ಉಡುಪಿ : ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ನೆರವಾಗಬೇಕು ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ 42,613 ಮಂದಿ ನೋಂದಣಿಗೊಂಡಿದ್ದು, ಅಕ್ಟೋಬರ್ ತನಕ 39,893 ಮಹಿಳೆಯರ ಖಾತೆಗೆ 7.86 ಕೋಟಿ ರೂ. ಜಮೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಇವರಲ್ಲಿ 11ಮಂದಿಯ ಇಕೆವೈಸಿ ಸಮಸ್ಯೆ ಇದೆ. ಜಿಎಸ್ಟಿ ಪಾವತಿದಾರರ ನೆಲೆಯಲ್ಲಿ 1,402 ಮಹಿಳೆಯರಿಗೆ ಗೃಹಲಕ್ಷ್ಮಿ ದೊರೆಯುತ್ತಿಲ್ಲ. 760 ಎನ್ಪಿಸಿ ಸಮಸ್ಯೆಯಲ್ಲಿ 275 ಮಂದಿಯ ಪಟ್ಟಿ ಬಂದಿದೆ ಎಂದು ಇಲಾಖಾಧಿಕಾರಿ ತಿಳಿಸಿದರು.
ಬ್ಯಾಂಕುಗಳಲ್ಲಿ ಗ್ರಾಹಕರ ವ್ಯವಹಾರಕ್ಕೆ ಭಾಷಾ ಸಮಸ್ಯೆಯಾಗುತ್ತಿದೆ. ಜನರಿಗೆ ಪಂಚ ಗ್ಯಾರಂಟಿ ಮಾಹಿತಿ ಹಾಗೂ ಸೌಲಭ್ಯ ಒದಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತರು ಪಕ್ಷ ಭೇದ ಮಾಡಬಾರದು. ಅದೇ ರೀತಿ ಅಸಡ್ಡೆಯೂ ಸಲ್ಲದು. ಜನರು ಪಡಿತರವನ್ನು ಹತ್ತಿರದಲ್ಲೇ ಪಡೆದುಕೊಳ್ಳಲು ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ನ್ಯಾಯ ಬೆಲೆ ಅಂಗಡಿಗಳಿಗೆ ಪಂಚ ಗ್ಯಾರಂಟಿ ಮಾಹಿತಿಯ ಕರಪತ್ರ, ಬ್ಯಾನರ್, ಸ್ಟಿಕ್ಕರ್ ನೀಡಲು ಆಹಾರ ಇಲಾಖಾಧಿಕಾರಿಗೆ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಸೂಚಿಸಿದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಗುರುರಾಜ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಾ ಉಪಸ್ಥಿತರಿದ್ದರು.