ಮಲ್ಪೆ : ಮಲ್ಪೆಯ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಪಕ್ಕದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟಿನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡು, ಬೋಟು ಸಂಪೂರ್ಣ ಸುಟ್ಟು ಹೋದ ಘಟನೆ ಸಂಭವಿಸಿದೆ.
ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಎಂಬ ಸಣ್ಣಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟದ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು.
ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದರೂ, ಅದೃಷ್ಟವಶಾತ್ ಯಾವುದೇ ಬೋಟಿಗೆ ಬೆಂಕಿ ತಗಲಲಿಲ್ಲ.
ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಇದ್ದು, ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.