ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು ಬೈಂದೂರಿಗೆ ವಿಗ್ರಹವನ್ನು ತರಲಾಯಿತು.
ಬೈಂದೂರು ಕಂಬದಕೋಣೆ ಜಂಕ್ಷನ್ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ನೂರಾರು ಜನ ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯ್ತು. ಮೂರ್ತಿಯ ಫಿನಿಶಿಂಗ್ ಮತ್ತು ಪೀಠದ ಕೆತ್ತನೆ ಇನ್ನುಮುಂದೆ ನಡೆಯಲಿದೆ ಎಂದು ಬೋಳಂಬಳ್ಳಿ ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈಗಾಗಲೇ ಕಾರ್ಕಳ, ವೇಣೂರು, ಧರ್ಮಸ್ಥಳದಲ್ಲಿ ಬಾಹುಬಲಿಯ ವಿಗ್ರಹ ಸ್ಥಾಪನೆ ಮಾಡಲಾಗಿದ್ದು ಪ್ರತೀ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ದೇಶದ ಅತೀ ಎತ್ತರದ ಗೊಮ್ಮಟೇಶ್ವನ ವಿಗ್ರಹ ಹಾಸನದ ಶ್ರವಣಬೆಳಗೊಳದಲ್ಲಿದೆ. ಇದೀಗ ಬೈಂದೂರಿನ ಬೋಳಂಬಳ್ಳಿಯಲ್ಲಿ ಬಾಹುಬಲಿಯ ನೂತನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.