Karnataka
ಪೆರ್ಡೂರು ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ
ಕಾಪು : ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ, ಪೆರ್ಡೂರು ಇಲ್ಲಿಗೆ ಇಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ ಶೆಟ್ಟಿ, ಉಪಾಧ್ಯಕ್ಷರಾದ ದೇವು ಪೂಜಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗಳಾದ ಶೋಭಾ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು ಉಪಸ್ಥಿತರಿದ್ದರು.


ಎಲ್ಲೂರಿನಲ್ಲಿ ನಿರ್ಮಾಣಗೊಳ್ಳಲಿರುವ ಗೋ ರುದ್ರಭೂಮಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ
ಕಾಪು : ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3.96 ಎಕ್ರೆ ಜಮೀನಿನಲ್ಲಿ ಗೋಶಾಲೆ ಹಾಗೂ ಗೋ ರುದ್ರಭೂಮಿ ನಿರ್ಮಾಣಗೊಳ್ಳಲಿದ್ದು 50 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದೆ.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮ ಉಪಾಧ್ಯಕ್ಷರಾದ ಉಷಾ ಎನ್, ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಿ ಆಚಾರ್ಯ, ಹರೀಶ್ ಬೆಳ್ಳಿಬೆಟ್ಟು, ದಯಾನಂದ ದೇವಾಡಿಗ, ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸ್ಥಳೀಯ ಪ್ರಮುಖರಾದ ನಾಗೇಶ್ ಭಟ್, ಹರೀಶ್ ಶೆಟ್ಟಿ ಅದಮಾರು, ಸುಕೇಶ್ ಉಳ್ಳೂರು, ಗಣೇಶ್, ಕೃಷ್ಣಾನಂದ ರಾವ್, ಪ್ರೇಮಾನಂದ ಶೆಟ್ಟಿ, ಸಂದೇಶ್ ಪಾದೆಬೆಟ್ಟು, ಪಶು ವೈದ್ಯಾಧಿಕಾರಿಗಳಾದ ಅರುಣ್, ನಿರ್ಮಿತಿ ಕೇಂದ್ರದ ಮುಖೇಶ್, ಎಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ್, ಗ್ರಾಮ ಆಡಳಿತಾಧಿಕಾರಿಗಳಾದ ಸುನಿಲ್ ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಸರ್ಕಾರ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ಟೆಸ್ಟಿಂಗ್ ನಿಂದ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಜನರ ಪ್ರಾಣದ ರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿ. ಎಲ್ಲ ಆಸ್ಪತ್ರೆಯಲ್ಲೂ ಕೊರೊನಾ ಮಾದರಿಯಲ್ಲಿ ಡೆಂಗ್ಯೂಗಾಗಿ ಬೆಡ್ಗಳ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರವನ್ನ ಎಚ್ಚರಿಸುವ ಕೆಲಸ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೇನೆ. ಈ ಸರ್ಕಾರವನ್ನ ಎಚ್ಚರಿಸದೇ ಹೋದರೆ ಯಾವ ಕೆಲಸವನ್ನೂ ಮಾಡೋದಿಲ್ಲ. ನಾಳೆಯಿಂದ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನಿಗಾವಹಿಲಿದ್ದಾರೆ ಎಂದು ತಿಳಿಸಿದ್ದಾರೆ.
ಡೆಂಗ್ಯೂ ಪರೀಕ್ಷೆಯನ್ನ ಉಚಿತವಾಗಿ ಮಾಡುವಂತೆ ಆದೇಶ ಮಾಡಿ. ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರುವುದರಿಂದ ಡೆಂಗ್ಯೂ ಹೆಚ್ಚಾಗುತ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಹೇಗೆ ಕೊರೊನಾ ಟೆಸ್ಟ್ ಉಚಿತ ಮಾಡಿದ್ವಿ. ಆ ರೀತಿ ಡೆಂಗ್ಯೂಗೆ ಟೆಸ್ಟಿಂಗ್ ಮಾಡಿಸಿ. ಅದಕ್ಕೂ ಆಮೇಲೆ ಟ್ಯಾಕ್ಸ್ ಹಾಕಬೇಡಿ. ಡೆಂಗ್ಯೂ ಟೆಸ್ಟಿಂಗ್ಗೆ ಚಿಕಿತ್ಸೆಗೆ 10 ಕೋಟಿ ಆಗಬಹುದಾ? ಅದಕ್ಕೆ ಖರ್ಚು ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡಬೇಕು.
ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತೇಕ ವಾರ್ಡ್ ಮಾಡಿಸಿ. ಅಧಿಕಾರಿಗಳು ಎಸಿ ರೂಮ್ನಿಂದ ಹೊರಬಂದು ಕೆಲಸ ಮಾಡಬೇಕು. ನಗರದಲ್ಲಿ ಸ್ವಚ್ಛತೆ ಇಲ್ಲದಂತೆ ಆಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಉಚಿತ ಟೆಸ್ಟಿಂಗ್, ಚಿಕಿತ್ಸೆ ಮತ್ತು ಔಷಧವನ್ನ ನೀಡಿ. ಇಲ್ಲೇ 14 ರೋಗಿಗಳಿದ್ದು, 4 ಮಕ್ಕಳಿದ್ದಾರೆ. ಮಕ್ಕಳಿಗೂ ಡೆಂಗ್ಯೂ ಹಬ್ಬುತ್ತಿದೆ. ಇದನ್ನ ಸರ್ಕಾರ ಗಮನಿಸಬೇಕು ಎಂದರು.
ಬೆಂಗಳೂರು : ಕೇಂದ್ರ ಸರ್ಕಾರ ಸಹಭಾಗಿತ್ವದ ಇಲಾಖಾ ಯೋಜನೆಗಳ ಅನುಮೋದನಾ ಮಂಡಳಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ದಕ್ಷಿಣ ಭಾರತದ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ಮಂಡಳಿ ಸಭೆಯ ಮುನ್ನ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ಕೇಂದ್ರ ಸರ್ಕಾರದ ಸಹಭಾಗಿತ್ವದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
2024-25ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಘೋಷಣೆಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳು, ಅನುದಾನದ ಮೊತ್ತ, ಕಾರ್ಯಕ್ರಮಗಳ ಅನುಮೋದನೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಪ್ರಮುಖವಾಗಿ ಪೋಷಣ್ ಅಭಿಯಾನ್, ಮಿಷನ್ ಶಕ್ತಿ, ವಾತ್ಸಲ್ಯ ಸೇರಿದಂತೆ ರಾಜ್ಯದಲ್ಲಿ ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತಂತೆ ಚರ್ಚಿಸಲಾಯಿತು.
ಈ ವೇಳೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಜಿ.ಎಸ್.ಪ್ರಕಾಶ್, ಇಲಾಖಾ ನಿರ್ದೇಶಕ ಸಿದ್ದೇಶ್ವರ್, ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ಎಂ. ಆರ್. ರವಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯೆ ಕಾಮತ್ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ. ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.
ಆರ್ಯಭಟ ಪ್ರಶಸ್ತಿ ಪುರಸ್ಕೃತೆ, ಮಧುಮೇಹ ತಜ್ಞೆ ಡಾ। ಶ್ರುತಿ ಬಲ್ಲಾಳ್ರವರನ್ನು, ವೈದ್ಯರ ದಿನಾಚರಣೆಯಂದು ಭಾರತೀಯ ವೈದ್ಯರ ಸಂಘ ಉಡುಪಿ ಕರಾವಳಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಡಾ. ಶ್ರುತಿ ಬಳ್ಳಾಲ್ ಅವರು ಬಿಗ್ ಮೆಡಿಕಲ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರು ತಮ್ಮ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಭಾಗವಾಗಿ ಮಧುಮೇಹ ತಡೆಗಟ್ಟುವಿಕೆ, ಮುಂದೂಡಿಕೆ, ಆರೈಕೆ, ಉತ್ತಮ ಜೀವನ ಶೈಲಿಯ ಬಗ್ಗೆ ಶಾಲಾ-ಕಾಲೇಜು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ 90ಕ್ಕೂ ಅಧಿಕ ಉಚಿತ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಉಡುಪಿಯ ಬಿಗ್ ಮೆಡಿಕಲ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ। ವಿಜಯಲಕ್ಷ್ಮಿ ಬಾಳೇಕುಂದ್ರಿ, ಭಾ.ವೈ.ಸಂಘದ ಅಧ್ಯಕ್ಷೆ ಡಾ। ರಾಜಲಕ್ಷ್ಮಿ, ಡಾ। ಆಮ್ನಾ ಹೆಗ್ಡೆ, ಡಾ. ಅರ್ಚನಾ ಭಕ್ತ, ಡಾ। ಇಂದಿರಾ ಶಾನ್ ಭಾಗ್ ಹಾಗೂ ಡಾ। ಅಕ್ಷತಾ ರಾವ್ ಉಪಸ್ಥಿತರಿದ್ದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂನ್ 27ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 27ರಂದು ರಜೆಯನ್ನು ಘೋಷಿಸಲಾಗಿದೆ.
ಅದೇ ರೀತಿ ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಮದ್ಯದ ಮತ್ತಿನಲ್ಲಿದ್ದಾತನನ್ನು ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ
ಸುಳ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಮದ್ಯದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಎತ್ತಿ ಎಸೆದ ಘಟನೆ ನಡೆದಿದೆ. ಇದರ ವೀಡಿಯೋ ವೈರಲ್ ಆಗಿದೆ.
ಕುಕ್ಕೆ ಶ್ರೀಸುಬ್ರಮಣ್ಯ ದೇವಸ್ಥಾನದ ಆನೆ ಯಶಸ್ವಿನಿಯನ್ನು ಮಾವುತ ನಿಭಾಯಿಸುತ್ತಿದ್ದರು. ಪೊಲೀಸರು ಸೇರಿದಂತೆ ಒಂದಿಬ್ಬರು ಬಳಿಗೆ ಬಂದರೂ ಆನೆ ಏನೂ ಮಾಡಿರಲಿಲ್ಲ. ಆದರೆ ಅದೇ ಸಮಯಕ್ಕೆ ವ್ಯಕ್ತಿಯೊಬ್ಬ ಹಾಯ್ದು ಹೋಗುತ್ತಿದ್ದಂತೆ ಆನೆ ಸೊಂಡಿಲಿನಲ್ಲಿ ಎತ್ತಿ ಎಸೆದಿದೆ. ಆನೆ ಎಸೆಯುತ್ತಿದ್ದಂತೆ ಆತ ಒಂದಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಮಾವುತ “ಮದ್ಯಪಾನ ಮಾಡಿ ಯಾಕೆ ಆನೆಯ ಹತ್ತಿರ ಬರುತ್ತೀರಾ?” ಎಂದು ದಬಾಯಿಸುವುದು ವೀಡಿಯೋದಲ್ಲಿ ಕೇಳಿ ಬಂದಿದೆ.
ಯಶಸ್ವಿನಿ ಆನೆಗೆ ಮದ್ಯದ ವಾಸನೆ ಆಗುವುದಿಲ್ಲವಂತೆ. ಮದ್ಯಪಾನಿಗಳು ಅದರ ಹತ್ತಿರ ಸುಳಿದಾಡಿದರೆ ಎತ್ತಿ ಎಸೆಯುತ್ತದೆಯಂತೆ. ಈ ಹಿಂದೆಯೂ ಇದೇ ರೀತಿ ಮದ್ಯಸೇವನೆ ಮಾಡಿದವನನ್ನು ಆನೆ ಎತ್ತಿ ಎಸೆದಿರುವ ಘಟನೆ ನಡೆದಿತ್ತು.
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮಂಗಳೂರಿನ ಲಾಲ್ಬಾಗ್ನ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಕೊಂಕಣಿ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಭಾಷೆಯ ಮೂಲಕ ವ್ಯವಹಾರ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತೆ ಅಕಾಡಮಿಯನ್ನು ಬಳಸಿಕೊಳ್ಳುವುದು ಮುಖ್ಯ ಎಂದರು. ಅಕಾಡಮಿಗಳು ರಾಜಕೀಯ ಸಂಸ್ಥೆ ಅಲ್ಲ. ಭಾಷಾಭಿವೃದ್ಧಿಯ ಜತೆಗೆ ನಾನಾ ಭಾಷಿಗರ ನಡುವೆ ಸೌಹಾರ್ದ ಸಾಧಿಸುವ ಕೆಲಸ ಆಗಬೇಕು ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ, ಕೊಂಕಣಿ ಭಾಷೆ, ಸಾಹಿತ್ಯ, ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರೊಂದಿಗೆ, ಅಕಾಡಮಿ ಸದಸ್ಯರೊಂದಿಗೆ ಚರ್ಚಿಸಿ, ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಶುಭ ಹಾರೈಸಿದರು.
ಅಕಾಡಮಿಯ ಸದಸ್ಯರಾದ ಡಾ. ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಸಮರ್ಥ ಭಟ್, ಸುನೀಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪೇಸ್, ದಯಾನಂದ ಮಡ್ಕೇಕರ್ ಕಾರ್ಕಳ, ಪ್ರವೀಣ್ ಪಿಂಟೋ ಚಿಕ್ಕಮಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್., ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಸ್ಯರಾದ ಎ.ಸಿ. ವಿನಯರಾಜ್, ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ವಿಕ್ಟರ್ ಮಥಾಯಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಅಕಾಡಮಿ ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು.
ಕೊಂಕಣಿ ಭವನಕ್ಕೆ ಮೊದಲ ಅದ್ಯತೆ
ಮಂಗಳೂರಿನ ಉರ್ವ ಸ್ಟೋರ್ ಬಳಿ ಕೊಂಕಣಿ ಭವನದ ಕೆಲಸಗಳು ಸುಮಾರು 3 ಕೋ.ರೂ. ವೆಚ್ಚದಲ್ಲಿ ನಡೆದಿದ್ದು, ಇದೀಗ ಅರ್ಧಕ್ಕೆ ಸ್ಥಗಿತಗೊಂಡಿದೆ. ಕಟ್ಟಡವನ್ನು ಪೂರ್ಣಗೊಳಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಒಳಾಂಗಣ ವಿನ್ಯಾಸ, ಪೀಠೋಪಕರಣ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುದ್ಧೀಕರಣ ಮೊದಲಾದ ಕಾಮಗಾರಿಗಳಿಗೆ ಇನ್ನೂ 3 ಕೋ.ರೂ. ಅಗತ್ಯವಿದೆ. ಅಗತ್ಯ ಅನುದಾನವನ್ನು ಪಡೆದು ಈ ವರ್ಷದೊಳಗೆ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಹೇಳಿದರು.