ಕಾರ್ಕಳ : ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
Hebri
ಅಸ್ವಸ್ಥಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೇ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಸರಕಾರಿ ಬಸ್ ಚಾಲಕ ನಿರ್ವಾಹಕರಿಗೆ ಮೆಚ್ಚುಗೆ
ಹೆಬ್ರಿ : ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಅಸ್ವಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸಂಭವಿಸಿದೆ.
ಸರ್ಕಾರಿ ಬಸ್ ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿತ್ತು. 19ರ ಹರೆಯದ ಸುರಕ್ಷಾ ಎಂಬವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಅವರನ್ನು ದಾಖಲು ಮಾಡಲಾಗಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದಲ್ಲಿ ಸುಧಾರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕಳುಹಿಸಲಾಗಿದೆ.
ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ ಯಾರ ಸಹಾಯವೂ ಸಿಗದಿದ್ದರೂ, ಯುವತಿಯೊಬ್ಬರು ಒಬ್ಬಳು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿದ್ದಾಳೆ. ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ. ಹೆಬ್ರಿಯ ಪೊಲೀಸರು, ಸಾರ್ವಜನಿಕರು ಈ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಹೊಳೆಯಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ; ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ
ಹೆಬ್ರಿ : ಹೊಳೆಯಲ್ಲಿ ಈಜಿಕೊಂಡು ಹೋಗಿ ಗ್ರಾಮಸ್ಥರ ವಿದ್ಯುತ್ ಸಮಸ್ಯೆ ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಅವರಿಗೆ, ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿನಿಂದ ಕರೆ ಬಂದಿತ್ತು. ತಮ್ಮ ಏರಿಯಾದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಆದರೆ ಅಲ್ಲಿಗೆ ಹೋಗಬೇಕಿದ್ದರೆ ಹೊಳೆ ದಾಟಲೇಬೇಕುತ್ತು. ಊರವರ ಸಮಸ್ಯೆ ಅರಿತ ಸಿಬ್ಬಂದಿ ಪ್ರಮೋದ್ ಈಜಿಕೊಂಡೇ ಹೊಳೆ ದಾಟಿ ಹೋಗಿ ದುರಸ್ತಿ ಕಾರ್ಯ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಮೋದ್ ನಡೆಗೆ ಸ್ಥಳೀಯರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಹೊಳೆ ದಾಟಿ ಬಂದ ಸಿಬ್ಬಂದಿಯ ವೀಡಿಯೋ ಸೆರೆ ಹಿಡಿದ ಸ್ಥಳೀಯರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಾರ್ಕಳ : ಹೊಂದಾಣಿಕೆ ರಾಜಕಾರಣವನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ, ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದರು.
ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ದಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂದಾಳು ಮುನಿಯಾಲು ಉದಯ ಕುಮಾರ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ, ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ..!!
ಹೆಬ್ರಿ : ಯಾವುದೇ ಪ್ರಶಸ್ತಿಯ ಹಿಂದೆ ಹೋಗಬಾರದು. ನಮ್ಮಷ್ಟಕ್ಕೆ ನಾವೇ ಪ್ರಾಮಾಣಿಕವಾಗಿ ಉತ್ತಮ ಕೆಲಸಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಹೆಬ್ರಿಯ ಪ್ರತಿಷ್ಠಿತ ಚಾಣಕ್ಯ ಸಂಸ್ಥೆ ತೆರೆಮರೆಯ ಸಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಅಂಕ ಗಳಿಕೆಯ ತರಬೇತಿಯೊಂದೇ ಶಿಕ್ಷಣವಾಗದೆ ಬದುಕು ಶಿಕ್ಷಣ ನೀಡುವ ಮತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವನ್ನು ಶಿಕ್ಷಣದ ಜೊತೆ ಮಾಡಿದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಹೆಸರಾಂತ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದರ ಜತೆಗೆ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣವಾಗಿದ್ದಾರೆ ಎಂದು ಚಾರ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸುನೀಲ್ ಕುಮಾರ್ ಹೇಳಿದರು.
ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ ಎಂದು ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಪುತ್ರ ಸನತ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ ಹಾಗು ಜೇಸಿಐ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಚಾರ ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ವಿ.ಕೆ. ಮನೋಹರ್, ನೇತಾಜಿ ಫ್ರೆಂಡ್ಸ್ ಕ್ಲಬ್ಮುದ್ರಾಡಿ ಇದರ ಅಧ್ಯಕ್ಷ ಸಂತೋಷ್ ಪೂಜಾರಿ ಬಲ್ಲಾಡಿ, ಜೇಸಿಐ ಅಧ್ಯಕ್ಷೆ ರಕ್ಷಿತಾ ಪುಟ್ಟಣ್ಣ ಭಟ್, ಪೂರ್ವಾಧ್ಯಕ್ಷ ಪ್ರಶಾಂತ್ ಪೈ, ಜೇಸಿರೆಟ್ ಪೂರ್ವಾದ್ಯಕ್ಷೆ ಅನಿತಾ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಹೆಬ್ರಿ : ಶತಾಯುಷಿ ಮುದ್ರಾಡಿಯ ನಿವಾಸಿ ಕಜ್ಕೆ ಮಂಜುನಾಥ್ ಕಾಮತ್ (102) ನಿಧನ ಹೊಂದಿದರು.
ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮುದ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ನಾಡ್ಪಾಲು ಗ್ರಾಮದ ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಮುದ್ರಾಡಿ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಮುದ್ರಾಡಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಅಧ್ಯಕ್ಷರಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು 4 ಪುತ್ರರು, 5 ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ : ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತ ಪ್ರದೇಶಗಳಿಗೆ ಜಿಎಸ್ಐ (ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ) ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿದೆ.
ಈ ತಂಡವು ಬೈಂದೂರು ತಾಲೂಕಿನ ಕೊಲ್ಲೂರು, ಶಿರೂರು, ಸೋಮೇಶ್ವರ, ಹಾಲಾಡಿ, ಹೆಬ್ರಿ ತಾಲೂಕಿನ ಕನ್ಯಾನ, ಕಾರ್ಕಳ ತಾಲೂಕಿನ ಮಾಳ ಪ್ರದೇಶಕ್ಕೆ ಭೇಟಿ ನೀಡಿದರು. ಹೆದ್ದಾರಿ ಅಭಿವೃದ್ಧಿಗಾಗಿ ಗುಡ್ಡವನ್ನು ಅಗೆದ ರೀತಿಯ ಬಗ್ಗೆ ಪರಿಶೀಲನೆ ನಡೆಸಿತು. ಮಾಳದಲ್ಲಿ ಮನೆಯ ಸಮೀಪ ಗುಡ್ಡ ಜರಿದಿರುವ ಬಗ್ಗೆ ಅಧ್ಯಯನ ನಡೆಸಿತು.
ಜಿಎಸ್ಐ ಬೆಂಗಳೂರು ಪ್ರಾದೇಶಿಕ ಕಚೇರಿ ಭೂ ವಿಜ್ಞಾನಿಗಳಾದ ಸೆಂಥಿಲ್ಕುಮಾರ್, ಸುವೇಶ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್ ಯು. ಮತ್ತು ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ತಂಡದಲ್ಲಿದ್ದರು.
ಉಡುಪಿ : ನಿವೃತ್ತ ಪೊಲೀಸ್ ನಿರೀಕ್ಷಕ ಎಂ.ಜಯಂತ್(61) ಅವರು ಹೃದಯಾಘಾತದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು 1992ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಮಣಿಪಾಲ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ವಿವಿಧ ಹಂತಗಳಲ್ಲಿ ಭಡ್ತಿ ಹೊಂದಿ ಉಡುಪಿ ಮಹಿಳಾ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ನಿವೃತ್ತರಾಗಿದ್ದರು.
ಇವರು ಕೊಲ್ಲೂರು, ಸಂಚಾರಿ ಠಾಣೆ, ಶಿರ್ವ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಹೆಬ್ರಿ ಮೂಲದ ಇವರು ಸಾಸ್ತಾನದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹೆಬ್ರಿ : ಅರ್ಥ್ ಮೂವರ್ಸ್ ಯೂನಿಯನ್ ಅಸೋಸಿಯೇಷನ್ ಹೆಬ್ರಿ ಇದರ ನೂತನ ಕಚೇರಿ ಉದ್ಘಾಟನಾ ಸಮಾರಂಭ ಕನ್ಯಾನದ ಸರಸ್ವತಿ ಹೋಟೆಲ್ ಬಳಿ ಶುಕ್ರವಾರದಂದು ಜರುಗಿತು.
ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧಿಶ್ವರ್ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಥ್ ಮೂವರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ಶ್ರೀಧರ್, ರೈತ ಸೇವಾ ಗ್ರಾಮೋದ್ಯೋಗದ ಲಕ್ಷ್ಮೀನಾರಾಯಣ ನಾಯಕ್, ಅಸೋಸಿಯೇಷನ್ ಕಾರ್ಯದರ್ಶಿ ಸನತ್ ಕುಮಾರ್ ಶೆಟ್ಟಿ, ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಸಿಎಂ ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
