Sunday, January 19, 2025
Banner
Banner
Banner
Home » ಮಾಹೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ವಾಸಮಾರ್ಗ ನಿಭಾವಣೆಯ ಕಾರ್ಯಾಗಾರ

ಮಾಹೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ವಾಸಮಾರ್ಗ ನಿಭಾವಣೆಯ ಕಾರ್ಯಾಗಾರ

by NewsDesk

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ನಲ್ಲಿ ಸುಧಾರಿತ ವರ್ಣಪ್ರಭಾ ಮಾದರಿ [ಅಡ್ವಾನ್ಸ್‌ಡ್‌ ಆರೋರ ಮೊನೆಕ್ವಿನ್‌-advanced Aurora mannequin] ಯನ್ನು ಬಳಸಿ ‘ಸಮರ್ಪಕ ಶ್ವಾಸಮಾರ್ಗ ನಿಭಾವಣೆ’ [ಕಾಂಪ್ರಿಹೆನ್ಸಿವ್‌ ಏರ್‌ವೇ ಮೆನೇಜ್‌ಮೆಂಟ್‌] ಮಾಡುವ ಕುರಿತಾದ ವಿಶಿಷ್ಟ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕೆಎಂಸಿಯ ಡೀನ್‌ ಮತ್ತು ಪ್ರಾಧ್ಯಾಪಕರಾದ ಡಾ. ಪದ್ಮರಾಜ ಹೆಗ್ಡೆ ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ‘ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಶುಶ್ರೂಷೆಯ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಬಗ್ಗೆ ತರಬೇತಿಯ ಅಗತ್ಯತೆಯನ್ನು ಒತ್ತಿ ಹೇಳಿದರು. ನವತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಕುರಿತು ಸ್ನಾತಕೋತ್ತರ ಪದವೀಧರರನ್ನು ತರಬೇತಿಗೊಳಿಸಿ ಸ್ವಾಸ್ಥ್ಯಪೂರ್ಣ ಸಮಾಜ ಮತ್ತು ಸುಸ್ಥಿರ ಭವಿಷ್ಯದೊಂದಿಗೆ ರಾಷ್ಟ್ರವನ್ನು ಕಟ್ಟುವಲ್ಲಿ ಕೊಡುಗೆ ನೀಡಬೇಕು’ ಎಂದು ಅವರು ಹೇಳಿದರು.

ಮಣಿಪಾಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ಡೀನ್‌ ಡಾ. ಜುಡಿತ್‌ ಎ. ನೊರೊನ್ಹಾ ಅವರು ಮಾತನಾಡಿ, ‘ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ತರಬೇತಿಗೊಳಿಸುವ ಪ್ರಸ್ತುತ ಕಾರ್ಯಾಗಾರವು ಹೆಚ್ಚು ಅರ್ಥಪೂರ್ಣವಾಗಿದೆ. ಇದು ಸಮೂಹಪ್ರಯತ್ನದ ಮನೋಭಾವವನ್ನು ಕೂಡ ಉತ್ತೇಜಿಸುತ್ತದೆ’ ಎಂದರು.

ಮಣಿಪಾಲದ ಅಂತರ್‌ಕುಶಲ ಸುಧಾರಿತ ವ್ರಣ ಆರೈಕೆ ಕೇಂದ್ರ [ಮಣಿಪಾಲ್‌ ಸೆಂಟರ್‌ ಫಾರ್‌ ಇಂಟರ್‌ಪ್ರೊಫೆಶನಲ್‌ ಅಡ್ವಾನ್ಸ್‌ಡ್‌ ವೂಂಡ್‌ ಕೇರ್‌- Manipal Center for Interprofessional Advanced Wound Care] ಇದರ ಸಂಜಾಲಕರಾದ ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಕಾರ್ಯಾಗಾರದ ಮುಖ್ಯ ಆಶಯದ ಕುರಿತು ಮಾತನಾಡಿದರು. ಪ್ರಸ್ತುತ ಕೇಂದ್ರವು ಗಾಯಗಳ ಶುಶ್ರೂಷೆಯಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನದೊಂದಿಗೆ ಆರೋಗ್ಯ ಆರೈಕೆ ವಿಭಾಗದ ವೃತ್ತಿಪರರನ್ನು ತರಬೇತಿಗೊಳಿಸಲು ಚತುರಂಕ ಪ್ರಶಿಕ್ಷಣ [4-ಕ್ರೆಡಿಟ್‌ ಸರ್ಟಿಫಿಕೇಟ್‌ ಕೋರ್ಸ್‌] ನ್ನು ಮೊದಲಬಾರಿಗೆ ಉಪಕ್ರಮಿಸಿರುವುದನ್ನು ಪ್ರಕಟಿಸಿದರು.

ಡೆಲ್ಟಾ ಹೆಲ್ತ್‌ ಕೇರ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಏಕ್ತಾ ಮಲಿಕ್‌ ಅವರು ಆರೋರಾ ಮೊನೆಕ್ವಿನ್‌ನ್ನು ಪರಿಚಯಿಸಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರಾಯೋಗಿಕ ಕಲಿಕೆಯ ಹೊಸ ಮಾದರಿಯೊಂದು ಸೇರ್ಪಡೆಗೊಂಡಿರುವುದನ್ನು ವಿವರಿಸಿದರು. ಡಾ. ವಿಮಲ್‌ ಕೃಷ್ಣನ್‌, ಡಾ. ವಿಶಾಲ್‌ ಶಾನ್‌ಭಾಗ್‌. ಡಾ. ಪ್ರತಿಭಾ ತೋದೂರು, ಪ್ರಸನ್ನ ಕುಮಾರ, ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಈ ಹೊಸ ಮಾದರಿಯ ವೆದ್ಯಕೀಯ ಉಪಕರಣವನ್ನು ಬಳಸಿ, ಹೃದಯಾಘಾತ ಹೊಂದಿದ ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದರು. ಶ್ರೀನಿಧಿ ಜೋಗಿ ಮತ್ತು ಇಫೆನ್ಶಿಯಾ ಡಿ. ವಾಹ್‌ಲ್ಯಾಂಗ್‌ ಅವರು ಕಾರ್ಯಾಗಾರವನ್ನು ಆಯೋಜಿಸಿದ್ದು, ಸ್ನಾತಕೋತ್ತರ ಪದವಿ ಮತ್ತು ಶುಶ್ರೂಷಕಿ [ನರ್ಸ್‌] ಯರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಈ ಹೊಸ ಉಪಕ್ರಮವು ಅರೋರಾ ಮನುಷ್ಯಾಕೃತಿಯನ್ನು ಬಳಸಿಕೊಂಡು ಸಿಮ್ಯುಲೇಶನ್ ಆಧಾರಿತ ತರಬೇತಿಯ ಮೂಲಕ ಆರೋಗ್ಯ ವೃತ್ತಿಯ ಶಿಕ್ಷಣವನ್ನು ಹೆಚ್ಚಿಸುತ್ತದೆ. ಇದು ಹೃದಯ ಸ್ತಂಭನ ನಿರ್ವಹಣೆ, ARDS ಪ್ರತಿಕ್ರಿಯೆ ಮತ್ತು ಸುಧಾರಿತ ಶ್ವಾಸಮಾರ್ಗ ನಿರ್ವಹಣೆಯಂತಹ ನಿರ್ಣಾಯಕ ಕೌಶಲ್ಯಗಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಆರೋಗ್ಯ ವೃತ್ತಿಪರರಿಗೆ ಒದಗಿಸುತ್ತದೆ. ವಾಸ್ತವಿಕ ಸಿಮ್ಯುಲೇಶನ್‌ಗಳನ್ನು ಬಳಸಿಕೊಳ್ಳುವ ಮೂಲಕ, ತರಬೇತಿಯು ಉನ್ನತ ಮಟ್ಟದ ವೈದ್ಯಕೀಯ ಸನ್ನಿವೇಶಗಳಲ್ಲಿ ಸಾಮರ್ಥ್ಯ, ರೋಗ ನಿರ್ಣಯ ಮತ್ತು ರೋಗಿಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ನವೀನ ವಿಧಾನದ ಮೂಲಕ ವೈದ್ಯಕೀಯ ಸೇವೆಯಲ್ಲಿ ತಮ್ಮ ತಂತ್ರಗಳನ್ನು ಪರಿಷ್ಕರಿಸಬಹುದು ಮತ್ತು ನಿಯಂತ್ರಿತ, ಬೆಂಬಲಿತ ಪರಿಸರದಲ್ಲಿ ವಿಶ್ವಾಸವನ್ನು ಪಡೆಯಬಹುದು, ಅಂತಿಮವಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಕಾರಣವಾಗುತ್ತದೆ.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb