ಉಡುಪಿ : ಪ್ರಸ್ತುತ ಸಮಾಜದಲ್ಲಿ ಮುಸ್ಲಿಂ ಸಮುದಾಯವು ಬಹಳಷ್ಟು ಸವಾಲುಗಳ ನಡುವೆ ಜೀವಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇಸ್ಲಾಮಿ ಆಂದೋಲನವು ವಿದ್ಯಾರ್ಥಿ-ಯುವಕರ ಮನಸ್ಸಿನಲ್ಲಿ ಮಹೋನ್ನತ ಕನಸುಗಳನ್ನು ಸೃಷ್ಟಿಸುತ್ತಿದೆ. ಪ್ರಗತಿಯ, ಮಹೋನ್ನತಿಯ ಪಯಣವು ಉನ್ನತ ಕನಸುಗಳಿಂದ ಆರಂಭವಾಗುತ್ತದೆ. ನಮ್ಮ ಕನಸುಗಳು ನಿಷ್ಕೃಷ್ಟವಾಗಿದ್ದರೆ ನಮ್ಮ ಸಮುದಾಯದ ಮಕ್ಕಳ ಭವಿಷ್ಯ ಹಾಳಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾಧ್ಯವಾಗುವುದಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್’ನ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಸಯ್ಯದ್ ಸಾದತುಲ್ಲಾ ಹುಸೈನಿ ಅಭಿಪ್ರಾಯ ಪಟ್ಟರು.
ಅವರು ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಪದವಿ ಕಾಲೇಜಿನ ನೂತನ ಬ್ಲಾಕ್ ಉದ್ಘಾಟಿಸಿ ನಂತರ ಸಾಲಿಹಾತ್ ಮೈದಾನದಲ್ಲಿ ನಡೆದ “ಉಜ್ವಲ ಭವಿಷ್ಯಕ್ಕಾಗಿ” ಶೀರ್ಷಿಕೆಯಡಿ ನಡೆದ ಸಾಮುದಾಯಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು “ಮುಸ್ಲಿಂ ಸಮುದಾಯ ಇವತ್ತು ಬಿಕ್ಕಟ್ಟಿಗೆ ಸಿಲುಕಲು ಅತೀ ಮುಖ್ಯ ಕಾರಣ ನಮ್ಮ ಕನಸಿನ ನಿಷ್ಕೃಷ್ಟತೆಯಾಗಿದೆ.ನಾವು ಪ್ರತಿಯೊಂದು ವಿಭಾಗದಲ್ಲೂ ದೇಶಕ್ಕೆ ಕೊಡುಗೆ ನೀಡುವವರಾಗಬೇಕು. ಮುಸ್ಲಿಂ ಸಮುದಾಯ ಇತಿಹಾಸದಲ್ಲಿ, ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲೂ ಈ ದೇಶದ ಪಾಲಿಗೆ ಕರುಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್, ಮೌಲನ ಆದಂ ಸಾಹೇಬ್, ಕುಲ್ಸುಮ್ ಅಬುಬಕ್ಕರ್, ನುಝ್ಲಾ ಫಾತಿಮಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.