ಉಡುಪಿ : ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತಕ್ಕೆ ಸಾಮಾನ್ಯ ದರ 2,300 ರೂ. ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ದರ 2,320 ರೂ.ಗಳನ್ನು ನಿಗದಿಪಡಿಸಿದೆ.
ಜಿಲ್ಲೆಯ ರೈತರಿಂದ ಭತ್ತವನ್ನು ನಿಯಮಾನುಸಾರ ಖರೀದಿಸಲು ನೋಂದಣಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಭತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಿಗಮವನ್ನು ಏಜೆನ್ಸಿಯಾಗಿ ನೇಮಿಸಲಾಗಿದೆ. ಖರೀದಿ ಏಜೆನ್ಸಿಯಿಂದ ನವೆಂಬರ್ 15ರಿಂದ ಡಿಸೆಂಬರ್ 31ರ ವರೆಗೆ ರೈತರಿಂದ ಭತ್ತದ ನೋಂದಣಿ ಪ್ರಕ್ರಿಯೆ ಹಾಗೂ 2025ರ ಜನವರಿ 1ರಿಂದ ಮಾರ್ಚ್ 31ರೊಳಗೆ ಭತ್ತ ಖರೀದಿಸುವ ಪ್ರಕ್ರಿಯೆ ನಡೆಯಲಿದೆ.
ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿಕೊಂಡು, ಅನಂತರ ತಂತ್ರಾಂಶದ ಗುರುತಿನ ಸಂಖ್ಯೆ, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ನೋಂದಣಿ ಕೇಂದ್ರದಲ್ಲಿ ನೋಂದಣಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.