಂಪತಿಗಳು ಎಲ್ಲಾ ವೇಷಧಾರಿಗಳಿಗೆ ಶುಭಾಶಯವನ್ನು ಕೋರಿದರು.
ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ಶ್ರೀ ಮಂಗಳಾದೇವಿಗೆ ರಜತ ಹಸ್ತ ಸಮರ್ಪಣೆ
ಶ್ರೀ ಮಂಗಳಾದೇವಿ ದೇವಸ್ಥಾನದ ಸೇವೆಯನ್ನೇ ಮೂಲ ಧ್ಯೆಯವನ್ನಾಗಿಸಿಕೊಂಡು ಸ್ಥಾಪನೆಯಾದಂತಹ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ನವರಾತ್ರಿಯ ಆರಂಭದ ದಿನವಾದ ಇಂದು ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರ ಸಮ್ಮುಖದಲ್ಲಿ ರಜತ ಹಸ್ತಗಳನ್ನು ಸಮರ್ಪಿಸಲಾಯಿತು.
ಶ್ರೀಮಂಗಳಾದೇವಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವಂತಹ ಶ್ರೀಮಂಗಳಾದೇವಿ ಸೇವಾ ಸಮಿತಿಯು ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಮಹೋತ್ಸವ ಜಾತ್ರಾ ಮಹೋತ್ಸವ ಸೇರಿದಂತೆ ಎಲ್ಲಾ ಅನ್ನ-ಸಂತರ್ಪಣೆಯ ದಿವಸಗಳಂದು ಮಾತ್ರವಲ್ಲದೆ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಆತ್ಮೀಯವಾಗಿ ತೊಡಗಿಸಿಕೊಂಡಿರುತ್ತದ್ದೆ. ಮಾತ್ರವಲ್ಲದೆ ಸಂದರ್ಭನುಸಾರವಾಗಿ ಶ್ರೀ ಕ್ಷೇತ್ರದ ಅನುಕೂಲಕ್ಕೆ ಅನುಗುಣವಾಗಿ ಸದಾಕಾಲ ತಮ್ಮಿಂದ ಆಗುವ ಸೇವೆಯಲ್ಲಿ ಪಾಲ್ಗೊಂಡಿರುತ್ತದೆ.
ಸಮಿತಿಯ ಅಧ್ಯಕ್ಷರಾದ ದಿಲ್ರಾಜ್ ಆಳ್ವ ಮಾತನಾಡಿ ನಮ್ಮ ಸಮಿತಿಯು ಅನೇಕ ವರ್ಷಗಳಿಂದ ತಾಯಿಯ ಸೇವೆಯಲ್ಲಿ ಪಾಲ್ಗೊಂಡಿದೆ. ಈ ವರ್ಷ ವಿಷೇಷವಾಗಿ ರಜತ ಹಸ್ತ ಸಮರ್ಪಣೆ ಮಾತ್ರವಲ್ಲದೆ ವಿಜಯ ದಶಮಿಯಂದು ಸಮಿತಿಯ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು. ಹಿರಿಯ ಸದಸ್ಯರಾದ ಎ. ಸೀತಾರಾಮ, ಬಿ. ಅಶೋಕ್ ಕುಮಾರ್, ಕೇಶವ, ತುಕಾರಾಮ್, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್, ಕೋಶಾಧಿಕಾರಿ ವಿಶ್ವನಾಥ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ ಮತ್ತಿತರರು ಉಪಸ್ಥಿತರಿದ್ದರು.