ಉಡುಪಿ : ಆಹಾರ ಅರಿಸಿಕೊಂಡು ಬಂದ ಹೆಬ್ಬಾವೊಂದು ಬೆಕ್ಕನ್ನು ನುಂಗಿ ತಡೆ ಗೋಡೆಯ ಬೇಲಿಗೆ ಹಾಕಲಾಗಿದ್ದ ಬಲೆಗೆ ಸಿಲುಕಿಕೊಂಡ ಘಟನೆ ಉಡುಪಿ ಹೆರ್ಗ ಗ್ರಾಮದ ಕೊಂಬೆಯ ಪ್ರಸನ್ನ ಭಂಡಾರಿ ಎಂಬವರ ಮನೆಯ ಅಂಗಳದಲ್ಲಿ ಶನಿವಾರ ನಡೆದಿದೆ.

ಬಲೆಗೆ ಸಿಲುಕಿಕೊಂಡ ಹೆಬ್ಬಾವನ್ನು ಕಂಡ ಮನೆಯವರು ಸ್ಥಳೀಯ ಉರಗ ರಕ್ಷಕ ಪ್ರಾಣೇಶ್ ಪರ್ಕಳ ಅವರಿಗೆ ಮಾಹಿತಿ ತಿಳಿಸಿದರು. ಅರಣ್ಯ ಇಲಾಖೆಯ ಉಪ ವಲಯ ಅಧಿಕಾರಿ ಸುರೇಶ್ ಗಾಣಿಗ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಲೆ ಕತ್ತರಿಸಿ ಹೆಬ್ಬಾವನ್ನು ಬಿಡಿಸಲಾಯಿತು.
ಗಾಬರಿಗೊಂಡ ಹೆಬ್ಬಾವು ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿ ಹೊಟ್ಟೆಯ ತೂಕ ಇಳಿಸುವ ಸಲುವಾಗಿ ಆಹಾರವನ್ನು ಹೊರ ಹಾಕಿದ್ದು, ಇಡೀ ಬೆಕ್ಕಿನ ಶರೀರವನ್ನು ವಾಂತಿ ಮಾಡಿತ್ತು. ನಂತರ ಚಿಕಿತ್ಸೆ ನೀಡಿ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡಲಾಯಿತು.