ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳಾ ಪ್ರಯಾಣಿಕರನ್ನು ತನ್ನ ಸಮಯಪ್ರಜ್ಞೆಯಿಂದ ತಕ್ಷಣ ರಕ್ಷಿಸಿದ RPF ಮಹಿಳಾ ಸಿಬ್ಬಂದಿ ಅಪರ್ಣಾರವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ರವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು. ತುರ್ತು ಸಂದರ್ಭದಲ್ಲಿ ಸಮಯೋಚಿತ ಕಾರ್ಯದ ಮೂಲಕ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಪರ್ಣಾರವರಿಗೆ ಅಭಿನಂದನೆ ಸಲ್ಲಿಸಿದರು.
Emergency Response
ಕಾರು ಹಾಗೂ ರಿಕ್ಷಾ ಮುಖಾಮುಖಿ ಡಿಕ್ಕಿ : ಅಪಘಾತದಲ್ಲಿ ರಿಕ್ಷಾ ಚಾಲಕ ಮತ್ತು ಪ್ರಯಾಣಿಕನಿಗೆ ಗಾಯ..!
ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮಸೀದಿ ಜಂಕ್ಷನ್ ಬಳಿ ಕಾರು ಮತ್ತು ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ರಿಕ್ಷಾ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ರಿಕ್ಷಾ ಚಾಲಕ ಪೂರ್ಣೇಶ್ ಮತ್ತು ಪ್ರಯಾಣಿಕರಾದ ನೂರ್ ಸಾಹೇಬ್ ಎಂದು ಗುರುತಿಸಲಾಗಿದೆ.
ಕೇರಳದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಕಾಪು ಪೇಟೆಯಿಂದ ಪೊಲಿಪು ಕಡೆಗೆ ತೆರಳುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಂದೂರು : ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಅವರ ಕಾರಿನ ಬೋನೆಟ್ ಒಳಗೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತು. ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬೋನೆಟಿನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಫೀಟ್ ಉದ್ದದ ಗಾತ್ರದ ಹೆಬ್ಬಾವು ಇರುವುದು ಕಾಣಿಸಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರು. ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ಆಗಮಿಸಿ ಕಾರಿನ ಬೋನಟ್ ಒಳಗಿರುವ ಹೆಬ್ಬವನ್ನು ಸತತ ಕಾರ್ಯಾಚರಣೆಯಿಂದ ಹೊರತೆಗೆದರು.
ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರ ಸಹಾಯ ಪಡುಕೊಂಡು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ
ಅರಣ್ಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿದರು.
ಕೆಪಿಟಿ ಪೆಟ್ರೋಲ್ ಬಂಕ್ನಲ್ಲಿ ಬೈಕ್ ಮೇಲೆ ಹರಿದ ಲಾರಿ – ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಮಂಗಳೂರು : ನಗರದ ಕೆಪಿಟಿ ಪೆಟ್ರೋಲ್ ಬಂಕ್ನಲ್ಲಿ ಬೈಕ್ ಮೇಲೆಯೇ ಲಾರಿ ಹರಿದು ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಶೋಕ್ ಗಂಭೀರ ಗಾಯಗೊಂಡಿದ್ದಾರೆ.
ಯೆಯ್ಯಾಡಿಯಿಂದ ಕೆಪಿಟಿ ಜಂಕ್ಷನ್ನ ಸಪ್ತಗಿರಿ ಪೆಟ್ರೋಲ್ ಬಂಕ್ ಕಡೆಗೆ ಬೈಕ್ ಸವಾರ ಅಶೋಕ್ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಬಂಕ್ ಕಡೆಗೆ ಬರುತ್ತಿದ್ದ ಗೂಡ್ಸ್ ಲಾರಿ ಏಕಾಏಕಿ ಎಡಬದಿಗೆ ತಿರುಗಿದೆ. ಪರಿಣಾಮ ಅಲ್ಲಿಯೇ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿ ಬೈಕ್ ಮೇಲೆಯೇ ಹರಿದಿದೆ. ಇದರಿಂದ ಬೈಕ್ ಸವಾರನ ಸೊಂಟ ಹಾಗೂ ಬಲಗೈ ಮೇಲೆಯೇ ಲಾರಿಯ ಮುಂಭಾಗದ ಚಕ್ರ ಹರಿದಿದೆ.
ಲಾರಿ ಹರಿದಿದ್ದರಿಂದ ಗಂಭೀರ ಸ್ವರೂಪದ ಗಾಯಗೊಂಡ ಬೈಕ್ ಸವಾರ ಅಶೋಕ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಘಟನೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಉಡುಪಿ ನಗರದ ಹೊರವಲಯದ ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಬೆಳ್ಳಂಬೆಳಿಗ್ಗೆ ಈ ಅವಘಡ ಸಂಭವಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
ಉಡುಪಿಯ ದೊಡ್ಡನಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನ ಬಳಿಯ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಕಟ್ಟಡದ ನವೀಕರಣ ಕಾಮಗಾರಿ ನಡೆಯುತ್ತಿದ್ದುದರಿಂದ ಅದೃಷ್ಟವಶಾತ್ ರೋಗಿಗಳು ಇರಲಿಲ್ಲ. ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಬೆಂಕಿ ಅವಘಡವನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಪ್ರಾರಂಭದಲ್ಲಿ ಕಟ್ಟಡದ ಮೇಲ್ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮೊದಲ ಮಹಡಿಯಲ್ಲಿದ್ದ ಇಬ್ಬರು ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಗ್ನಿಶಾಮಕದ ಎರಡು ವಾಹನಗಳು ಜಿಟಿಜಿಟಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದ್ದು, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಪ್ರಾಕೃತಿಕ ವಿಕೋಪ ತುರ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳ ಕಾರ್ಯವೈಖರಿ ಅಭಿನಂದನಾರ್ಹ : ಯಶ್ಪಾಲ್ ಸುವರ್ಣ
ಉಡುಪಿ : ಪ್ರಾಕೃತಿಕ ವಿಕೋಪಗಳು ಸಂಬಂಧಿಸಿದಾಗ ಸ್ಥಳೀಯಾಡಳಿತ ಜೊತೆಗೆ ಪರಿಹಾರ ಕಾರ್ಯಾಚರಣೆಯಲ್ಲಿ ಹಗಲಿರುಳು ಶ್ರಮಿಸಿ ಸಾರ್ವಜನಿಕರ ಸೇವೆಗೆ ಶೀಘ್ರವಾಗಿ ಸ್ಪಂದಿಸುವ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಮೆಸ್ಕಾಂ, ಅರಣ್ಯ, ಅಗ್ನಿಶಾಮಕ ದಳ, ಪೌರ ಕಾರ್ಮಿಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಆಯೋಜಿಸಿದ್ದ ಗೌರವಾರ್ಪಣೆ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ತುರ್ತು ಸಂದರ್ಭದಲ್ಲಿ ಮಾನವೀಯತೆಯಿಂದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗಳಿಗೆ ಗೌರವ ನೀಡುವ ಮೂಲಕ ಇನ್ನಷ್ಟು ಸೇವೆಗೆ ಪ್ರೇರಣೆ ನೀಡಿದಂತಾಗಲಿದ್ದು, ಸರಕಾರಿ ಸಿಬ್ಬಂದಿಗಳ ಜೊತೆ ಜೊತೆಗೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಿದಲ್ಲಿ ಪರಿಹಾರ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ ಎಂದರು.
ಸಮಾರಂಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಸುಮಾರು 450 ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಶ್ರೀಮತಿ ವನಜ ಪೂಜಾರ್ತಿ, ಉಡುಪಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ ಕಲ್ಮಾಡಿ, ಗಣ್ಯರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಕಿಶೋರ್ ಕುಮಾರ್ ಕುಂದಾಪುರ, ನಗರಸಭೆ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್, ದಿನಕರ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ್, ವಿಜಯ ಕೊಡವೂರು, ಗಿರೀಶ್ ಅಂಚನ್, ಗಿರಿಧರ ಆಚಾರ್ಯ, ಪ್ರಮುಖರಾದ ರಾಜೀವ್ ಕುಲಾಲ್, ರಾಜೇಶ್ ಶೆಟ್ಟಿ ಬಿರ್ತಿ, ದಿನೇಶ್ ಅಮೀನ್, ಶ್ರೀವತ್ಸ, ಹರೀಶ್ ಶೆಟ್ಟಿ ಚೇರ್ಕಾಡಿ, ಕಮಲಾಕ್ಷ ಹೆಬ್ಬಾರ್, ಗೌತಮ್ ಅಗ್ರಹಾರ, ರೇಷ್ಮಾ ಉದಯ ಶೆಟ್ಟಿ, ನೀತಾ ಪ್ರಭು, ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಮೊದಲಾದವರು ಉಪಸ್ಥಿತರಿದ್ದರು
ಮಣಿಪಾಲ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹೃದಯ ಸ್ತಂಭನಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ರಾಘವೇಂದ್ರ (49) ಮೃತ ಸವಾರ.
ಅಲೆವೂರು ಗ್ರಾಮದ ಮಂಚಿಕೆರೆಯ ಮಣಿಪಾಲ-ಅಲೆವೂರು ರಸ್ತೆಯಲ್ಲಿ ಕೆ. ಅಶ್ವಥ್ ಅವರೊಂದಿಗೆ ಪುರೋಹಿತ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ ಹೃದಯ ಸ್ತಂಭನಗೊಂಡು ವಾಹನ ಸಹಿತ ರಸ್ತೆಗೆ ಬಿದ್ದು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಇನ್ನೊಂದು ಖಾಸಗಿ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಾಯ
ಕುಂದಾಪುರ : ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಇನ್ನೊಂದು ಖಾಸಗಿ ಬಸ್ಸು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುಮಾರು 8 ಕ್ಕೂ ಮಿಕ್ಕಿ ಪ್ರಯಾಣಿಕರು ಗಾಯಗೊಂಡ ಘಟನೆ ಹೆಮ್ಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ನಡೆದಿದೆ.
ಭಟ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸನ್ನು ಚಾಲಕ ಹೆಮ್ಮಾಡಿ ಗ್ರಾಮದ ಕಾಶೀ ಮಠದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದಾಗ ಅದೇ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಇನ್ನೊಂದು ಖಾಸಗಿ ಬಸ್ ನಿಂತಿದ್ದ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಚಾಲಕ ಕಿರಣ, ಕಂಡಕ್ಟರ್ ರಾಜು, ಪ್ರಯಾಣಿಕರಾದ ರೇವತಿ, ಜಾನು, ಚೇತನಾ, ಪ್ರತ್ಯುಷಾ, ಲಾವಣ್ಯ ಸಿಂಗ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳು ಪ್ರಯಾಣಿಕರನ್ನು ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಖಾಸಗಿ ಬಸ್: ಬಸ್ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರು
ಕಾಪು : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ವೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಕಾಪುವಿನ ಉಳಿಯಾರಗೋಳಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ – ಶಿರ್ವ ನಡುವೆ ಸಂಚರಿಸುತ್ತಿದ್ದ ಮಿಲಾನ್ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸರಿದು ನಿಂತಿದೆ. ತಕ್ಷಣವೇ ಸ್ಥಳೀಯರು ಕಾರ್ಯಾಚರಣೆ ನಡೆಸಿ, ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಮುಂಭಾಗಕ್ಕೆ ಹಾನಿಯಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಬಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಉಡುಪಿ : ಮಲ್ಪೆ ತೊಟ್ಟಂನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಉಗುಳುತ್ತಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಮಲ್ಪೆ ನಿವಾಸಿ 39 ವರ್ಷ ಪ್ರಾಯದ ಸತೀಶ ಎಂದು ಗುರುತಿಸಲಾಗಿದೆ.
ಸತೀಶ ಇವರು, ಸೆ.9ರಂದು ರಾತ್ರಿ ತೊಟ್ಟಂನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಉಗುಳುತ್ತಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ಸೆ.10ರಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಸೆ.12ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.