ಉಡುಪಿ : ವಿಧಾನಪರಿಷತ್ ಉಪ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಹಾಗೂ ಚುನಾವಣಾ ಆಯೋಗ ನೀಡುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಧಾನಪರಿಷತ್ ಉಪ ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯ ಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕರಿಸಬೇಕು ಎಂದರು.
ಜನಪ್ರತಿನಿಧಿಗಳು ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಮತದಾರರ ಭಾಗವಾಗಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯರನ್ನು, ಯಾವುದೇ ಸಚಿವರು, ಅಧಿಕೃತವಾಗಿ ಸಭೆ, ವೀಡಿಯೋ ಕಾನ್ಫರೆನ್ಸ್‌ಗೆ ಕರೆಯುವಂತಿಲ್ಲ. ಸ್ಥಳೀಯ ಸಂಸ್ಥೆಗಳ ವಾಡಿಕೆಯ ಸಭೆಗಳು ಅಗತ್ಯವಿದ್ದಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಪಡೆದು ನಡೆಸಬಹುದಾಗಿದೆ ಎಂದರು.
ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಯಾವುದೇ ಹೊಸ ನೀತಿ ಘೋಷಣೆ ಅಥವಾ ಕಾರ್ಯಕ್ರಮವನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಸರಕಾರಿ ಇಲಾಖೆಗಳು ಪ್ರಾರಂಭಿಸುವಂತಿಲ್ಲ ಎಂದ ಅವರು, ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡುವಂತಿಲ್ಲ ಎಂದರು.