ಉಡುಪಿ : ಉಡುಪಿ ಜಿಲ್ಲೆಯಲ್ಲಿ 51.77 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಒಟ್ಟು 413 ಹೊಸಕಾಲು ಸಂಕಗಳ ನಿಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಈ ಹಿಂದೆ ಕಾಲುಸಂಕಗಳ ನಿರ್ಮಾಣಕ್ಕಾಗಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ, ಮುಂಬರುವ ಮೂರು ವರ್ಷಗಳ ಒಳಗೆ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಉಡುಪಿ ಜಿಲ್ಲೆಗೆ ಆಗಮಿಸಿದ ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ 29.62 ಕೋಟಿ ರೂ.ವೆಚ್ಚದಲ್ಲಿ 179, ಕಾರ್ಕಳ ತಾಲೂಕಿನಲ್ಲಿ 10.04 ಕೋಟಿ ರೂ.ವೆಚ್ಚದಲ್ಲಿ 100, ಕುಂದಾಪುರ ತಾಲೂಕಿನಲ್ಲಿ 6.64 ಕೋಟಿ ರೂ.ವೆಚ್ಚದಲ್ಲಿ 73, ಕಾಪು ತಾಲೂಕಿನಲ್ಲಿ 3.79 ಕೋಟಿ ರೂ.ವೆಚ್ಚದಲ್ಲಿ 45 ಹಾಗೂ ಉಡುಪಿ ತಾಲೂಕಿನಲ್ಲಿ 1.67 ಕೋಟಿ ರೂ.ವೆಚ್ಚದಲ್ಲಿ 16 ಕಾಲುಸಂಕಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.