ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಭೇಟಿ ನೀಡಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮಲ್ಪೆ : ಉಡುಪಿಯ ಇತಿಹಾಸ ಪ್ರಸಿದ್ದ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವಾಲಯದ ಸಮಗ್ರ ಜೀರ್ಣೋದ್ಧಾರವನ್ನು ನೋಡಿ ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಹರೀಶ್ ಪೂಂಜ ಹಾಗೂ ಮಂಗಳೂರು ಎಂ.ಪಿ. ಕ್ಯಾ. ಬ್ರಿಜೇಶ್ ಚೌಟ ಹಾಗೂ ದೇವಾಲಯದ ಟಿ. ಶ್ರೀನಿವಾಸ ಭಟ್, ಶ್ರೀಶ ಆಚಾರ್ಯ ಕಡೇಕಾರ್, ನಾಗರಾಜ ಮೂಲಿಗಾರ್, ಶಶಿಧರ್ ಅಮೀನ್, ಶರತ್ ಬೈಲಕೆರೆ, ಈಶ್ವರ್ ಜಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗ ಲೇಖನ ಯಜ್ಞ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ಅಡ್ಯಾರ್ ಗಾರ್ಡನ್ನಲ್ಲಿ ಜರುಗಿತು.
ಕಮಲ ಪ್ರಭಾಕರ್ ಭಟ್, ಅಶ್ವಿನಿ ಮುಹಿಲನ್, ಸುನಂದಾ ಪುರಾಣಿಕ್, ಮಮತಾ ಸುನೀಲ್ ಆಚಾರ್, ವೃಂದ ವೇದವ್ಯಾಸ ಕಾಮತ್, ನಿರ್ಮಿತ ಸತೀಶ್ ಪಟ್ಲ, ಶ್ರೀದುರ್ಗ ಹರೀಶ್ ಪೂಂಜಾ, ಮಮತಾ ಗಟ್ಟಿ, ಮಲ್ಲಿಕಾ ಪ್ರಸಾದ್ ಶೆಟ್ಟಿ ದೀಪ ಪ್ರಜ್ವಲನೆಗೈದರು.
ಬಳಿಕ ಮಾತಾಡಿದ ಕಾಪು ಮಾರಿಗುಡಿ ಕ್ಷೇತ್ರದ ಕುಮಾರ ತಂತ್ರಿಗಳು, “ಹೆತ್ತು ಹೊತ್ತ ತಾಯಿಗೆ ಸನಾತನ ಸಂಸ್ಕೃತಿ ಬಹಳಷ್ಟು ಗೌರವವನ್ನು ನೀಡಿದೆ. ಆದೇ ರೀತಿ ಇಡೀ ಲೋಕದ ತಾಯಿಯಾದ ಕಾಪುವಿನ ಮಾರಿಯಮ್ಮ ನಮ್ಮ ಸಂಕಷ್ಟಗಳನ್ನು ಕಳೆಯುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಅಮ್ಮನ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಕಾಪುವಿನ ಮಾರಿಯಮ್ಮ ಪ್ರತಿಷ್ಠಾಪನೆಗೊಂಡಿದ್ದು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಕೆಲಸ ಭರದಿಂದ ನಡೆಯುತ್ತಿದೆ. ಇಂದು ಅಮ್ಮನವರ ನವದುರ್ಗ ಲೇಖನ ಯಜ್ಞಕ್ಕೆ ಚಾಲನೆ ಸಿಕ್ಕಿದೆ. ನಾವೆಲ್ಲರೂ ನವದುರ್ಗ ಮಂತ್ರ ನಿತ್ಯ ಜಪಿಸುವ ಮೂಲಕ ತಾಯಿಯನ್ನೇ ನಮ್ಮ ರಕ್ಷಕಿಯನ್ನಾಗಿ ಪಡೆಯೋಣ” ಎಂದರು.
ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಕಾಪು ಅವರು ಲೇಖನ ಯಜ್ಞದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡಿ, “ಲೇಖನ ಯಜ್ಞವನ್ನು ನಾವೆಲ್ಲರೂ ಮಾಡಬೇಕು. ತಾಯಿ ಎಂದರೆ ಪ್ರಕೃತಿ, ನಾವು ಪ್ರಕೃತಿಯ ಆರಾಧಕರು. ನಾವೆಲ್ಲರೂ ದೇವರನ್ನು ಮತ್ತು ದೇಶವನ್ನು ಆರಾಧನೆ ಮಾಡೋಣ“ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25ರಿಂದ ಮಾರ್ಚ್ 5ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನವದುರ್ಗ ಲೇಖನ ಯಜ್ಞ ಮತ್ತು ನವ ಚಂಡಿಕಾ ಯಾಗ ನಡೆಸಲು ದೇವಿಯ ಅಭಯವಾಗಿದೆ. 99,999 ಭಕ್ತರು ಈ ನವದುರ್ಗ ಲೇಖನ ಯಜ್ಞದಲ್ಲಿ ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.
ಕಾರ್ಯಕ್ರಮದಲ್ಲಿ ನವದುರ್ಗ ಲೇಖನ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ವಿಶ್ವನಾಥ, ನವದುರ್ಗ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಸಂದೀಪ್ ಕುಮಾರ್ ಮಂಜ, ಎಂ ಬಿ ಪುರಾಣಿಕ್, ರಘುನಾಥ್ ಶೆಟ್ಟಿ ಕೊಪ್ಪಲಂಗಡಿ, ಸುವರ್ತನ್ ಉಡುಪಿ, ಸಂತೋಷ್ ರೈ ಬೋಳಿಯಾರ್, ಪಟ್ಲ ಸತೀಶ್ ಶೆಟ್ಟಿ, ಮಲ್ಲಿಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಮಣೀಶ್ ರೈ, ಅಶ್ವತ್ತಾಮ ಹೆಗ್ಡೆ, ಪ್ರದೀಪ್ ಆಳ್ವ ಕದ್ರಿ, ಸುಲತಾ ಜೆ ರೈ, ಸಂತೋಷ್ ಶೆಟ್ಟಿ ಶೆಡ್ಡೆ, ಅಕ್ಷಿತ್ ಸುವರ್ಣ ಸಹಕರಿಸಿದರು. ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿ ರಚನೆ ಮಾಡಲಾಯಿತು.
ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮನ್ವಿತ್ ಶೆಟ್ಟಿ ಇರಾ ದೇವರನ್ನು ಸ್ತುತಿಸಿದರು. ಕೃಷ್ಣ ಶೆಟ್ಟಿ ತಾರೆಮಾರ್ ಧನ್ಯವಾದ ಸಮರ್ಪಿಸಿದರು.
ಮಂಗಳೂರು : ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ “ಕಲ್ಜಿಗ” ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಮಾತನಾಡಿದರು.
ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಚಲನಚಿತ್ರ ತಂಡದ ಮೇಲೆ ಅಜ್ಜನ ಆಶೀರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ.
ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಮಿಗಿಲಾಗಿ ಅಜ್ಜನ ವಿಚಾರಗಳ ಕುರಿತು ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದಲ್ಲಿ, ಅವರು ಯಾವ ಸ್ಥಳಕ್ಕೆ ಬರುತ್ತಾರೋ? ಅಲ್ಲಿಗೆ ಮುಂಚಿತವಾಗಿ ತಾನೇ ಬಂದು ನಿಂತು ಮಾತನಾಡುವೆನು. ಸಿನೆಮಾ ಒಮ್ಮೆಯಾದರೂ ನೋಡಿ, ನೋಡದೆ ನಿಲ್ಲಿಸಬೇಕು ಅನ್ನುವ ಮಾತುಗಳನ್ನು ಆಡದಿರಿ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ನಡೆಸಿರುವೆನು ಎಂದರು.
ಕಾಂತಾರ-2 ಅವಕಾಶ ಸಿಕ್ಕಿದೆ!
ಕಲ್ಜಿಗ ಚಿತ್ರ ಒಂದೂವರೆ ವರ್ಷದ ಹಿಂದೆ ಶೂಟಿಂಗ್ ಆರಂಭವಾದ ದಿನಗಳಿಂದ ಶುಭ ಘಳಿಗೆ ನನ್ನ ಪಾಲಿಗೆ ಒದಗಿಬಂದಿದೆ. ಅಜ್ಜನ ದಯೆಯಿಂದಾಗಿ ಕಾಂತಾರ-2 ಬ್ಯಾಂಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವಂತೆ ಅವಕಾಶ ಒದಗಿಬಂತು. ಖುದ್ದು ಚಿತ್ರತಂಡದ ಮುಖ್ಯಸ್ಥರೇ ಕರೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಕಲ್ಜಿಗ ಚಿತ್ರದ ಸಸಿಹಿತ್ಲು ಶೂಟಿಂಗ್ ಸ್ಪಾಟ್ನಲ್ಲಿ ಯಾವುದೇ ರೀತಿಯ ಅಡಚಣೆಗಳಿರಲಿಲ್ಲ. ಅಜ್ಜನ ದಯೆ ಎಷ್ಟಿತ್ತೆಂದರೆ ದಿನವಿಡೀ ಶೂಟಿಂಗ್ ನಡೆಸಿದರೂ ಸುಸ್ತು ಅನ್ನುವ ವಿಚಾರವೇ ಬರಲಿಲ್ಲ. ನೇರ ಮನೆಗೆ ಹೋಗಿ ಆರಾಮವಾಗಿ ಮಲಗುತ್ತಿದ್ದೆವು. ಇಂತಹ ದೈವೀ ಶಕ್ತಿಯನ್ನು ಎಂದಿಗೂ ಅಪಚಾರ ನಡೆಸಲು ಸಾಧ್ಯವೇ? ಅಂದರು.
ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.
ಮಂಗಳೂರು : ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯ ಕದ್ರಿ, ಇಲ್ಲಿಗೆ ಭೇಟಿ ನೀಡಿ ಗಣೇಶ ಚತುರ್ಥಿಯ ಅಂಗವಾಗಿ ನಡೆಯುವ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಸ್ಥಬ್ಧಚಿತ್ರ/ಟ್ಯಾಬ್ಲೋಗಳನ್ನು ನಿಷೇಧಿಸಲು ಸಂಘಟನೆಯ ಮೂಲಕ ಕರೆ ನೀಡಬೇಕು ಎಂದು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ) ಮೂಲಕ ಮನವಿ ಮಾಡಲಾಯಿತು.
ಹಿಂದೂ ಧರ್ಮದ ಅವಿಭಾಜ್ಯ ನಂಬಿಕೆಯಾಗಿರುವ ದೈವಗಳನ್ನು ಟ್ಯಾಬ್ಲೋಗಳಲ್ಲಿ ಪ್ರದರ್ಶಿಸುವುದನ್ನು ಸಂಘಟನೆ ಸಹಿಸುವುದಿಲ್ಲ. ಈ ಕುರಿತು ಜಿಲ್ಲೆಯಿಂದ ಸಂಘಟನೆಯ ಪ್ರಮುಖರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮದ ಆಯೋಜಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವುದಾಗಿ ಸಂಘಟನೆಯ ಪ್ರಮುಖರು ಭರವಸೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ಕೆ ಪುರುಷೋತ್ತಮ, ವಿಎಚ್ಪಿ ಪ್ರಾಂತ ಸೇವಾ ಸಹ ಪ್ರಮುಖ್ ಶ್ರೀ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶ್ರೀ ರವಿ ಅಸೈಗೋಳಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂಜೀವ ಸೂಟರ್ಪೇಟೆ, ಭಜರಂಗದಳ ವಿಭಾಗ ಸಂಯೋಜಕರಾದ ಶ್ರೀ ಪುನೀತ್ ಅತ್ತಾವರ ಹಾಗೂ ದೈವಾರಾಧನೆ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಭರತ್ ಬಳ್ಳಾಲ್ ಬಾಗ್, ಕಾರ್ಯದರ್ಶಿಗಳಾದ ಶ್ರೀ ಗಿರೀಶ್ ಸುವರ್ಣ ಮೂಲ್ಕಿ, ಸದಸ್ಯರಾದ ಶ್ರೀ ಮಹೇಶ್ ಅಮೀನ್, ಶ್ರೀ ಸಂತು ಅನಂತಾಡಿ ಉಪಸ್ಥಿತರಿದ್ದರು.
ಕುಂದಾಪುರ : ಭಿಕ್ಷೆ ಬೇಡಿ ಬಂದ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನಕ್ಕೆ ದೇಣಿಗೆ ನೀಡುವ ಮೂಲಕ ಗಂಗೊಳ್ಳಿ ಕಂಚುಗೋಡು ನಿವಾಸಿ ಅಶ್ವತ್ಥಮ್ಮ ಬೆರಗು ಮೂಡಿಸಿದ್ದಾರೆ. ಕುಂದಾಪುರದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಸಂಗ್ರಹಿಸಿದ 1.16 ಲಕ್ಷ ರೂ. ಗಳನ್ನು ಅಶ್ವತ್ಥಮ್ಮ ದಾನವಾಗಿ ನೀಡಿದ್ದಾರೆ.
ಶಬರಿಮಲೆಯ ಪರಮ ಭಕ್ತೆಯಾಗಿರುವ ಈಕೆ ಈ ಮೊದಲು ಆನೆಗುಡ್ಡೆ ಕುಂಭಾಶಿ ದೇವಸ್ಥಾನ, ಮಂಗಳಾದೇವಿ, ಬಪ್ಪನಾಡು, ಪೊಳಲಿ ದೇವಸ್ಥಾನಗಳಿಗೆ ತಲಾ 1.5 ಲಕ್ಷ ರೂ., ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದರು. ಅನ್ನದಾನವೇ ಶ್ರೇಷ್ಠ ದಾನ ಎಂದು ನಂಬಿರುವ ಇವರು, ಈ ಬಾರಿ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಿಕ್ಷೆಯ ಹಣ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಕೊಲ್ಲೂರು : ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಶನಿವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಕುಂದಾಪುರ ಉಪಕಮಿಷನರ್ ಮಹೇಶ್ಚಂದ್ರ, ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಪ್ರದೀಪ್, ಡಿವೈಎಸ್ಪಿ ಬೆಳ್ಳಿಯಪ್ಪ, ಅರ್ಚಕರು, ಸಿಬಂದಿ ಉಪಸ್ಥಿತರಿದ್ದು, ರಾಜ್ಯಪಾಲರನ್ನು ಸ್ವಾಗತಿಸಿದರು.
ದೇಗುಲದ ವತಿಯಿಂದ ರಾಜ್ಯಪಾಲರನ್ನು ಸಮ್ಮಾನಿಸಲಾಯಿತು. ಬಳಿಕ ಉಡುಪಿಗೆ ತೆರಳಿದರು.
ಉಡುಪಿ : ಉಡುಪಿ ಶ್ರೀ ಕೃಷ್ಣ ಮಠ ಇವತ್ತು ಸ್ಟಾರ್ ನಟರುಗಳ ಭೇಟಿಗೆ ಸಾಕ್ಷಿಯಾಯ್ತು. ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ ಮತ್ತು ಜೂನಿಯರ್ ಎನ್ಟಿಆರ್ ಕುಟುಂಬ ಸಮೇತ ಅಗಮಿಸಿ ಕೃಷ್ಣನ ದರ್ಶನ ಪಡೆದರು.
ಬಳಿಕ ಮಾತನಾಡಿದ ಜೂನಿಯರ್ ಎನ್ಟಿಆರ್, 40 ವರ್ಷಗಳಿಂದ ನನ್ನ ಅಮ್ಮನಿಗೆ ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇತ್ತು. ಅದು ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ, ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ ಎಂದರು. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದ ಅವರು, ರಿಷಬ್ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿಯಾಗಿದೆ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದರು.
ಬಳಿಕ ಮಾತನಾಡಿದ ರಿಷಭ್ ಶೆಟ್ಟಿ, ಜೂ.ಎನ್ ಟಿ ಆರ್ ಜೊತೆ ಅಣ್ಣ ತಮ್ಮನ ಸಂಬಂಧ ಫೀಲ್ ಆಗುತ್ತದೆ, ಅವರು ಆಂಧ್ರಪ್ರದೇಶದವರು ಎಂಬ ಭಾವನೆ ಬರಲ್ಲ. ಬಹಳ ಸಮಯದ ನಂತರ ಭೇಟಿಯಾಗುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ನಾನು ಈ ಕಡೆಗೆ ಇದ್ದೆ, ಹಾಗಾಗಿ ಜೊತೆಗೆ ಮಠಕ್ಕೆ ಬಂದೆವು. ಉಡುಪಿ ಅಷ್ಟಮಿಗೆ ಬರಬೇಕಾಗಿತ್ತು, ಸಾಧ್ಯವಾಗಿರಲಿಲ್ಲ. ಎನ್ಟಿಆರ್ ಕುಟುಂಬದ ಜೊತೆ ಬಂದಿರೋದು ಖುಷಿಯಾಗಿದೆ. ಕಾಂತರಾ ಪ್ರೀಕ್ವೆಲ್ ಚಿತ್ರೀಕರಣ ಆಗುತ್ತಿದೆ ಎಂದು ಹೇಳಿದರು.
ಉಡುಪಿ : ತೆಲುಗು ಹಾಗೂ ತಮಿಳು ನಟಿ ಹಾಗೂ ರಾಜಕಾರಣಿ, ಈ ಬಾರಿಯ ಲೋಕಸಭೆ ಚುನಾವಣೆಯ ಹೈದರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಕುಟುಂಬ ಸಮೇತ ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.
ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಶ್ರೀಪಾದರು ಸಾಗರದಾಚೆಗೂ ನಡೆಸುತ್ತಿರುವ ಕೃಷ್ಣ ತತ್ವ ಪ್ರಸಾರ ಹಾಗೂ ಗೀತಾ ಪ್ರಚಾರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಪಾದರಿಂದ ಗೀತಾ ಲೇಖನಯಜ್ಞ ದೀಕ್ಷೆ ಪಡೆದರು.
ಈ ಸಂದರ್ಭದಲ್ಲಿ ಶ್ರೀಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಬಿಜೆಪಿ ಮಹಿಳಾ ಮೋರ್ಚಾ ನಿಕಟಪೂರ್ವ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂರ್ಣಮಾ ರತ್ನಾಕರ್ ಮೊದಲಾದವರಿದ್ದರು.
ಮಂಗಳೂರು : ಸಂಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಮಂಗಳೂರು ಹೊರವಲಯದ ತೊಕ್ಕೊಟ್ಟು ಜಂಕ್ಷನ್ನ ಕೊರಗಜ್ಜನ ಕಟ್ಟೆಯಲ್ಲಿ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆಯನ್ನು ಶನಿವಾರ ನೀಡಿದರು.
ಬಳಿಕ ಮಾಧ್ಯಮದ ಜತೆ ಮಾತನಾಡಿ, ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ಸ್ನೇಹಿತರು ಕೋಲ ಸೇವೆ ಕೊಡುವ ಬಗ್ಗೆ ಹೇಳಿದ್ದರು. ಈಗ ಕುಟುಂಬ ಸಮೇತರಾಗಿ ಬಂದು ಕೋಲ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದರು.
ರಾಜೀವ್ ಗಾಂಧಿ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಸದಸ್ಯ ಡಾ.ಇಫ್ತಿಕಾರ್ ಆಲಿ ಉಪಸ್ಥಿತರಿದ್ದರು.
ಬಿಜೆಪಿ ಜಿಪಂ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದು ಈ ಸಂಬಂಧ ಸಿಬಿಐ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಸಹ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆಯಿದ್ದು ಈ ಎಲ್ಲ ಬೆಳವಣಿಗೆಗಳ ನಡುವೆ ಕೋಲ ಸೇವೆಯನ್ನು ವಿನಯ್ ಕುಲಕರ್ಣಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.