ಸುಬ್ರಹ್ಮಣ್ಯ : ಕಸ್ತೂರಿ ರಂಗನ್ ವರದಿ ವಿರೋಧಿಸಿ ನಿನ್ನೆ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಅನುಮತಿ ಇಲ್ಲದೆ ರಸ್ತೆ ತಡೆ ನಡೆಸಿದ ಆರೋಪದ ಮೇಲೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಶುಕ್ರವಾರ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ಸಭೆ ನಡೆದಿತ್ತು, ಬಳಿಕ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು 1 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಪೇಟೆಗೆ ಬಂದು ಮದ್ಯಾಹ್ನ 2.30 ಗಂಟೆಗೆ ರಸ್ತೆತಡೆಯನ್ನು ನಡೆಸಿದ್ದರು.
ಈ ರೀತಿ ಅಕ್ರಮ ಕೂಟ ಸೇರಿಕೊಂಡು ರಸ್ತೆ ತಡೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಾನೂನು ಬಾಹಿರ ಎಂದು ತಿಳಿಸಿದರೂ ಗಣನೆಗೆ ತೆಗೆದುಕೊಳ್ಳದೆ ಮಧ್ಯಾಹ್ನ 3.30 ಗಂಟೆಯ ತನಕ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಶುಕ್ರವಾರ ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನಾ ಸಭೆ ನಡೆಸಲಾಗಿತ್ತು. ಪ್ರತಿಭಟನಾಕಾರರರಿಂದ ಮನವಿ ಸ್ವೀಕರಿಸಲು ಉನ್ನತ ಅಧಿಕಾರಿಗಳು ಆಗಮಿಸುವುದು ವಿಳಂಬವಾದ ಹಿನ್ನೆಲೆ ಆಕ್ರೋಶಗೊಂಡ ಪ್ರತಿಭಟನಾಕಾರರು ಗುಂಡ್ಯ ಜಂಕ್ಷನ್ ಗೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಹೆದ್ದಾರಿ ತಡೆ ನಡೆಸಿದ ಘಟನೆ ನಡೆದಿತ್ತು. ಬಳಿಕ ಪುತ್ತೂರು ಸಹಾಯಕ ಆಯುಕ್ತರು ಆಗಮಿಸಿ ಮನವಿ ಸ್ವೀಕರಿಸಿದ ಬಳಿಕ ಹೆದ್ದಾರಿ ತಡೆ ಕೈ ಬಿಡಲಾಗಿತ್ತು.
