ಬೈಂದೂರು : ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಪೂರೈಕೆ ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಇದನ್ನು ವಿರೋಧಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ, ಕಲ್ಲುಕೋರೆ ಮಾಲೀಕರ ಸಂಘ ಹಾಗೂ ಲಾರಿ ಮಾಲೀಕರ ಸಂಘ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಯ ಅವೈಜ್ಞಾನಿಕ ನಿಯಮಗಳಿಂದಾಗಿ ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಬಾರಿ ಮೌಖಿಕ ಮನವಿ, ಲಿಖಿತ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಶಾಸಕ ಗಂಟಿಹೊಳೆ ತಿಳಿಸಿದರು.
ಮನವಿ ಹಂತವನ್ನು ನಾವು ದಾಟಿದ್ದೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದರೆ ಪ್ರತಿಭಟನೆ ಅನಿವಾರ್ಯ. ಜನರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಬೇಕು. ಮುಂದಿನ ಹತ್ತು ದಿನಗಳ ಒಳಗಾಗಿ ಗಣಿ ಇಲಾಖೆಯು ತನ್ನ ಅವೈಜ್ಞಾನಿಕ ನಿಯಮಗಳನ್ನು ಹಿಂಪಡೆಯದೇ ಇದ್ದಲ್ಲಿ ಉಡುಪಿ ಜಿಲ್ಲೆ ಕಂಡುಕೇಳರಿಯದ ರೀತಿಯಲ್ಲಿ ಪ್ರತಿಭಟಿಸುತ್ತೇವೆ ಎಂದು ಇದೇ ವೇಳೆ ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.