ಸಾಲಿಗ್ರಾಮ : ಇಲ್ಲಿನ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಚತುರ್ಥ ಶ್ರಾವಣ ಶನಿವಾರದಂದು ಲಕ್ಷ ತುಳಸಿ ಅರ್ಚನೆ ಮತ್ತು ನವಕ ಪ್ರದಾನ ಕಲಶಾಭಿಷೇಕವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಋತ್ವಿಜರ ವಿಷ್ಣು ಸಹಸ್ರನಾಮ ಪಠಣದ ನಂತರ ಅರ್ಚಕ ಶಿವಾನಂದ ಯಾನೆ ಬಾಬಣ್ಣ ಅಡಿಗರ ನೇತೃತ್ವದಲ್ಲಿ ಕಲ್ಪೋಕ್ತ ಪೂಜೆಯು ನಡೆಯಿತು.
ಮಂತ್ರಾಕ್ಷತೆಯ ಸಂದರ್ಭದಲ್ಲಿ ಅರ್ಚಕ ಜನಾರ್ದನ ಅಡಿಗರು ಪ್ರಥಮ ಶ್ರಾವಣ ಶನಿವಾರದಿಂದ ಮೊದಲ್ಗೊಂಡು ಕೊನೆಯ ವಾರದವರೆಗೆ ಕ್ಷೇತ್ರದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ವ್ಯಾಖ್ಯಾನವನ್ನು ನಡೆಸಿಕೊಟ್ಟರು.
ಕೋಟ ಮಹಾಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ ಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ವಾಚನವು ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ದಂಪತಿ, ಉಪಾಧ್ಯಕ್ಷ ಕುಡ್ನಲ್ಲಿ ಗಣೇಶ ಮೂರ್ತಿ ನಾವಡ ದಂಪತಿ ಸೇರಿದಂತೆ ಊರ ಪರವೂರ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಮಹಾ ಮಂಗಳಾರತಿಯ ನಂತರ ವ್ಯವಸ್ಥೆ ಮಾಡಲಾಗಿದ್ದ ಸಾರ್ವಜನಿಕ ಭೋಜನ ಪ್ರಸಾದವನ್ನು 8000ದಷ್ಟು ದಾಖಲೆಯ ಸಂಖ್ಯೆಯ ಭಕ್ತ ಬಾಂಧವರು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.