ಉಡುಪಿ : ಚಾಲಕ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ತೋಡಿಗೆ ಉರುಳಿಬಿದ್ದ ಪರಿಣಾಮ ನಾಲ್ಕು ಮಂದಿ ಭಕ್ತಾದಿಗಳು ಗಾಯಗೊಂಡ ಘಟನೆ ಉಡುಪಿ ಕಲ್ಸಂಕ ಬಳಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದೆ.
ಆಟೋ ರಿಕ್ಷಾದಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚು, ಆರು ಮಂದಿ ಪ್ರಯಾಣಿಕರು ಪ್ರಯತ್ನಿಸುತ್ತಿದ್ದರು. ಈ ಪೈಕಿ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರೆಲ್ಲರೂ ಉಡುಪಿ ಕೃಷ್ಣದೇವರ ದರ್ಶನಕ್ಕಾಗಿ ಆಗಮಿಸಿದ್ದರು. ದರ್ಶನ ಪಡೆದು ಹಿಂತಿರುಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನ ಕೈಗೂ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಆಟೋದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಲ್ಸಂಕದಿಂದ ಕೃಷ್ಣಮಠದ ಪಾರ್ಕಿಂಗ್ ಸ್ಥಳಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ತಡೆಬೇಲಿ ಇಲ್ಲದ ಪರಿಣಾಮ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Accident
ಪಡುಬಿದ್ರಿ : ಕಾರೊಂದು ಬಸ್ ಹಿಂಬದಿಗೆ ಡಿಕ್ಕಿಯಾಗಿ ಪುಷ್ಪಲತಾ ಆಚಾರ್ಯ (56) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೇ ನಿಲ್ಲಿಸಿದ ಪರಿಣಾಮವಾಗಿ ಅದರ ಹಿಂದಿನಿಂದ ಹೆದ್ದಾರಿಯಲ್ಲೇ ಬಂದಿದ್ದ ಕಾರೊಂದು ಬಸ್ ಹಿಂಬದಿಗೆ ಡಿಕ್ಕಿಯಾಗಿದೆ.
ಇದೇ ಕಾರಲ್ಲಿ ಚಾಲಕನ ಬದಿಯಲ್ಲೇ ಕುಳಿತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಮಂಗಳೂರು : ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಮೃತಪಟ್ಟ ಘಟನೆ ಸೋಮವಾರ ಸುಳ್ಯ ತಾಲೂಕಿನ ಅಲೆಕ್ಕಾಡಿ ಸಮೀಪದ ಪಾರ್ಲ ಎಂಬಲ್ಲಿ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಕೃಷ್ಣಪ್ಪ ಗೌಡ ಎಂಬವರ ಪುತ್ರ ಪ್ರಕಾಶ (29) ಮೃತರು. ಕಡಬ ಮೂಲಕ ಸಂಸ್ಥೆಯ ವತಿಯಿಂದ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿಯ ಪಾರ್ಲ ಎಂಬಲ್ಲಿ ಕಾರ್ಮಿಕರು ಮೆಸ್ಕಾಂ ಪಂಜ ಸೆಕ್ಷನ್ ವ್ಯಾಪ್ತಿಯ ವಿದ್ಯುತ್ ಲೈನ್ ದುರಸ್ತಿ ಕೆಲಸ ಸೋಮವಾರ ಬೆಳಗ್ಗೆ ನಿರ್ವಹಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ಕಿರುಚಾಡಿದ್ದು, ಕಾರ್ಮಿಕರು ಬಂದು ನೋಡುವ ವೇಳೆ ಅವರು ಕಂಬದಲ್ಲೇ ಸಿಲುಕಿಕೊಂಡಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದವರು ಕಂಬ ಹತ್ತಿ ಕೆಳಗಿಸಿಳಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಕಾಶ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡ ಹೋದ ವೇಳೆ ಮೃತಪಟ್ಟಿರುವುದು ದೃಢಪಟ್ಟಿದೆ. ವಿದ್ಯುತ್ ಪ್ರವಹಿಸಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ತುಂಬೆ ತಿರುವಿನಲ್ಲಿ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ವಾಹನವೊಂದರ ಇಂಜಿನ್ನನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಉರುಳಿ ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ತುಂಬೆ ತಿರುವು ತುಂಬಾ ಅಪಾಯಕಾರಿಯಾಗಿದ್ದು ಅನೇಕ ವಾಹನಗಳು ಉರುಳಿ ಬೀಳುವುದರ ಬಗ್ಗೆ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಅನುಮತಿ ನೀಡಿ ವೇಗ ನಿಯಂತ್ರಣಕ್ಕೆ ರಬ್ಬರ್ ಹಂಪ್ಸ್ಗಳನ್ನು ಹಾಕಿದರೆ ಸ್ವಲ್ಪಮಟ್ಟಿಗೆ ಅಪಘಾತ ಕಡಿಮೆಯಾಗಬಹುದು ಎಂದು ಬಂಟ್ವಾಳ ಸಂಚಾರಿ ಎಸ್.ಐ.ಸುತೇಶ್ ತಿಳಿಸಿದ್ದಾರೆ.
ಉಡುಪಿ : ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಢಿಕ್ಕಿ ಹೊಡೆದು ಪಲ್ಟಿಯಾಯ್ತು. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡರು. ಕಾರು ಪಲ್ಟಿಯಾಗುವ ಸಂದರ್ಭ ದೊಡ್ಡ ಕಲ್ಲೊಂದು ಬೈಕಿನತ್ತ ಚಿಮ್ಮಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿ ರಸ್ತೆ ಮಧ್ಯೆ ವಿಭಜಕವಾಗಿ ಕಲ್ಲುಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಆ ಕಲ್ಲುಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರಾಫಿಕ್ ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಲಕ್ಷಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಪು : ಉದ್ಯಾವರ ಪಾಪನಾಶಿನಿ ಹೊಳೆಯ ರೈಲ್ವೇ ಟ್ರ್ಯಾಕ್ನ ಕಂಬದ ನಡುವೆ ರೈಲಿನಿಂದ ಬಿದ್ದು ಅಪರಿಚಿತ ಮಹಿಳೆಯೋರ್ವಳು ಮೃತ ಪಟ್ಟ ಘಟನೆ ಸಂಭವಿಸಿದೆ.
ಮಹಿಳೆಯ ಮೃತ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಢಿಕ್ಕಿಯ ರಭಸಕ್ಕೆ ರೈಲ್ವೇ ಟ್ರ್ಯಾಕ್ ಮತ್ತು ಹೊಳೆಗೆ ಹಾಕಿರುವ ಬೃಹತ್ ಕಂಬದ ಬೀಮ್ನೊಳಗೆ ಹೋಗಿ ಬಿದ್ದಿದೆ.
ಸಂಪೂರ್ಣ ಅಪ್ಪಚ್ಚಿಯಾಗಿದ್ದ ಮಹಿಳೆಯ ಮೃತದೇಹವನ್ನು ಕಾಪು ಪೊಲೀಸರು ಮತ್ತು ರೈಲ್ವೇ ಪೊಲೀಸರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಸಿಬಂದಿ ನಾಗರಾಜ್ ನೇತೃತ್ವದಲ್ಲಿ ಮೇಲಕ್ಕೆತ್ತಿ, ಉಡುಪಿ ಅಜ್ಜರಕಾಡು ಶವಾಗಾರಕ್ಕೆ ಸಾಗಿಸಿದರು.
ಕಾಪು ಎಸ್ಸೈ ಅಬ್ದುಲ್ ಖಾದರ್ ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಉಡುಪಿಯ ಅಂಬಾಗಿಲು ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ.
ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತಿದ್ದ ಕಾರು ಅತೀ ವೇಗದಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲುಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆಯೆಲ್ಲಾ ಕಾರಿನ ಬಿಡಿಭಾಗಗಳು ಹರಡಿಕೊಂಡು ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ.
ಇನ್ನು ಕಾರಿನ ಕಾರಿನ ಇಂಜಿನ್ ಬೇರ್ಪಟ್ಟು ಮಾರುದೂರ ಹೋಗಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದ್ದು ಪ್ರಯಾಣಿಸುತ್ತಿದ್ದವರಿಗೆ ಗಂಭೀರ ಗಾಯಗಳಾಗಿರುವ ಸಾಧ್ಯತೆಗಳಿವೆ.
ಪುತ್ತೂರು : ಕಾಡಾನೆಗಳನ್ನು ಬಂದ ದಾರಿಗೆ ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಬಾರೆಯ ಆನೆ ಸಲಹಾ ತರಬೇತಿ ಕೇಂದ್ರದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿ ಎಂಬಲ್ಲಿ ನಡೆದಿದೆ.
ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿಯಲ್ಲಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳೆರಡು ಪಕ್ಕದ ಅಂದ್ರಗೇರಿ ಕಾಡು ಪ್ರದೇಶದಲ್ಲಿದ್ದು ಅಲ್ಲಿನ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಆನೆಯನ್ನು ಬಂದ ದಾರಿಯಲ್ಲೆ ಸುರಕ್ಷಿತವಾಗಿ ಕಳುಹಿಸುವಲ್ಲಿ ದುಬಾರೆ ಆನೆ ಸಲಹಾ ಸಮಿತಿಯವರು ಪಟಾಕಿ ಸಿಡಿಸಿ ಆನೆಯನ್ನು ಬೆನ್ನಟ್ಟುತ್ತಿದ್ದರು.
ಈ ವೇಳೆ ದುಬಾರೆಯ ಆನೆ ತರಬೇತಿ ಪರಿಣಿತ ವ್ಯಕ್ತಿಯೊಬ್ಬರು ಪಟಾಕಿಗೆ ಬೆಂಕಿಕೊಟ್ಟು ಬಿಸಾಡುವ ವೇಳೆ ಪಕ್ಕದ ಗುಂಡಿಯಲ್ಲಿ ಮಲಗಿದ್ದ ಆನೆ ಏಕಾಏಕಿ ಎದ್ದಾಗ ಗಲಿಬಿಲಿಗೊಂಡ ವ್ಯಕ್ತಿ ತಾನು ಬಿಸಾಡಿದ ಪಟಾಕಿ ಮರಕ್ಕೆ ತಾಗಿ ತನ್ನ ಕಾಲಿಗೆ ಬಿದ್ದು ಸ್ಪೋಟಗೊಂಡು ಗಾಯಗೊಂಡಿದ್ದ. ತಕ್ಷಣ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮಣಿಪಾಲ : ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಬಳಿ ಡಿವೈಡರ್ಗೆ ಸ್ಕೂಟರ್ ಢಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಮಣಿಪಾಲದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಕೇಶವ (18) ಎಂದು ಗುರುತಿಸಲಾಗಿದೆ.
ಅವರು ಬೇರೆಯವರ ಸ್ಕೂಟರ್ ಅನ್ನು ಸವಾರಿ ಮಾಡಿಕೊಂಡು ಹೋಗಿದ್ದು ಜಿಲ್ಲಾಧಿಕಾರಿ ಕಚೇರಿಯ ಬಳಿ ಡಿವೈಡರ್ಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು.
ಕೂಡಲೇ ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ : ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಂಟೈನರ್ಗೆ ಖಾಸಗಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿಗೆ ಗಾಯಗಳಾಗಿವೆ. ಓರ್ವರಿಗೆ ಮೂಳೆ ಮುರಿತವುಂಟಾಗಿದ್ದು ಎಲ್ಲರೂ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೆಜಮಾಡಿಯ ಬಿಟ್ಟು ದಾಭಾದೆದುರಿನ ರಾಷ್ಟ್ರೀಯ ಹೆದ್ದಾರಿ 66ರ ತಿರುವೊಂದರಲ್ಲಿ ಈ ಅಪಘಾತವು ಸಂಭವಿಸಿದೆ.
ಗಾಯಾಳುಗಳನ್ನು ಭವಾನಿ, ಅಮೀನಾ, ಫಾತೀಮಾ, ಸಿಯಾ, ಸಚಿನ್, ಸನತ್ ಕುಮಾರ್, ಸಚಿನ್ ಎ., ಪೌಲ್, ಮಾತುಮ್, ಆನಂದ ಪ್ರಭು, ನಸೀಮ್ ಶೇಖ್, ಅಶೋಕ್, ನಂದನ, ಬಸ್ ಚಾಲಕ ವಿಕ್ರಮ್, ಸಿದ್ದು, ಅಮಿತ್, ಶಕುಂತಳಾ, ಪ್ರದೀಪ್, ಸುಮತಿ, ಈಶ್ವರಮೂರ್ತಿ ಎಂದು ಗುರುತಿಸಲಾಗಿದೆ. ಕಂಟೈನರ್ ಲಾರಿ ಚಾಲಕನು ಯಾವುದೇ ಮುನ್ಸೂಚನೆಗಳಿಲ್ಲದೇ ನಿಲ್ಲಿಸಿದಾಗ ಈ ಘಟನೆಯು ಸಂಭವಿಸಿದೆ. ಕಂಟೈನರ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.