Emergency Response
ಉಡುಪಿ : ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಮುಗುಚಿ ಬಿದ್ದ ಘಟನೆ ಕಾಪು ತಾಲೂಕಿನ ಬಡಾ ಎರ್ಮಾಳುವಿನ ಅಪೂರ್ವ ಲಾಡ್ಜ್ ಮುಂಭಾಗದಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಏಕಾಏಕಿಯಾಗಿ ರಸ್ತೆಯ ಬದಿಯ ಮೋರಿಯ ದಂಡೆಗೆ ಬಡಿದಿದೆ.
ಚಾಲಕ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಬಿಟ್ಟು, ಮರಳಿ ಉಡುಪಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದಂಡೆಗೆ ಬಡಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಬಂದ ಹೆಜಮಾಡಿ ಟೋಲ್ ಸಿಬ್ಬಂದಿ ಹಾಗೂ ಪೊಲೀಸರು ಹೆದ್ದಾರಿಗೆ ಅಡ್ಡವಾಗಿ ಉರುಳಿಬಿದ್ದ ಕಾರನ್ನು ಯಂತ್ರದ ಮೂಲಕ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಉಡುಪಿ: ತೀವ್ರ ಮಳೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತ ವತಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮುಂಚಿತವಾಗಿಯೇ ಉಡುಪಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಜೊತೆಗೆ ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯಬೇಕು ಎಂದು ಸೂಚಿಸಲಾಗಿತ್ತು. ಬೀಳುವ ಹಂತದಲ್ಲಿದ್ದ ಸುಮಾರು 400 ಮರಗಳನ್ನು ಕಡಿಯಲಾಗಿದ್ದು, 80 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಈ ಪ್ರದೇಶದಿಂದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷ ಮಳೆಯಿಂದಾಗಿ ಎದುರಿಸಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಎಚ್ಚರಿಕೆ ವಹಿಸಲಾಗಿದೆ. ಗುಡ್ಡ ಕುಸಿತದಿಂದ ಕೆಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ತ್ವರಿತಗತಿಯಲ್ಲಿ ಪರಿಹಾರ ನೀಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂದರೆ ರಸ್ತೆಯ ಮೇಲೆ ನೀರು ನಿಲ್ಲುತ್ತದೆ. ನಾನು ಉಸ್ತುವಾರಿ ಸಚಿವೆಯಾದ ನಂತರದಲ್ಲಿ ಒಳಚರಂಡಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಒಂದೆರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಿನ್ನೆ ಹೆಚ್ಚು ಮಳೆಯಾದ ಕಾರಣ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಹೇಳಿದರು.
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾ| ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ.

ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಎಂಬ ವ್ಯಕ್ತಿ ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಇಳಿದಿದ್ದರು, ಈ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕುಮಾರಧಾರಾ ನದಿಯಲ್ಲಿ ಸಿಲುಕಿದ ರವಿಕುಮಾರ್ರನ್ನು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಶೌರ್ಯ ತಂಡದಿಂದ ರಕ್ಷಣೆ ಮಾಡಲಾಗಿದೆ. ಇದೀಗ ರವಿಕುಮಾರ್ಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿಕುಮಾರ್ ಅವರು ನದಿ ಮಧ್ಯೆ ಪೊದೆ ಹಿಡಿದುಕೊಂಡು ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವಿಚಾರವನ್ನು ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಡಬ ಎಸ್ಐ ಅಭಿನಂದನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶಿಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿದ್ದಾರೆ.
ಉಡುಪಿ : ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಉಡುಪಿಯ ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿವೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ.
ಕರಂಬಳ್ಳಿ ವೆಂಕಟರಮಣ ಲೇಔಟ್ನ ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ ಹತ್ತಾರು ಮನೆಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಹಲವೆಡೆ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೂಡ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.


ಭಾರಿ ಮಳೆಗೆ ಬೈಂದೂರಿನ ಹಲವೆಡೆ ನೆರೆ; ನಾವುಂದ, ಸಾಲ್ಬುಡ, ಬಡಾಕೆರೆ ಭಾಗದ ಜನರಿಗೆ ಜಲ ದಿಗ್ಭಂಧನ
ಕುಂದಾಪುರ : ಪ್ರತಿ ವರ್ಷ ಮಳೆಗಾಲ ಬಂದರೆ ನಮಗೆ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಹೆಚ್ಚುಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು…
ಓಟು ಕೇಳಲು ಬರುವ ಜನಪ್ರತಿನಿಧಿಗಳು ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋದವರು ಮತ್ತೆ ಈ ಕಡೆ ತಲೆಯನ್ನು ಹಾಕೋದಿಲ್ಲ. ಸರ್ಕಾರಿ ಅಧಿಕಾರಿಗಳು ಮಳೆಗಾಲದ ಮೊದಲು ಬಂದು ಪ್ರವಾಹದ ಸ್ಥಳವನ್ನು ವೀಕ್ಷಿಸುತ್ತಾರೆ ಹೊರತು ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ
ನಾವುಂದ, ಬಡಾಕೆರೆ, ಮರವಂತೆ, ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಈ ವರ್ಷವೇನೂ ಹೊಸತಲ್ಲ. ಹಲವು ದಶಕಗಳಿಂದ ಇಲ್ಲಿನ ಜನಕ್ಕೆ ಮಳೆಗಾಲ ಶಾಪವೆಂದರೂ ತಪ್ಪಾಗದು. ಮಳೆಗಾಲದಲ್ಲಿ ಇಲ್ಲಿಗಾಗಿ ಮೂರ್ನಾಲ್ಕು ದೋಣಿ ಮೀಸಲಿಡಬೇಕು. ಅನಾರೋಗ್ಯ ಪೀಡಿತರು ಸಹಿತ ಆಹಾರ ಸಾಮಾಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಸುಮಾರು ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಯುವಕರ ಸಹಿತ ದೋಣಿ ಚಲಾಯಿಸಲು ತಿಳಿದವರು ಹಲವು ಮಂದಿ ದೋಣಿ ಯಾನದ ಮೂಲಕ ಸಾರ್ವಜನಿಕರಿಗೆ ನೆರವಾಗುವ ಸಾಹಸಿಗಳಾಗಿ ಶ್ರಮದಾನ ಮಾಡುತ್ತಾರೆ.
ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕೂಡ ನೆರೆ ಪ್ರದೇಶಕ್ಕೆ ಧಾವಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಆಡಳಿತ ಅಧಿಕಾರಿ ಪ್ರದೀಪ್, ತಾಲೂಕು ಪಂಚಾಯತ್ನ ಭಾರತಿ ಬೈಂದೂರು, ಅಗ್ನಿಶಾಮಕದ ಸಿಬ್ಬಂದಿಗಳು, ಬೈಂದೂರು ಆರಕ್ಷಕ ಠಾಣಾ ಸಿಬ್ಬಂದಿ, ಗ್ರಾಮ ಪಂಚಾಯತ್ ನಾವುಂದ, ಗ್ರಾಮ ಪಂಚಾಯತ್ ನಾಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕ ಸೂಚಿಸಿದರು.
ಜಿಲ್ಲೆಯಲ್ಲಿ ಗಾಳಿ, ಮಳೆ ಹಾನಿ – ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವೆ ಹೆಬ್ಬಾಳಕರ್
ಉಡುಪಿ : ಉಡುಪಿ ಜಿಲ್ಲೆಯ ಕೆಲವೆಡೆ ಗಾಳಿ ಮತ್ತು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರು ಸಚಿವ ಸಂಪುಟ ಸಭೆಗೆ ಹೊರಡುವ ಮುನ್ನ ಉಡುಪಿಯ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದರು. ಜಿಲ್ಲೆಯ ಅಮಾಸೆಬೈಲು ಸೇರಿದಂತೆ ಕೆಲವೆಡೆ ಮಳೆ, ಗಾಳಿಯಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ ಸಚಿವರು, ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಜೊತೆಗೆ, ಜನರಿಗೆ ಎಚ್ಚರಿಕೆ ಕ್ರಮಗಳ ಕುರಿತು ತಿಳಿಸಬೇಕೆಂದೂ ಸೂಚಿಸಿದರು.
ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿ, ಲಕ್ಷಾಂತರ ರೂ.ನಷ್ಟ; ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ
ಉಡುಪಿ : ಒಂದು ವಾರದ ಮಳೆ ಉಡುಪಿಯಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಮುಖ್ಯವಾಗಿ ಎರಡು ದಿನಗಳ ಗಾಳಿಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಂದು ಬಂದ ಭಾರೀ ಗಾಳಿ ಮಳೆಗೆ ಉಡುಪಿ ತಾಲೂಕಿನ ಕರ್ಜೆ ಗ್ರಾಮದ ಕುರ್ಪಾಡಿ ಭಾಗದಲ್ಲಿ ಸುಮಾರು 36 ಮನೆಗಳಿಗೆ ತೀವ್ರ ಹಾನಿಯಾಗಿದೆ. ಹಲವಾರು ಮರ, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ಸಮಸ್ಯೆಯಾಗಿದೆ. ಕಡೇಕಾರ್ ಗ್ರಾಮದಲ್ಲೂ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಈಗಾಗಲೇ ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಜನರ ನರವಿಗೆ ಧಾವಿಸಿದ್ದಾರೆ. ಬೈಂದೂರಿನಲ್ಲಿ ಹೊಟೇಲೊಂದರ ಮೇಲ್ಛಾವಣಿ ಗಾಳಿಗೆ ಹಾರಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಕಾಪು ತಾಲೂಕು ಮತ್ತು ಕುಂದಾಪುರ ತಾಲೂಕಿನಲ್ಲೂ ಗಾಳಿಮಳೆಗೆ ಮನೆಗಳು ಮತ್ತು ಕೊಟ್ಟಿಗೆಗಳು ಹಾನಿಗೊಂಡಿದ್ದು ಸ್ಥಳೀಯ ಪಂಚಾಯತ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಚಲಿಸುತ್ತಿದ್ದ ಬಸ್ನಲ್ಲೇ ಮೂರ್ಛೆಹೋದ ಚಾಲಕ; ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಪ್ರಯಾಣಿಕರು
ಉಡುಪಿ : ಚಾಲಕನೋರ್ವ ಮೂರ್ಛೆಹೋದ ಪರಿಣಾಮ ಸಿಟಿ ಬಸ್ವೊಂದು ಹಿಂಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ನಿನ್ನೆ ಸಂಜೆ ವೇಳೆ ಸಂಭವಿಸಿದೆ.
ಎಚ್ಎಂಟಿ ಸಿಟಿ ಬಸ್ ಪರ್ಕಳದಿಂದ ಮಣಿಪಾಲದ ಕಡೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಬಸ್ ಕೆಳಪರ್ಕಳದ ಏರಿನಲ್ಲಿ ಬರುತ್ತಿದ್ದಂತೆ ಚಾಲಕ ಕೃಷ್ಣ ಎಂಬವರಿಗೆ ಹಠಾತ್ ಆಗಿ ಫಿಟ್ಸ್ ಬಂದಿದೆ. ಇದರಿಂದ ಏಕಾಏಕಿಯಾಗಿ ಬಸ್ ಹಿಂದಕ್ಕೆ ಚಲಿಸಿ ಕಂದಕಕ್ಕೆ ನುಗ್ಗಿದೆ.
ಕೆಲವು ಪ್ರಯಾಣಿಕರು ಬಸ್ ನಿಂದ ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಲಕ ಕೃಷ್ಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ : ನಿಲ್ಲಿಸಿದ್ದ ಟಿಟಿ ವಾಹನವೊಂದು ಆಕಸ್ಮಿಕವಾಗಿ ಧಗಧಗನೇ ಹೊತ್ತಿ ಉರಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ನಲ್ಲಿ ನಡೆದಿದೆ.
ಜೂ.26ರಂದು ರಾತ್ರಿ ಸುಮಾರು 12 ಗಂಟೆಗೆ ಈ ಘಟನೆ ಸಂಭವಿಸಿದೆ. ಖಾಸಗಿ ಸೂಪರ್ ಮಾರ್ಕೆಟ್ವೊಂದಕ್ಕೆ ಸೇರಿದ್ದ ಈ ಟಿಟಿ ವಾಹನವನ್ನು ಚಾಲಕ ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ನೋಡನೋಡುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್ನಿಂದ ಟಿಟಿ ವಾಹನ ಧಗಧಗನೇ ಹೊತ್ತಿ ಉರಿದಿದೆ. ಟಿಟಿ ಅಗ್ನಿಗೆ ಆಹುತಿಯಾಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.