ಬೈಂದೂರು : ಮರವಂತೆಯ ಶ್ರೀ ಮಹಾರಾಜ ವರಾಹಸ್ವಾಮಿ ದೇವಾಲಯದಲ್ಲಿನ ಶಾಸನವನ್ನು ಉಪನ್ಯಾಸಕರಾದ ಗಣೇಶ್ ಪ್ರಸಾದ್ ಜಿ. ನಾಯಕ್ ಇವರ ಮಾಹಿತಿಯ ಮೇರೆಗೆ ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಮತ್ತು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ರಾಜಕತ್ತಿ, ದೀಪಕಂಬ ಹಾಗೂ ನಂದಿಯ ಉಬ್ಬು ಕೆತ್ತನೆಯಿದೆ. ಪ್ರಸ್ತುತ ಶಾಸನದಲ್ಲಿನ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಗೋಚರಿಸುವ ಲಿಪಿಯ ಆಧಾರದ ಮೇಲೆ ಈ ಶಾಸನವು 14ನೆಯ ಶತಮಾನಕ್ಕೆ ಸೇರಿರುತ್ತದೆ ಎಂದು ಸಂಶೋಧನಾರ್ಥಿಯು ತಿಳಿಸಿರುತ್ತಾರೆ.
ಶಾಸನವು ‘ಸ್ವಸ್ತಿಶ್ರೀ’ ಎಂಬ ಶುಭಸೂಚಕ ಪದದಿಂದ ಆರಂಭವಾಗಿದ್ದು, ಕಾಲಮಾನವು ಗೋಚರವಾಗುವುದಿಲ್ಲ. ಹಾಗೆಯೇ ಶಾಸನದಲ್ಲಿ ದೇವರ ಅಮ್ರುತಪಡಿ, ಚತುಸ್ಸೀಮೆ ಪದಗಳ ಉಲ್ಲೇಖವಿದ್ದು, ಇದೊಂದು ದಾನ ಶಾಸನವೆಂದು ಹಾಗೂ ದೇವಾಲಯದ ಇತಿಹಾಸವನ್ನು ತಿಳಿಸುವಲ್ಲಿ ಈ ಶಾಸನವು ಪ್ರಮುಖವಾಗಿದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದೆಂದು ಸಂಶೋಧನಾರ್ಥಿಯು ತಿಳಿಸಿರುತ್ತಾರೆ.
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಮಂಜುನಾಥ ನಂದಳಿಕೆ ಮತ್ತು ಕಮಲೇಶ್ ಹಾಗೂ ಉಪನ್ಯಾಸಕ ಶ್ರೀಕಾಂತ್ ಪೂಜಾರಿ ಮತ್ತು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್ ಹಾಗೂ ಸರ್ವ ಸದಸ್ಯರು ಸಹಕಾರ ನೀಡಿರುತ್ತಾರೆ.