ಉಡುಪಿ : ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿಗಳಲ್ಲಿ ನಾನು, ನನ್ನಿಂದ ಎಂಬ ಭಾವನೆ ಬರಬಾರದು ಬದಲಿಗೆ ನಾವು ಎಂಬುದು ಬಂದರೆ ಸಂಸ್ಥೆ ಗಟ್ಟಿಯಾಗುತ್ತದೆ. ಸಂಸ್ಥೆಗಾಗಿ ಸಮರ್ಪಣಾ ಭಾವನೆಯಿಂದ ಪದಾಧಿಕಾರಿಗಳು ಕೆಲಸ ಮಾಡಿದರೆ ಮಾತ್ರ ಸಂಸ್ಥೆ ಬೆಳೆಯಬಲ್ಲದು. ಈ ನಿಟ್ಟಿನಲ್ಲಿ ನಾಡಿನಾದ್ಯಂತ ಸಾಂಸ್ಕೃತಿಕ ಕಂಪನ್ನು ಹರಡಿದ ಸುರಭಿ ಬೈಂದೂರು ಸಂಸ್ಥೆ ರಜತ ಮಹೋತ್ಸವವನ್ನು ಆಚರಿಸುತ್ತಿರುವುದು ಸಂಸ್ಕೃತಿ ಪ್ರಿಯರು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಪ್ರವರ್ತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಮುಂಭಾಗದಲ್ಲಿ ನಡೆದ ಸುರಭಿ ಬೈಂದೂರು ಸಂಸ್ಥೆಯ ರಜತಯಾನದ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಮೂರು ದಿನಗಳ “ಗೊಂಬೆ-ಯಕ್ಷ ವೈಭವ” ಕಾರ್ಯಕ್ರಮದ ಸಮಾರೋಪದಲ್ಲಿ ಸಮಾರೋಪ ಭಾಷಣ ಮಾಡಿದರು.
ಸಂಘಟನೆಯನ್ನು 25 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸುವುದು ಅತೀ ಕಷ್ಟದ ಕೆಲಸ. ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಜನರ ಸಹಕಾರವಿದ್ದರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸುರಭಿಯ ಸಾಧನೆ ಅಭಿನಂದನೀಯ. ಅಂದರೆ ಸುರಭಿ ಜನಮಾನಸವನ್ನು ಮುಟ್ಟಿದೆ ಎಂದರ್ಥ. ಬೈಂದೂರಿನಲ್ಲಿ ಸಾಂಸ್ಕೃತಿಕ ಕಲೆಗಳನ್ನು ಜನರಿಗೆ ಮುಟ್ಟಿಸುತ್ತಿರುವ ಸುರಭಿ ಹಾಗೂ ಲಾವಣ್ಯ ಸಂಸ್ಥೆಗಳು ಅಭಿನಂದನಾರ್ಹರು ಎಂದರು.
ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಸರಕಾರ ನೀಡುವ ಅನುದಾನವನ್ನು ಯೋಗ್ಯರಿಗೆ ಮುಟ್ಟುವ ಕೆಲಸವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ನಾನು ಮಾಡುತ್ತಿದ್ದೇನೆ. ಅದೇ ರೀತಿಯಲ್ಲಿ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಿ ನಾಡಿನಾದ್ಯಂತ ಜಾನಪದ ವೈಭವದ ಮೂಲಕ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಿ ಪ್ರೋತ್ಸಾಹಿಸುತ್ತಿದ್ದೇನೆ. ಜಾನಪದ ಕಲಾವಿದರು, ಸಂಘಟಕರನ್ನು ಗುರುತಿಸಿ ಪ್ರಶಸ್ತಿ, ಸನ್ಮಾನಿಸುವ ಕಾರ್ಯ ನನ್ನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸುತ್ತಿದ್ದೇನೆ. ಈ ಕೊಡುಗೆಗಾಗಿ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ನನ್ನನ್ನು ಅಭಿನಂದಿಸಿದೆ ಎಂದರು.
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತಲು ಅವರಿಗೆ ಯಕ್ಷಗಾನ, ರಂಗಶಿಕ್ಷಣವನ್ನು ನೀಡಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪ್ರಾರಂಭಿಸಲಾದ ಯಕ್ಷ ಶಿಕ್ಷಣವನ್ನು ಇಂದು ಉಡುಪಿ ಜಿಲ್ಲೆಯ 900 ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅದೇ ರೀತಿ ರಂಗಭೂಮಿ ಉಡುಪಿ ಅಧ್ಯಕ್ಷನಾಗಿ ಇದೀಗ ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳಿಗೆ ನಾಟಕದ ಬಗ್ಗೆ ಆಸಕ್ತಿ ಹುಟ್ಟಿಸಲು ರಂಗ ಶಿಕ್ಷಣವನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ 12 ಶಾಲೆಗಳಲ್ಲಿ ಕಾರ್ಯ ಆರಂಭಗೊoಡಿದೆ. ಮುಂದೆ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಇತಿಹಾಸ ತಜ್ಞ ಡಾ.ಜಗದೀಶ್ ಶೆಟ್ಟಿ ಅವರು ಮಾತನಾಡಿ, ಯಾವುದೇ ಸಂಸ್ಥೆ ತನ್ನ ರಜತ ಮಹೋತ್ಸವವನ್ನು ಆಚರಿಸುತ್ತಿದೆ ಎಂದರೆ ಅದು ಎಷ್ಟೊಂದು ಸಶಕ್ತವಾಗಿ ಬೆಳೆದಿದೆ ಎಂಬುದನ್ನು ಸೂಚಿಸುತ್ತದೆ. ಈ ದಿಸೆಯಲ್ಲಿ ಸುರಭಿ ಸಂಸ್ಥೆ ಮುನ್ನಡೆದಿರುವುದು ಸಂತೋಷ ತಂದಿದೆ ಎಂದರು.
ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, 25 ವರ್ಷಗಳ ಹಿಂದೆ ಸ್ಥಾಪಿತಗೊಂಡ ಸುರಭಿ, ಮಕ್ಕಳಿಗೆ ಭರತನಾಟ್ಯ, ಸಂಗೀತ, ಚಿತ್ರಕಲೆ, ಜಾದೂ , ನಾಟಕ ಮೊದಲಾದವುಗಳನ್ನು ಕಲಿಸಿ, ದೇಶದ ವಿವಿಧೆಡೆಗಳಲ್ಲಿ ಪ್ರದರ್ಶನ ಮಾಡಿ ಪ್ರತಿಭೆಯನ್ನು ನಾಡಿಗೆ ಪಿರಚಯಿಸಿದೆ. ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತೀ ವರ್ಷ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಮಾಡಲು ‘ಸುರಭಿ ಜೈಸಿರಿ ‘ ಕಾರ್ಯಕ್ರಮವನ್ನು ನಡೆಸುತ್ತಿದೆ. ಅಲ್ಲದೆ ದೇಶದ ವಿವಿಧೆಡೆಯ ಸಾಂಸ್ಕೃತಿಕ ಕಲೆಗಳನ್ನು ಬೈಂದೂರಿನ ಜನತೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಗೊಂಬೆಯಾಟ, ತೊಗಲು ಗೊಂಬೆಯಾಟ ಹಾಗೂ ಯಕ್ಷಗಾನ ವೈಭವದ ಮೂಲಕ ೩ ದಿನಗಳ ಕಾರ್ಯಕ್ರಮ ನಡೆಸಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಸುವ ಚಿಂತನೆ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಸುರಭಿ ಸಂಸ್ಥಾಪಕ ಸುಧಾಕರ್, ರಾಜ್ಯ ಜಾನಪದ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ ಗಿರೀಶ್ ಬೈಂದೂರು, ಉದ್ಯಮಿ ಗಣೇಶ್ ಗಾಣಿಗ, ಇನ್ನರ್ ವೀಲ್ ಕ್ಲಬ್ ಬೈಂದೂರು ಕಾರ್ಯದರ್ಶಿ ಚೈತ್ರಾ ಯಡ್ತರೆ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಚಲನ ಹೊಸೂರು ಅಧ್ಯಕ್ಷ ನಾರಾಯಣ ಮರಾಟಿ, ಸಮಷ್ಟಿ ಪ್ರತಿಷ್ಠಾನದ ಕಾರ್ಯದರ್ಶಿ ಸುನೀಲ್ ಎಸ್. ಹಾಜರಿದ್ದರು.
ಸುರಭಿ ಉಪಾಧ್ಯಕ್ಷ ಲಕ್ಷ್ಮಣ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ವಂದಿಸಿದರು.