ಉಡುಪಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ ಪ್ರಸಕ್ತ (2024-25ನೇ) ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಗಳಿಸಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಎಸೆಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದರು. ದ.ಕ. ಜಿಲ್ಲೆ 91.12 ಶೇ. ಫಲಿತಾಂಶ ದಾಖಲಿಸಿದ್ದರೆ, ಉಡುಪಿ ಜಿಲ್ಲೆ 89.96 ಫಲಿತಾಂಶ ದಾಖಲಿಸಿದೆ. 42.43 ಶೇ. ಫಲಿತಾಂಶ ದಾಖಲಿಸಿರುವ ಕಲಬುರಗಿ ಜಿಲ್ಲೆ ರಾಜ್ಯಕ್ಕೆ ಕೊನೆಯ ಸ್ಥಾನಿಯಾಗಿದೆ.
ಈ ವರ್ಷ ಒಟ್ಟು ಶೇ. 66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉಡುಪಿಯ ಸ್ವಸ್ತಿ ಕಾಮತ್ ಸಹಿತ 22 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಗಳಾಗಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದರು.