Karkala
ಉಡುಪಿ : ಅಂಧ ಹಾಗೂ ಮಾನಸಿಕ ಅಸ್ವಸ್ಥ ಯುವಕನಿಗೆ ಕಾರ್ಕಳ ಬೈಲೂರಿನ ರಂಗನಪಲ್ಕೆಯ ಹೊಸಬೆಳಕು ಆಶ್ರಮ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.

ಯುವಕ ರಾಜೇಶ್ (27) ಹೊರ ರಾಜ್ಯದವನಾಗಿದ್ದು, ದೃಷ್ಟಿ ಹೀನನಾಗಿದ್ದು ಜೊತೆಗೆ ಮಾನಸಿಕ ಅಸ್ವಸ್ಥತೆಗೆ ಜಾರಿದ್ದ. ಈತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ.
ಸಂಬಂಧಿಕರು ಪತ್ತೆಯಾಗದ ಕಾರಣ ಯುವಕ ಬೀದಿ ಪಾಲಾಗಿ ಬದುಕು ಸಂಕಷ್ಟಕ್ಕೀಡಾಗಲಿದೆ ಎಂದು ಅರಿತ ಸಮಾಜ ಸೇವಕ ವಿಶು ಶೆಟ್ಟಿ ಅವರು, ಹೊಸಬೆಳಕು ಆಶ್ರಮದ ಮುಖ್ಯಸ್ಥೆ ತನುಲಾ ಅವರನ್ನು ಸಂಪರ್ಕಿಸಿ, ಯುವಕನಿಗೆ ಆಶ್ರಯ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಯುವಕನನ್ನು ಆಂಬುಲೆನ್ಸ್ ಮೂಲಕ ಆಶ್ರಮಕ್ಕೆ ಕರೆದೊಯ್ದು ದಾಖಲಿಸಿದರು.
ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಉದ್ಯಾವರ ರಾಮದಾಸ್ ಪಾಲನ್ ನೆರವಾದರು.
ಯುವಕನ ವಾರೀಸುದಾರರು ಇದ್ದಲ್ಲಿ ಹೊಸಬೆಳಕು ಆಶ್ರಮ (ದೂ.ಸಂಖ್ಯೆ 6364777100)ವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
ದಕ್ಷಿಣ ಭಾರತ ವಿಭಾಗ ಕ್ರೀಡಾಕೂಟ : ದ್ವಿತೀಯ ಸ್ಥಾನ ಪಡೆದ ಪೆರ್ವಾಜೆ ಶಾಲಾ ವಿದ್ಯಾರ್ಥಿಗಳು
ಕಾರ್ಕಳ : ಎಚ್ಸಿಎಲ್ ಫೌಂಡೇಶನ್ ವತಿಯಿಂದ ಚೆನ್ನೈಯಲ್ಲಿ ನಡೆದ ದಕ್ಷಿಣ ಭಾರತ ವಿಭಾಗದ ಕ್ರೀಡಾಕೂಟದಲ್ಲಿ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಶಟ್ಲ್ ಬ್ಯಾಡ್ಮಿಂಟನಲ್ಲಿ ಜೋಡುರಸ್ತೆ ಹರೀಶ್ ಮತ್ತು ಮಮತಾರವರ ಪುತ್ರ ಧನುಷ್, ಟೇಬಲ್ ಟೆನ್ನಿಸ್ನಲ್ಲಿ ಕಾಳಿಕಾಂಬಾ ನಿವಾಸಿ ಸುಧೀರ್ ರಾವ್ ಮತ್ತು ಜ್ಯೋತಿ ಇವರ ಸುಪುತ್ರ ಅಮೋಘ್, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ದಕ್ಷಿಣ ಭಾರತ ತಂಡದ ವ್ಯವಸ್ಥಾಪಕರಾಗಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಕಾರ್ಯನಿರ್ವಹಿಸಿದ್ದರು.
ಕಾರ್ಕಳ : ಯುವಕನೋರ್ವ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರೆಂಜಾಳ ಗ್ರಾಮದ ಸರಕಾರಿ ಶಾಲೆಯ ಬಳಿಯ ಕಲ್ಕದಬೆಟ್ಟು ಹಾಡಿಯಲ್ಲಿ ನಡೆದಿದೆ

ಮೃತ ದುರ್ದೈವಿಯನ್ನು ರೆಂಜಾಳ ಗ್ರಾಮದ ನಿವಾಸಿ 26 ವರ್ಷ ಪ್ರಾಯದ ಗಣೇಶ್ ಎಂದು ಗುರುತಿಸಲಾಗಿದೆ.
ಗಣೇಶ್ ಜು.27ರಂದು ಸಂಜೆ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಐ ವರ್ಗಾವಣೆ ಆದೇಶ ಎರಡೇ ವಾರದಲ್ಲಿ ರದ್ದಾಗಿದೆ.
ಎಸ್ಐ ಆಗಿದ್ದ ದಿಲೀಪ್ ಅವರು ವರ್ಗಾವಣೆ ಹೊಂದಿ ಆ ಜಾಗಕ್ಕೆ ನಂಜಾ ನಾಯ್ಕ್ ನೇಮಕಗೊಂಡು ಕರ್ತವ್ಯಕ್ಕೂ ಹಾಜರಾಗಿದ್ದರು. ದಿಲೀಪ್ ಅವರು 2023ರ ಜುಲೈಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಎಸ್ಐ ಆಗಿ ಕರ್ತವ್ಯ ವಹಿಸಿದ್ದರು. ಆದರೆ ದಿಲೀಪ್ ಅವರು ಒಂದೇ ವರ್ಷದಲ್ಲಿ ವರ್ಗಾವಣೆ ಹೊಂದಿದ್ದರು. ಆದರೆ, ಸರಕಾರದ ನಿಯಮದಂತೆ ಪೊಲೀಸ್ ಇಲಾಖೆಯಲ್ಲಿ ಎರಡು ವರ್ಷ ಸೇವೆ ಕಡ್ಡಾಯವಾಗಿತ್ತು. ಹಾಗಾಗಿ ತನ್ನ ವರ್ಗಾವಣೆಯನ್ನು ಪ್ರಶ್ನಿಸಿ ದಿಲೀಪ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಎರಡು ವರ್ಷಗಳ ಸೇವಾವಧಿ ಪೂರ್ಣವಾಗದೆ ದಿಲೀಪ್ ಅವರನ್ನು ವರ್ಗಾವಣೆ ಮಾಡಬಾರದಾಗಿ ಆದೇಶಿಸಿದರು.
ನ್ಯಾಯಾಲಯದ ಆದೇಶ ಪುರಸ್ಕರಿಸಿದ ಪೊಲೀಸ್ ಐಜಿ, ದಿಲೀಪ್ ಅವರನ್ನು ಮತ್ತೆ ಕಾರ್ಕಳಕ್ಕೆ ನಿಯೋಜಿಸಿ, ನಂಜಾ ನಾಯ್ಕ ಅವರನ್ನು ಐಜಿ ಕಚೇರಿಗೆ ಕರೆಸಿಕೊಂಡಿರುತ್ತಾರೆ.
ಜು. 12ರಂದು ಗ್ರಾಮಾಂತರ ಠಾಣೆ ಎಸ್ಐ ಆಗಿ ಅಧಿಕಾರ ವಹಿಸಿದ ನಂಜಾ ನಾಯ್ಕ ಅವರು ಜು. 26ರವರೆಗೆ ಮಾತ್ರ ಅಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಕಾರ್ಕಳದ ಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್; ಇಬ್ಬರಿಗೆ ಗಂಭೀರ ಗಾಯ
ಉಡುಪಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಆನೆಕೆರೆ ಸಮೀಪದ ಕೃಷ್ಣಾ ಅಪಾರ್ಟ್ಮೆಂಟ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಅಡುಗೆ ಮನೆಯ ಹೊರಗಡೆಯ ಲಾಂಜ್ನಲ್ಲಿ ಇರಿಸಲಾಗಿದ್ದ ಹೊಸ ಗ್ಯಾಸ್ ಸಿಲಿಂಡರ್ ಏಕಾಎಕಿ ಸ್ಪೋಟಗೊಂಡಿದ್ದು, ಇದರ ಪರಿಣಾಮ ಅಡುಗೆ ಮನೆ ಛಿದ್ರವಾಗಿದ್ದು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಸ್ಫೋಟದ ತೀವ್ರತೆಗೆ ಅಪಾರ್ಟ್ಮೆಂಟ್ನ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿ ಶಾಮಕದಳದ ಸಿಬ್ಬಂದಿ ಧಾವಿಸಿ ಕಟ್ಟಡಕ್ಕೆ ವ್ಯಾಪಿಸಿದ್ದ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿಗಳಾದ ಅಚ್ಯುತ್ ಕರ್ಕೇರಾ, ಸುರೇಶ್ ಕುಮಾರ್, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಭಾಗವಹಿಸಿದ್ದರು.
ಗಾಯಗೊಂಡ ಇಬ್ಬರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರ್ಕಳ : ಕುಕ್ಕುಂದೂರು ಗ್ರಾಮ ಪಂಚಾಯತ್ ವಾಪ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯ ಬಳಿ ಹೊಸದಾಗಿ ನಿರ್ಮಿಸಿರುವ ಮನೆಯೊಂದರಲ್ಲಿ ಜು. 27 ರ ಮುಂಜಾನೆ 3-35ಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ರೂ. 2 ಲಕ್ಷ ನಷ್ಟ ಸಂಭವಿಸಿದೆ.
ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತಕ್ಷಣ ದೌಡಾಯಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಲು ಯಶಸ್ವಿಯಾಗಿದ್ದು, ಹೆಚ್ಚಿನ ಪ್ರಮಾಣದ ಅನಾಹುತ ತಪ್ಪಿಸಿದೆ.
ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಅಚ್ಚುತ ಕರ್ಕೇರ, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಾರ್ಕಳ : ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಜುಲೈ 24ರಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿ “ಕಾನೂನು ಅರಿವು” ಮಾಹಿತಿ ಕಾರ್ಯಕ್ರಮ ‘ಸಪ್ತಸ್ವರ’ ವೇದಿಕೆಯಲ್ಲಿ ಜರುಗಿತು.
ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಸುಬ್ರಹ್ಮಣ್ಯ ಎಚ್, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಇವರು ‘ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ’ ಎಂದರು.
ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಶ್ರೀ ಸಂತೋಷ್ರವರು ಮಾತನಾಡಿ’ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ’ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ರವರು ‘ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಶ್ರೀಯುತ ರವೀಂದ್ರ ಹಾಗೂ ಘನಶ್ಯಾಮ್ರವರು ಉಪಸ್ಥಿತರಿದ್ದರು.
ಕಾನೂನು ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಬೋಧಕೇತರ ಸಿಬ್ಬಂದಿ ವರ್ಗದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕನ್ನಡ ಭಾಷಾ ಉಪನ್ಯಾಸಕರಾದ ಶಿವಕುಮಾರರವರು ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಉಮೇಶ್ರವರು ಧನ್ಯವಾದ ಸಮರ್ಪಿಸಿದರು.
ಪರಶುರಾಮ ಥೀಮ್ ಪಾರ್ಕ್ ಅಕ್ರಮ ಪ್ರಕರಣ – ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅಮಾನತು
ಉಡುಪಿ : ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ಅನುಷ್ಠಾನ ಅಧಿಕಾರಿಯಾಗಿ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆ ಇವರು ನಿರ್ಮಿಸಿದ್ದು ಸದ್ರಿ ಕಾಮಗಾರಿಗೆ ಅಂದಾಜು ಮೊತ್ತ ರೂ. 1105 ಲಕ್ಷಕ್ಕೆ ಆಡಳಿತ್ಮಾತಕ ಮಂಜೂರಾತಿಗೊಂಡಿದೆ. ಈ ಪೈಕಿ ರೂ.672.ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿ, ಸದ್ರಿ ಕಾಮಗಾರಿ ಪೂರ್ಣಗೊಳಿಸದೇ, ಸಂಬಂದಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿರುವುದರಿಂದ ನಿರ್ಮಾಣದ ಗುಣಮಟ್ಟದ ಬಗ್ಗೆ ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ, ಪರವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ನಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗದಲ್ಲಿ ತನಿಖಾ ಹಂತದಲ್ಲಿದೆ.
ಉಚ್ಚನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಾಸಕ ಸುನೀಲ್ ಕುಮಾರ್ ಅವರಿಂದ ಹಿಂದೂ ಭಾವನೆಗಳಿಗೆ ದಕ್ಕೆ: ಎಸ್ಐಟಿ ತನಿಖೆಗೆ ಒತ್ತಾಯಿಸಿ ಸಿಎಂಗೆ ಮನವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕೆ
ಬೆಂಗಳೂರು : ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಹಿಂದೂಗಳ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ. ಸುನೀಲ್ ಕುಮಾರ್ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಸುಳ್ಳನ್ನ ನೂರು ಬಾರಿ ಹೇಳಿ ನಿಜ ಮಾಡುವ ಕಲೆ ಸುನೀಲ್ ಕುಮಾರ್ ಅವರಿಗಿದೆ. ನಾನು ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಿರುವೆ, ನನಗೂ ಗೊತ್ತಿದೆ ಎಷ್ಟು ಸಮಯ ಬೇಕಾಗುತ್ತದೆ ಎಂದು. ಆದರೆ ಕೇವಲ 3 ತಿಂಗಳಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸಲಾಗಿದೆ. ಇಂಥ ಪ್ರತಿಮೆಗಳನ್ನು ನಿರ್ಮಿಸುವಾಗ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಚುನಾವಣೆಗಾಗಿ ಕೇವಲ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಿದ್ದು ಕೇಳಿ ಆಶ್ಚರ್ಯ ಉಂಟಾಯಿತು ಎಂದರು.
ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯುವ ಬಿಜೆಪಿಗರಿಗೆ ಕರಾವಳಿ ಜನತೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಿದೆ. ರಾಮಮಂದಿರ ನಿರ್ಮಾಣಗೊಂಡಿರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತಿದ್ದು, ಕರಾವಳಿ ಜನರು ಕೂಡ ಬಿಜೆಪಿಗೆ ಪಾಠ ಕಲಿಸಬೇಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅಧಿವೇಶನದಲ್ಲಿ ಸುನೀಲ್ ಕುಮಾರ್ ಮುಖ್ಯಮಂತ್ರಿಗಳ ವಿರುದ್ಧ ಟೀಕಾ ಪ್ರಹಾರ ಮಾಡುವುದನ್ನು ನೋಡಿದರೆ ನಾನೊಬ್ಬ ಸಂಭಾವಿತ ಎಂದು ತೋರಿಸಿಕೊಳ್ಳುತ್ತಾರೆ. ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನರ ದಿಕ್ಕನ್ನು ತಪ್ಪಿಸುತ್ತಿರುವ ಸುನೀಲ್ ಕುಮಾರ್ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದರು.
ಈ ವೇಳೆ ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ ಮುನಿಯಾಲ್, ಮಿಥುನ್ ರೈ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಧೀರ್ ಕುಮಾರ್ ಮೊರಳ್ಳಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹರೀಶ್ ಕುಮಾರ್, ಕಿಶನ್ ಹೆಗ್ಡೆ, ಕಿರಣ್ ಹೆಗ್ಡೆ, ರಮೇಶ್ ಕಾಂಚನ್, ಕೃಪಾ ಆಳ್ವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ ಹಾಗೂ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ನಿಯೋಗದಲ್ಲಿ ಇದ್ದರು.