ಉಡುಪಿ : ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ನಡೆಯದೇ ಇರುವುದರಿಂದ ಆ ಗ್ರಾಪಂ ವ್ಯಾಪ್ತಿಯಲ್ಲಿ ನವೆಂಬರ್ 23ರಂದು ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಿ, ಹೊರಡಿಸಿರುವ ಆದೇಶವನ್ನು ಹಾಗೂ ಮತದಾನ ಕೇಂದ್ರಗಳ ಸುತ್ತಮುತ್ತ 100ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Election
ಉಡುಪಿ : ಗ್ರಾಮ ಪಂಚಾಯತ್ಗಳ ಸಾರ್ವತ್ರಿಕ ಉಪ ಚುನಾವಣೆಗೆ ಸಂಬಧಿಸಿದಂತೆ ಜಿಲ್ಲೆಯ ಗ್ರಾಮ ಪಂಚಾಯತ್ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಮುಂತಾದ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ, ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ ಕೊಡಿಬೆಟ್ಟು ಹಾಗೂ ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ನೀರೆ, 5-ಕೆರ್ವಾಶೆ ಹಾಗೂ ಕಡ್ತಲ ಗ್ರಾಮ ಪಂಚಾಯತಿಗಳ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗಧಿಪಡಿಸಿ, ನವೆಂಬರ್ 23ರಂದು ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗವು ಆದೇಶಿಸಿರುತ್ತದೆ.
ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನವೆಂಬರ್ 21ರ ಸಂಜೆ 5ರಿಂದ ನವೆಂಬರ್ 23ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಈ ಮೇಲ್ಕಂಡ ಗ್ರಾಮ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿನ ಮತದಾನ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಈ ಸಂದರ್ಭದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ 05ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ಹಾಗೂ ಚುನಾವಣಾ ಅಭ್ಯರ್ಥಿ / ಬೆಂಬಲಿಗರು ಸೇರಿ 05 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ನಿಷೇಧಿಸಲಾಗಿರುತ್ತದೆ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿರುತ್ತದೆ ಹಾಗೂ ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಲಾಗಿರುತ್ತದೆ.
ಮತದಾನ ದಿನದಂದು ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣಾ ಪ್ರಚಾರ ಮಾಡುವುದನ್ನು ಹಾಗೂ ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿರುತ್ತದೆ. ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದು, ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ/ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಇರುವುದಿಲ್ಲ.
ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿರುತ್ತದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿರುತ್ತದೆ.
ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವುದು ಕಂಡುಬAದಲ್ಲಿ ಕೂಡಲೇ ಅವುಗಳನ್ನು ವಶವಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳಲ್ಲಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಕ್ರಮ ವಹಿಸಬೇಕು. ಮೇಲ್ಕಂಡ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಕೈಗೊಳ್ಳುವಂತಿಲ್ಲ ಹಾಗೂ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರುಗಳು ಕಡ್ಡಾಯವಾಗಿ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗಬೇಕು.
ಮತದಾನದ ದಿನದಂದು ಮತಗಟ್ಟೆಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿರುತ್ತದೆ (ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿಗಳು/ ಸಿಬ್ಬಂದಿ ಹೊರತುಪಡಿಸಿ). ಮತದಾನ ದಿನದಂದು ಮತಗಟ್ಟೆಗಳ ಸುತ್ತ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬAಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೋಟೆಲ್ಗಳು ಮತ್ತು ಅತಿಥಿ ಗೃಹಗಳಲ್ಲಿ ವಾಸ್ತವ್ಯ ಮಾಡಿರುವವರ ಪಟ್ಟಿಗಳ ಪರಿಶೀಲನೆ ಮಾಡಿ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿಗಳನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದ ಯು.ಟಿ.ಖಾದರ್
ಮಂಗಳೂರು : ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತವನ್ನು ಬೆಂಬಲಿಸಿದ ಜಾಂಬಿಯಾ ಪರ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ರವರು ಮತ ಚಲಾಯಿಸಿದರು.
ಯು.ಟಿ.ಖಾದರ್ ಅವರು ಕರ್ನಾಟಕದ ಉಳ್ಳಾಲದಲ್ಲಿ ಹುಟ್ಟಿ ಬೆಳೆದ ಓರ್ವ ವ್ಯಕ್ತಿ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾಗಿ ಭಾರತದ ಪ್ರತಿನಿಧಿಯಾಗಿ, ಮತ ಚಲಾಯಿಸಲು ಅವಕಾಶ ದೊರಕಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.
ಭಾರತ ಬೆಂಬಲಿಸಿದ ಜಾಂಬಿಯಾದ ಡಾ.ಕ್ರಿಸ್ಟೋಪರ್ ಕಲಿಲಾ ಗೆಲುವು ಸಾಧಿಸಿದ್ದು, ಮುಂದಿನ ಅವಧಿಗೆ CPA ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಂಗಳೂರು : ಮಹಾರಾಷ್ಟ್ರ ಚುನಾವಣೆ ನಿಮಿತ್ತ ಇದೇ ನವಂಬರ್ 12ರಂದು ಪುಣೆಯಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ನಡೆದ ನಗರ ಸೇವಕರ (ಪಾಲಿಕೆ ಸದಸ್ಯರು) ವಿಶೇಷ ಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ರವರು ಭಾಗವಹಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹಾಗೂ ಪುಣೆಯ ಸಂಸದರಾದ ಶ್ರೀ ಮುರಳೀಧರ್ ಮೊಹೋಲ್ ರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸೇರಿದಂತೆ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಹಲವು ಸುತ್ತಿನ ಚರ್ಚೆ ನಡೆಯಿತು. ಶಾಸಕ ಕಾಮತ್ರವರು ಪ್ರಸ್ತುತ ಪುಣೆಯಲ್ಲಿದ್ದು ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಶಾಂತ್ ದಿವಾಕರ್, ಕ್ಷೇತ್ರದ ಹಾಲಿ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಮಾಧುರಿ ಮಿಸಾಲ್, ಎಲ್ಲಾ ನಗರ ಸೇವಕರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ : ಕರ್ನಾಟಕ ವಿಧಾನಪರಿಷತ್ ಉಪಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಅ.21ರ ಸೋಮವಾರ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ ನಿಗದಿಪಡಿಸಲಾದ ಒಟ್ಟು 158 ಮತದಾನ ಕೇಂದ್ರಗಳ ಸುತ್ತಮುತ್ತ 100ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರಗಿಸುವುದನ್ನು ಹಾಗೂ ಚುನಾವಣಾ ಅಭ್ಯರ್ಥಿ/ ಬೆಂಬಲಿಗರು ಸೇರಿ 05 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಯಾವುದೇ ಮಾರಕಾಸ್ತ್ರವನ್ನು ಹಿಡಿದು ತಿರುಗುವುದನ್ನು ಪ್ರತಿಬಂಧಿಸಲಾಗಿದೆ. ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಲಾಗಿದೆ.
ಮತದಾನ ದಿನ ಮತಗಟ್ಟೆಗಳ 200ಮೀ. ಒಳಗೆ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಶವ ಸಂಸ್ಕಾರ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಆದರೆ ಇವುಗಳಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ, ಕಾನೂನು- ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
ಮಂಗಳೂರು : ಅಕ್ಟೋಬರ್ 21ರಂದು ನಡೆಯಲಿರುವ ವಿಧಾನಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ ಜಿಲ್ಲೆಯ ಬೈಂದೂರಿನ ರಾಜು ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನಿಂದ ಐದು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕಮಾಂಡ್ ರಾಜು ಪೂಜಾರಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ರಾಜು ಪೂಜಾರಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ತೆರವುಗೊಳಿಸಿದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ಅಕ್ಟೋಬರ್ 21ರಂದು ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ.
ಈ ಕ್ಷೇತ್ರವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಲೋಕಸಭಾ, ರಾಜ್ಯಸಭಾ ಸದಸ್ಯರು, ವಿಧಾನಸಭಾ ಮತ್ತು ವಿಧಾನಪರಿಷತ್ನ ಸದಸ್ಯರು ಮತದಾರರಾಗಿರುತ್ತಾರೆ.
ಈ ಒಂದು ಸ್ಥಾನಕ್ಕಾಗಿ ಸೆಪ್ಟೆಂಬರ್ 26ರ ಗುರುವಾರ ಅಧಿಸೂಚನೆ ಹೊರಡಿಸಲಿದ್ದು, ಅಕ್ಟೋಬರ್ 3 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 4ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ, ಅಕ್ಟೋಬರ್ 7 ಸೋಮವಾರ ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.
ಅಗತ್ಯ ಬಿದ್ದರೆ ಅಕ್ಟೋಬರ್ 21ರ ಸೋಮವಾರ ಬೆಳಗ್ಗೆ 8:00ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 24ರ ಗುರುವಾರ ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
6037 ಮತದಾರರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 392 ಮತಗಟ್ಟೆಗಳು ಇರಲಿದ್ದು, 6037 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 234 ಮತಗಟ್ಟೆಗಳಲ್ಲಿ 3551 ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಗಳಲ್ಲಿ 2486 ಮತದಾರರು ಮತ ಚಲಾಯಿಸಲಿದ್ದಾರೆ.
ಉಡುಪಿ : ಬಿಜೆಪಿಯಿಂದ ಬಂಡಾಯ ನಿಂತಿದ್ದ ಮಾಜಿ ಶಾಸಕರಾದ ರಘುಪತಿ ಭಟ್ ಸೋಲಿನ ನಂತರ ತಮ್ಮ ಹೇಳಿಕೆಯಲ್ಲಿ, “ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಹಿಂದೂತ್ವ ಮತ್ತು ರಾಷ್ಟ್ರೀಯತೆಗೆ ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದೆ” ಎಂದು ಅವರು ಹಿನ್ನಲೆ ವಿವರಿಸಿದ್ದಾರೆ.
“ಅವಕಾಶ ವಂಚಿತರಿಗೆ ಈ ಹಿಂದೆ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿತ್ತು” ಎಂದ ಭಟ್, “ಈ ಚುನಾವಣೆಯಲ್ಲಿ ನನಗೆ ಸಮಯದ ಕೊರತೆ ಆಯಿತು. ಗೆಲ್ಲುವ ವಿಶ್ವಾಸದಲ್ಲೇ ನಾನು ಸ್ಪರ್ಧಿಸಿದ್ದೆ. ಈ ಮಟ್ಟದ ಸೋಲು ನನಗೆ ಅನಿರೀಕ್ಷಿತ. ಇದು ಮತದಾರರ ನಿರ್ಣಯ, ಅದನ್ನು ಸ್ವೀಕರಿಸಬೇಕು.” ಐದು ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಭಿನಂದಿಸುವುದಾಗಿ ತಿಳಿಸಿದ ಅವರು, “ಸೋಲಿನಿಂದ ನಾನು ಓಡಿ ಹೋಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುವ ಭರವಸೆ ನೀಡಿದ ರಘುಪತಿ ಭಟ್, “ಕಾರ್ಯಕರ್ತರ ಧ್ವನಿಯಾಗಿ ಇರ್ತೇನೆ,” ಮತ್ತು “ಪಕ್ಷವನ್ನು ಎದುರು ಹಾಕಿಕೊಂಡು ನಿಂತಿದ್ದೇನೆ,” ಎಂದರು. “ನನ್ನ ಜೊತೆ ಬಂದವರ ಪರ ಇರೋದು ನನ್ನ ಜವಾಬ್ದಾರಿ” ಎಂದು ಹೇಳಿದರು.
“ಎಚ್ಚರಿಸುವ ಕೆಲಸ ಆಗಬೇಕಿತ್ತು, ಅದನ್ನು ಮಾಡಿದ್ದೇನೆ,” ಮತ್ತು “ಸಾಮಾಜಿಕ ರಾಜಕೀಯ ಜೀವನದಿಂದ ಹಿಂದೆ ಸರಿಯುವುದಿಲ್ಲ,” ಎಂದು ಭರವಸೆ ನೀಡಿದ ರಘುಪತಿ ಭಟ್, “ನನ್ನ ಮನೆ ಸದಾ ನೊಂದವರಿಗೆ, ಸಮಸ್ಯೆ ಇರುವವರಿಗೆ ತೆರೆದಿರುತ್ತದೆ,” ಎಂದು ತಿಳಿಸಿದರು.
ಉಡುಪಿ : ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಈ ಬಾರಿಯ ಚುನಾವಣೆ ಸಾಬೀತುಪಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಡಾ. ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯವರೇ ಆದ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆಗಿಳಿದಾಗ ಸ್ವಲ್ಪ ಆತಂಕವಿತ್ತು. ಆದರೆ, ಭಟ್ ಅವರ ಅಭಿಮಾನಿಗಳಾಗಿದ್ದರೂ ಕಾರ್ಯಕರ್ತರು ಪಕ್ಷ ಬೆಂಬಲಿತ ಅಭ್ಯರ್ಥಿಯನ್ನೇ ಬೆಂಬಲಿಸಿದ್ದಾರೆ. ಜೊತೆಗೆ ಮೈತ್ರಿ ಅಭ್ಯರ್ಥಿಯ ಗೆಲುವಿಗೂ ಕಾರಣರಾಗಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಚಿಂತನೆಯ ಪಕ್ಷದ ತತ್ವಕ್ಕೆ ವಿರೋಧವಾಗಿ ಪಕ್ಷ ತ್ಯಜಿಸಿದವರಿಗೆ ಏನಾಗುತ್ತದೆ ಎಂಬುದು ಈ ಬಾರಿಯ ಚುನಾವಣೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಿಟ್ಟು ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷರುಗಳಾದ ಮಟ್ಟಾರ್ ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಅನಿತಾ ಶ್ರೀಧರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ನಗರ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮೀಶ ಬಂಗೇರ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ, ಪಕ್ಷದ ಪ್ರಮುಖರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಜೇಶ್ ಕಾವೇರಿ, ದೇವಿಪ್ರಸಾದ್ ಶೆಟ್ಟಿ, ಶೈಲೇಂದ್ರ ಶೆಟ್ಟಿ, ಆಸಿಫ್ ಕಟಪಾಡಿ, ದಾವೂದ್ ಅಬೂಬಕರ್, ಅಜಿತ್ ಕುಮಾರ್, ಸುರೇಶ್ ಮಲ್ಪೆ, ರುಡಾಲ್ಫ್ ಡಿಸೋಜ, ಡೇನಿಸ್ ಮಾಸ್ಕರೇನಸ್, ರಾಜೇಂದ್ರ ಪಂದುಬೆಟ್ಟು, ಮಂಜುನಾಥ್ ಮಣಿಪಾಲ್, ಆನಂದ ಸುವರ್ಣ, ಗುರುಪ್ರಸಾದ್, ಜಯಕರ್, ನಿತಿನ್ ಪೈ, ಸುಭಾಷಿತ್ ಕುಮಾರ್, ಚಿನ್ಮಯಮೂರ್ತಿ, ದಯಾಶಿನಿ, ಪೂರ್ಣಿಮಾ ಶೆಟ್ಟಿ, ಭಾರತಿ ಚಂದ್ರಶೇಖರ್, ಸುಧಾ ಪೈ, ಸರೋಜಾ ಶೆಣೈ, ಸುಜಾಲ ಸತೀಶ್, ಶಾಂತಿ ಮನೋಜ್, ಸುಗುಣಾ ನಾಯ್ಕ್, ಮಂಜುಳಾ ಪ್ರಸಾದ್, ಗ್ರೇಟ್ಟಾ ಮಾಸ್ಕರೇನಸ್, ದೀಪಾ ಪೈ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.