ಬೈಂದೂರು : ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಇಂದು ಬೈಂದೂರು ತಾಲೂಕು ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಹಾಗೂ ಹಾಸ್ಟೆಲ್ಗಳ ನಿರ್ವಹಣೆ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆಗಳನ್ನು ನೀಡಿದರು.
2024-25ನೇ ಸಾಲಿಗೆ ಹಾಸ್ಟೆಲ್ಗಳಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿದಿದ್ದು ವಿದ್ಯಾರ್ಥಿಗಳ ಊಟೋಪಚಾರಕ್ಕೆ ಮಾಸಿಕ ರೇಷನ್, ತರಕಾರಿ ಹಾಗೂ ಇನ್ನಿತರ ಆಹಾರ ಸಾಮಾಗ್ರಿಗಳು ಕೊರತೆಯಾಗದಂತೆ ನೋಡಿಕೊಳ್ಳುವುದು, ವಾರ್ಡನ್ಗಳು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸೇರಿದಂತೆ ವಿದ್ಯಾರ್ಥಿಗಳ ವಾಸ್ತವ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಉಡುಪಿ ಜಿಲ್ಲೆಯ ಹಾಸ್ಟೆಲ್ಗಳಲ್ಲಿ ವಾರ್ಡನ್ಗಳ ತೀವ್ರ ಕೊರತೆ ಇದ್ದು 5-6 ಹಾಸ್ಟೆಲ್ಗಳಿಗೆ ಒಬ್ಬರು ವಾರ್ಡನ್ ಎಂಬ ಪರಿಸ್ಥಿತಿ ಇದೆ. ಅಲ್ಲದೆ ಬೈಂದೂರು ಹಾಗೂ ಕುಂದಾಪುರದಲ್ಲಿ ಪೋಸ್ಟ್ ಮೆಟ್ರಿಕ್ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ತೀವ್ರ ಬೇಡಿಕೆ ಇದ್ದು ಹಾಸ್ಟೆಲ್ಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ತಿಳಿಸಲಾಗಿದೆ, ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಹಾಗೂ ಸದನದಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಹಾಗಾಗಿ ಕ್ಷೇತ್ರದ ಎರಡೂ ತಾಲೂಕಿನಲ್ಲಿ ಇರುವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ವಾರ್ಡನ್ ಹುದ್ದೆ ಖಾಲಿ ಇರುವ ಕಡೆ ವಾರ್ಡನ್ಗಳನ್ನು ಭರ್ತಿ ಮಾಡಲು ಹಾಗೂ ಬೈಂದೂರು ಮತ್ತು ಕುಂದಾಪುರಕ್ಕೆ ಹೊಸದಾಗಿ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಸರಕಾರ ಕ್ರಮ ವಹಿಸಬೇಕು, ಹಾಗಾಗಿ ಅಧಿಕಾರಿಗಳು ತಮ್ಮ ಹಂತದಲ್ಲಿ ಸೂಕ್ತ ಪ್ರಸ್ತಾವನೆಗಳನ್ನು ಸರಕಾರಕ್ಕೆ ಕಳುಹಿಸಲು ಸೂಚನೆ ನೀಡಿದರು. ವಿಧಾನ ಸಭೆಯ ಹಿಂದುಳಿದ ವರ್ಗಗಳ ಸಮಿತಿಯಲ್ಲಿ ಸದಸ್ಯನ ನೆಲೆಯಲ್ಲಿ ಇಲಾಖೆಯ ಸಮಸ್ಯೆಗಳನ್ನು ಇಲಾಖಾ ಮುಖ್ಯಸ್ಥರ ಗಮನಕ್ಕೂ ತರಲು ಪ್ರಯತ್ನಿಸುವುದಾಗಿ ಗುರುರಾಜ್ ಗಂಟಿಹೊಳೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಹಾಗೂ ಕ್ಷೇತ್ರ ವ್ಯಾಪ್ತಿಯ ವಿವಿಧ ವಿದ್ಯಾರ್ಥಿ ನಿಲಯಗಳ ವಾರ್ಡನ್ಗಳು ಉಪಸ್ಥಿತರಿದ್ದರು.