ಉಡುಪಿ : ಯಾವುದೇ ಕಲೆ ಇರಲಿ, ಅದನ್ನು ಪೋಷಿಸಿಕೊಂಡು, ಆರಾಧಿಸಿಕೊಂಡು ಬಂದ ಅಭಿಮಾನಿಗಳಿಂದ ಅದು ಅಳಿಯದೆ ಉಳಿಯುತ್ತದೆ. ಹಾಗೆಯೇ ಯಕ್ಷಗಾನದ ಭಾಗವತ ದಿಗ್ಗಜ ಸುಬ್ರಹ್ಮಣ್ಯ ಧಾರೇಶ್ವರ ಅವರು ಆರಂಭಿಸಿರುವ ಯಕ್ಷಗಾನ ಜ್ಞಾನಯಜ್ಞ ಕಾರ್ಯಕ್ರಮವನ್ನು ಅವರ ಅಭಿಮಾನಿಗಳ ಸಹಕಾರದಲ್ಲಿ ನಡೆಸುತ್ತಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಬೈಂದೂರಿನ ಕಿರಿಮಂಜೇಶ್ವರ – ನಾಗೂರು ಸುತ್ತಲಿನ ನಾಗರಿಕರ ಸಹಯೋಗದಲ್ಲಿ ನಾಗೂರು ಒಡೆಯರಮಠದ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸಹಕಾರದಲ್ಲಿ ಹಮ್ಮಿಕೊಂಡ 9ನೇ ವರ್ಷದ ಯಕ್ಷಗಾನ ಜ್ಞಾನಯಜ್ಞ ‘ತಾಳ ಮದ್ದಲೆ ಸಪ್ತಾಹ’ದ ಸಮಾರೋಪದಲ್ಲಿ ಖ್ಯಾತ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೊಳಿ ಅವರಿಗೆ ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣೆಯ ‘ಕಲಾ ತಪಸ್ವಿ -2024’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಧಾರೇಶ್ವರ ಅವರ ಹೆಸರೇ ಹೇಳುವ ಹಾಗೆ ತನ್ನ ಕಂಠವನ್ನು ಯಕ್ಷಗಾನಕ್ಕೆ ಧಾರೆ ಎರೆದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರ ಪ್ರತಿಭೆಗೆ ಸೋತು 9 ವರ್ಷಗಳ ಹಿಂದೆ ಅವರು ಆರಂಭಿಸಿದ ಈ ಸಪ್ತಾಹ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ. ಅಲ್ಲದೆ ಅವರ ಉಪಸ್ಥಿತಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ, ‘ಧಾರೇಶ್ವರ ಅಷ್ಟಾಹ’ ಕಾರ್ಯಕ್ರಮವನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮೂಲಕ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ ಎಂದ ಅವರು, ಧಾರೇಶ್ವರ ಅವರ ಅಭಿಮಾನಿಗಳು ಇಂತಹ ಕಾರ್ಯಕ್ರಮಗಳನ್ನು ತನು-ಮನ-ಧನದಿಂದ ಪ್ರೋತ್ಸಾಹಿಸುತ್ತಿರುವುದನ್ನು ಕಂಡಾಗ ಯಕ್ಷಗಾನ ಕಲೆಯ ಮಹತ್ವದ ಬಗ್ಗೆ ಅರಿವಾಗುತ್ತದೆ ಎಂದು ಅವರು ತಿಳಿಸಿದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡಿ, ಇಂದು ಕಲೆ, ಸಾಹಿತ್ಯ, ಸಂಸ್ಕೃತಿ ನಶಿಸಿ ಹೋಗುವ ಭಯ ನಮ್ಮಲ್ಲಿದ್ದರೆ ಅದು ತಪ್ಪು. ಎಲ್ಲಿಯವರೆಗೆ ಅಭಿಮಾನಿಗಳು, ಸಂಘಟಕರಿದ್ದಾರೋ ಅಲ್ಲಿಯವರೆಗೆ ಈ ಕಲೆಗೆ ಅಳಿವಿಲ್ಲ. ಆದರೂ ಕಲೆ, ಸಾಹಿತ್ಯದಂತಹ ಕಾರ್ಯಕ್ರಮಗಳು ಸರಕಾರಿ ಪ್ರೊಟೊಕೊಲ್ನಿಂದ ನಡೆಯುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಸರ್ವ ರೀತಿಯ ಮಾನ್ಯತೆ, ಸರ್ವರಿಗೂ ಸಮಾನವಾದ ವೇದಿಕೆ ಇದ್ದರೆ ಅದು ಯಕ್ಷಗಾನದಲ್ಲಿ ಮಾತ್ರ. ಯಕ್ಷಗಾನ ಇಂದು ರಾಜಾಶ್ರಯ ಕಳೆದುಕೊಂಡರೂ, ಜನಾಶ್ರಯದಲ್ಲಿ ಬೆಳೆಯುತ್ತಿರುವುದು ಸಂತೋಷ ತಂದಿದೆ ಎಂದರು.
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಯಕ್ಷಗಾನ ಹಾಗೂ ತಂದೆಯ ಮೇಲಿನ ಅಭಿಮಾನದಿಂದ ಕಾರ್ತಿಕೇಯ ಧಾರೇಶ್ವರ ಅವರು ಈ ಕಾರ್ಯವನ್ನು ನಡೆಸುತ್ತಿರುವುದು ಸಂತೋಷ ತಂದಿದೆ. ಇದನ್ನು ಮುಂದುವರಿಸಿಕೊoಡು ಹೋಗುವ ಜವಾಬ್ದಾರಿ ಧಾರೇಶ್ವರ ಅಭಿಮಾನಿಗಳದ್ದು. ಧಾರೇಶ್ವರ ಅವರು ಆರಂಭಿಸಿರುವ ಈ ಕಾರ್ಯಕ್ರಮ ನಿಲ್ಲಬಾರದು. ಟ್ರಸ್ಟ್ ಇಚ್ಚಿಸಿದರೆ ನಾವು ಕೈ ಜೋಡಿಸಲು ಸಿದ್ಧ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನದ ಪ್ರಸಿದ್ಧ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರಿಗೆ ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣೆಯ ‘ಕಲಾ ತಪಸ್ವಿ – 2024’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಅಗಸ್ಥೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಐತಾಳ್ ಕಿರಿಮಂಜೇಶ್ವರ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ್ ಹೆಗಡೆ ಹೆರವಟ್ಟಾ, ಮಂಗಳೂರು ಕರ್ನಾಟಕ ಯಕ್ಷಧಾಮದ ಜನಾರ್ದನ ಹಂದೆ, ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟಿನ ಕಾರ್ತಿಕೇಯ ಧಾರೇಶ್ವರ ಮೊದಲಾದವರು ಉಪಸ್ಥಿತರಿದ್ದರು.